ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ವಿವಿಧೆಡೆ ನಾರಿಯರ ಪ್ರತಿಭಟನೆ

Last Updated 12 ಜುಲೈ 2017, 9:23 IST
ಅಕ್ಷರ ಗಾತ್ರ

ತುಮಕೂರು: ಮಳೆಗಾಲ ಆರಂಭವಾದರೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿಲ್ಲ. ಸಮರ್ಪಕವಾಗಿ ನೀರು ಒದಗಿಸುವಂತೆ ಆಗ್ರಹಿಸಿ ಪಾವಗಡ, ಮಧುಗಿರಿ ಹಾಗೂ ಶಿರಾ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದ ವಾರ್ಡ್‌ಗಳಲ್ಲಿ ಸೋಮವಾರ ಸ್ಥಳೀಯ ಆಡಳಿತಗಳ ವಿರುದ್ಧ ಜನರು ಪ್ರತಿಭಟನೆ ನಡೆಸಿದರು.

ಎಲ್ಲ ಪ್ರತಿಭಟನೆಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ‘ನೀರು ಕೊಡಿ’ ಎಂದು ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಆಗ್ರಹಿಸಿದರು.

ಶಿರಾ ವರದಿ: ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರರು ತಾ.ಪಂ ಕಚೇರಿ ಎದುರು ಪ್ರತಿಭಟಿಸಿದರು.

ಗ್ರಾಮದ 3ನೇ ವಾರ್ಡ್ ಮತ್ತು ಕೆಲವು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಿ, ನೀರಿನ ಸಂಪರ್ಕ ಒದಗಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮಹಮದ್ ಮುಬೀನ್ ಸ್ಥಳಕ್ಕೆ ಬಂದು ವಾರದ ಒಳಗೆ ಕೊಳವೆ ಬಾವಿ ಕೊರೆಸಿ ನೀರು ನೀಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ವಾಪಸು ಪಡೆಯಲಾಯಿತು.

ಸಮಿತಿ ತಾಲ್ಲೂಕು ಸಂಚಾಲಕ ಟೈರ್ ರಂಗನಾಥ್, ರಾಜ್ಯ ಸಂಘಟನಾ ಸಂಚಾಲಕ ಬೆಲ್ಲದಮಡು ಭರತ್ ಕುಮಾರ್, ತಾಲ್ಲೂಕು ಸಂಘಟನಾ ಸಂಚಾಲಕ ಶಿವಾಜಿನಗರ ತಿಪ್ಪೇಸ್ವಾಮಿ, ಬೀರನಹಳ್ಳಿ ಹನುಮಂತರಾಯಪ್ಪ, ಕೆ.ರಾಜು, ಕಾರೇಹಳ್ಳಿ ರಂಗನಾಥ್, ನೀರಕಲ್ಲು ನರಸಿಂಹಯ್ಯ, ಮಂಜುನಾಥ್, ಕೋರ್ಟ್ ಶಿವಣ್ಣ, ಬರಗೂರು ಗ್ರಾಮ ಶಾಖೆ ಸಂಚಾಲಕ ಲೋಕೇಶ್, ಸಣ್ಣಪುಟ್ಟಮ್ಮ, ಪಂಕಜಮ್ಮ, ಲಕ್ಷ್ಮಮ್ಮ, ಹಂಸವೇಣಿ, ಮಂಜುನಾಥ್, ಈರಣ್ಣ, ರಂಗಸ್ವಾಮಿ, ಮಂಜುನಾಥ್, ಹಾಲಪ್ಪ, ಶ್ರೀರಂಗಪ್ಪ ಇದ್ದರು.
ಪಾವಗಡ ವರದಿ: ಪಟ್ಟಣದ ಕುಮಾರಸ್ವಾಮಿ ಬಡಾವಣೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು  ಖಾಲಿ ಕೊಡ ಹಿಡಿದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.

‘ಬಡಾವಣೆಯಲ್ಲಿ ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ಇದೆ. ಮನೆ ಮಂದಿಯೆಲ್ಲ ದೂರದಿಂದ ನೀರು ತರಬೇಕಿದೆ. ನೀರು ಪೂರೈಸಲು ಅಳವಡಿಸಿರುವ ಪೈಪ್‌ಗಳನ್ನು ಕಿತ್ತು ಹಾಕಲಾಗಿದೆ. ಪುರಸಭೆ ಅಧಿಕಾರಿಗಳಿಗೂ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಶೀಘ್ರ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನೀರು ಸಂಗ್ರಹಿಸಲು ಸಂಗ್ರಹಣಾ ತೊಟ್ಟಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು. ಮಿಲನ್, ಅಣ್ಣಪ್ಪ, ನಾಗರಾಜಯ್ಯ, ರಮೇಶ, ವೆಂಕಟೇಶಪ್ಪ, ಸತ್ಯಪ್ಪ, ಪ್ರೇಮಕುಮಾರ್, ಯಶೊಧಮ್ಮ, ರಾಧಮ್ಮ, ಭಾಗ್ಯಮ್ಮ ಇದ್ದರು.

ಮರೂರಿನಲ್ಲಿ ಧರಣಿ: ತಾಲ್ಲೂಕಿನ ಮರೂರು ಗ್ರಾಮಸ್ಥರು ಅರಸೀಕೆರೆ ಗ್ರಾ. ಪಂಕಚೇರಿ ಮುಂದೆ ಖಾಲಿ ಬಿಂದಿಗೆಗಳ ಜೊತೆ ಪ್ರತಿಭಟಿಸಿದರು. ‘ಗ್ರಾಮದಲ್ಲಿ ಸತತ ಆರು ತಿಂಗಳಿಂದ ನೀರಿನ ಅಭಾವವಿದೆ. ಹೊಲ ಗದ್ದೆಗಳಿಂದ ನೀರು ತರಬೇಕಿದೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದ ಕಾರಣ ತೋಟಗಳ ಮಾಲೀಕರು ನೀರು ಕೊಂಡೊಯ್ಯಲು ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ನೀರಿಗಾಗಿ ಪರಿತಪಿಸುವಂತಾಗಿದೆ’ ಎಂದು ಆರೋಪಿಸಿದರು.

ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಒಂದೆರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಸದಸ್ಯ ಹನುಮಂತರಾಯಪ್ಪ, ಚಂದ್ರಶೇಖರ್, ರವಿ, ಈರಣ್ಣ, ಚನ್ನೀರಮ್ಮ, ರಂಗಮ್ಮ, ಚಿಕ್ಕಮ್ಮ, ಸ್ವಾರಕ್ಕ, ರಂಗಮ್ಮ ಇದ್ದರು.

ಮಧುಗಿರಿ ವರದಿ:  ಸಮರ್ಪಕವಾಗಿ ನೀರು ಪೂರೈಸುವಂತೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಮರುವೇಕೆರೆ ಗ್ರಾಮಸ್ಥರು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು. ‘ಗ್ರಾಮದಲ್ಲಿ 5 ಕೊಳವೆ ಬಾವಿಗಳಿದ್ದರೂ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಅಧಿಕಾರಿಗಳು ತಕ್ಷಣ ಕುಡಿಯುವ ನೀರು  ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆಯರು ಒತ್ತಾಯಿಸಿದರು.

‘ಪಂಚಾಯಿತಿ ವ್ಯಾಪ್ತಿಯ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿದೆ. ಸೊಳ್ಳೆಗಳ ಆವಾಸ ಕೇಂದ್ರಗಳಾಗಿವೆ. ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಿ 4 ವರ್ಷಗಳಾಗಿವೆ. ಇದರಿಂದ ಜನರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ’ ಎಂದು ದೂರಿದರು.  ರಾಮಕ್ಕ, ತಿಮ್ಮಕ್ಕ, ಕೋಮಲರಾಣಿ, ಕುಮಾರ್, ವೆಂಕಟಮ್ಮ, ಸರೋಜಮ್ಮ, ಶಕುಂತಲಮ್ಮ, ರವಿ, ಕುಮಾರ್, ಮೂರ್ತಿ, ಗೋಪಾಲಣ್ಣ , ಅಶೋಕ, ನವೀನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT