ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ವಯೋಮಿತಿ ಹೆಚ್ಚಾದರೆ ಜನಸಂಖ್ಯೆ ನಿಯಂತ್ರಣ

Last Updated 12 ಜುಲೈ 2017, 9:25 IST
ಅಕ್ಷರ ಗಾತ್ರ

ತುಮಕೂರು: ‘ಮದುವೆಯಾಗುವ ಹೆಣ್ಣು ಮತ್ತು ಗಂಡಿನ ಕನಿಷ್ಠ ವಯಸ್ಸನ್ನು ಕ್ರಮವಾಗಿ ಕನಿಷ್ಠ 20 ಮತ್ತು 25 ವರ್ಷಕ್ಕೆ ಹೆಚ್ಚಿಸಬೇಕು. ಅದರಿಂದ ನಮ್ಮ ದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಜನಸಂಖ್ಯೆ ನಿಯಂತ್ರಣ ಸಾಧ್ಯವಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಜನಸಂಖ್ಯಾ ದಿನಾಚರಣೆ ಎಂಬುದು ಸಂತೋಷ ಪಡುವ ಕಾರ್ಯಕ್ರಮವೇನೂ ಅಲ್ಲ. ಜನಸಂಖ್ಯೆ ಹೆಚ್ಚಾಗಿ ಅಸಮತೋಲನವಾಗುತ್ತಿದೆ. ದೇಶದಲ್ಲಿ ಇರುವ ಸಂಪನ್ಮೂಲಕ್ಕೂ ಜನಸಂಖ್ಯೆ ಪ್ರಮಾಣಕ್ಕೂ ಹೋಲಿಕೆ ಮಾಡಿದರೆ ಅಜಗಂಜಾಂತರವಿದೆ. ಮನೆ, ಮೂಲಸೌಕರ್ಯ, ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ ಎಂದರು.

ನಮ್ಮ ದೇಶದಲ್ಲಿರುವ ಸಂಪನ್ಮೂಲಕ್ಕೆ ತಕ್ಕಂತೆ ಜನಸಂಖ್ಯೆ ನಿಯಂತ್ರಣ ಮಾಡದೇ ಇದ್ದರೆ ಆರ್ಥಿಕ ಸಂಕಷ್ಟ ಎದುರಾಗಿ ದೇಶಕ್ಕೆ ಭವಿಷ್ಯದಲ್ಲಿ ವಿಪತ್ತು ಕಾದಿದೆ ಎಂದು ಎಚ್ಚರಿಕೆ ನೀಡಿದರು.

ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ತಾಯಿ ರಕ್ತಹೀನತೆ, ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವುದು ಕಾಣುತ್ತಿದೆ. ಮಕ್ಕಳಿಗೂ ಅಪೌಷ್ಟಿಕತೆ ಕಾಡುತ್ತಿದೆ. ಒಂದೇ ಮಗುವಿದ್ದರೆ ಎಷ್ಟೇ ಬಡವರಿದ್ದರೂ ಆರೈಕೆ ಚೆನ್ನಾಗಿ ಮಾಡಬಹುದು. ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಚೀನಾ ದೇಶ ಜನಸಂಖ್ಯೆಯಲ್ಲಿ ಮುಂದಿದ್ದರೂ ನಿಯಂತ್ರಣದ ಬಗ್ಗೆ ದಶಕಗಳ ಹಿಂದೆಯೇ ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಿದೆ. ಹೀಗಾಗಿ, ಆ ದೇಶಕ್ಕೆ ಜನಸಂಖ್ಯೆ ಹೊರೆಯಾಗಿಲ್ಲ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಜಪಾನ್ ದೇಶದಲ್ಲಿ ಹತ್ತು ವರ್ಷಗಳ ಹಿಂದೆ 8 ಕೋಟಿ ಜನಸಂಖ್ಯೆ ಇತ್ತು. ಈಗ 13 ಕೋಟಿ ಆಗಿದೆ. ಆ ದೇಶದ ಪ್ರಕಾರ ಹೆಚ್ಚು ಜನಸಂಖ್ಯೆ ಇದ್ದರೆ ದೇಶದ ಅಭಿವೃದ್ಧಿ ಎಂಬ ನಂಬಿಕೆಯಿಂದ ಜನಸಂಖ್ಯೆ ಹೆಚ್ಚಳಕ್ಕೆ ಒತ್ತು ನೀಡಿದೆ ಎಂದು ಹೇಳಿದರು.

ಆದರೆ, ಚೀನಾ ದೇಶ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆ ಹೊಂದಿದ್ದರೂ ಜನಸಂಖ್ಯೆ ನಿಯಂತ್ರಣಕ್ಕೆ ಅಲ್ಲಿನ ಪ್ರಜೆಗಳೇ ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದಾರೆ. ದೇಶದ ಅಭಿವೃದ್ಧಿಗೆ ಅಲ್ಲಿನ ಜನರು ನಿರೀಕ್ಷೆ ಮೀರಿ ಶ್ರಮಿಸುತ್ತಾರೆ. ಹೀಗಾಗಿ, ಜನಸಂಖ್ಯೆ ಹೆಚ್ಚಾದರೂ ಅಭಿವೃದ್ಧಿ ಸಾಧಿಸಿರುವುದರಿಂದ ಆ ದೇಶ ಯಾವುದೇ ಬಿಕ್ಕಟ್ಟಿಗೆ ಸಿಲುಕಿಲ್ಲ ಎಂದರು.

ನಮ್ಮ ದೇಶದಲ್ಲೂ ನಾಗರಿಕರು ದೇಶದ ಅಭಿವೃದ್ಧಿಗೆ ಪ್ರಾಮಾಣಿಕರಾಗಿ ಕಟಿಬದ್ಧರಾಗಬೇಕು. ಸರ್ಕಾರವೇ ಪ್ರತಿ ಕುಟುಂಬಕ್ಕೆ ಎಷ್ಟು ಮಕ್ಕಳಿರಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಬಳಿಕ 70 ವರ್ಷಗಳಲ್ಲಿ 100 ಕೋಟಿ ಜನಸಂಖ್ಯೆ ಹೆಚ್ಚಾಗಿದೆ. ಸಂಪನ್ಮೂಲ ಕಡಿಮೆಯಾಗಿದೆ. ಕೆಲವೇ ವರ್ಷದಲ್ಲಿ ಚೀನಾ ದೇಶವನ್ನೂ ಮೀರಿ ಮೊದಲನೇ ಸ್ಥಾನಕ್ಕೆ ಭಾರತ ತಲುಪಲಿದೆ. ಇದು ದೇಶಕ್ಕೆ ಅಪಾಯಕಾರಿಯಾದುದು ಎಂದು ಆತಂಕ ವ್ಯಕ್ತಪಡಿಸಿದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಕೆ.ಕುಲಕರ್ಣಿ ಮಾತನಾಡಿ, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 30ರಷ್ಟು ಯುವಕರಿದ್ದಾರೆ ಇವರು ಬದಲಾವಣೆಯ ಹರಿಕಾರರಾಗಬೇಕು ಎಂದರು.

ಭಾರತದ ಜನಸಂಖ್ಯೆ ಸ್ವಾತಂತ್ರ್ಯಕ್ಕೆ ಮೊದಲು (ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ) 27ಕೋಟಿ ಇತ್ತು. ಆದರೆ ಈಗ ನಮ್ಮ ಜನಸಂಖ್ಯೆ 134 ಕೋಟಿಗಳಾಗಿದೆ. ವಿಶ್ವದ ಪ್ರತಿ 6 ಜನರಲ್ಲಿ ಒಬ್ಬ ಭಾರತೀಯರಿದ್ದಾರೆ ಎಂದರು.

ಜಾಥಾ: ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಿಂದ ವಿವಿಧ ನರ್ಸಿಂಗ್ ಕಾಲೇಜುಗಳು, ವಿವಿಧ ಸಂಘ ಸಂಸ್ಥೆಗಳಿಂದ ಜನಸಂಖ್ಯೆ ನಿಯಂತ್ರಣ ಜಾಗೃತಿ ಜಾಥಾ ನಡೆಯಿತು. ರಫೀಕ್ ಅಹಮ್ಮದ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT