ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿದೇವತೆ ಚಾಮುಂಡೇಶ್ವರಿ ಕರಗ ಸಂಭ್ರಮ

Last Updated 12 ಜುಲೈ 2017, 10:13 IST
ಅಕ್ಷರ ಗಾತ್ರ

ರಾಮನಗರ: ಶಕ್ತಿದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಮಂಗಳವಾರ ಅದ್ದೂರಿ ಚಾಲನೆ ದೊರೆಯಿತು. ರಾತ್ರಿಯಿಡೀ ಕರಗವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬುಧವಾರ ಬೆಳಿಗ್ಗೆ ಮರಳಿ ದೇವಸ್ಥಾನ ಸೇರಿತು. ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಭಕ್ತರು ಸೋಮವಾರ ರಾತ್ರಿಯಿಂದಲೇ ಜಮಾಯಿಸಿದ್ದರು. ಹೊತ್ತು ಕಳೆದಂತೆಲ್ಲ ದರ್ಶನ ಪಡೆಯುವವರ ಸಾಲು ಬೆಳೆಯುತ್ತಲೇ ಹೋಯಿತು.

ಬಂದ ಭಕ್ತರಲ್ಲಿ ಹಲವರು ಅಮ್ಮನವರಿಗೆ ತಂಬಿಟ್ಟಿನ ಆರತಿ ಬೆಳಗಿದರು. ಶಕ್ತಿ ಸ್ವರೂಪಿಣಿಯಾದ ಚಾಮುಂಡೇಶ್ವರಿಯನ್ನು ಈ ಬಾರಿ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು. ವಿದ್ಯುತ್‌ ದೀಪಗಳ ಕಂಗೊಳಿಸುವ ಬೆಳಕಲ್ಲಿ ಮೂರ್ತಿಯ ಪ್ರಭೆ ವಿಜೃಂಭಿ ಸುತ್ತಿತ್ತು. ಭದ್ರತೆಯ ಉಸ್ತುವಾರಿ ಹೊತ್ತ ಪೊಲೀಸರು ಭಕ್ತರನ್ನು ನಿಯಂತ್ರಿಸಿ ದೇವರ ದರ್ಶನಕ್ಕೆ ಅನುಕೂಲ ಮಾಡಿ ಕೊಟ್ಟರು.

ರಾಮನಗರದ ಜತೆಗೆ ನೆರೆಯ ಚನ್ನಪಟ್ಟಣ, ಮಾಗಡಿ, ಕನಕಪುರ, ಮಂಡ್ಯ ಭಾಗದಿಂದಲೂ ಸಾವಿರಾರು ಭಕ್ತರು ಕರಗ ನೋಡುವ ಸಲುವಾಗಿ ಬಂದಿದ್ದರು. ಬಂದವರಿಗೆಂದು ದೇವ ಸ್ಥಾನದಲ್ಲಿ ಪ್ರಸಾದದ ವಿನಿ ಯೋಗವೂ ಇತ್ತು. ಕರಗವು ಸಾಗುವ ಬೀದಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು.

ದೇವಸ್ಥಾನದ ಮುಂಭಾಗ ಇರುವ ಮರದ ಕೆಳಗೂ ಪೂಜೆ ಸಲ್ಲಿಸಿ ಕೆಲವರು ಹರಕೆ ತೀರಿಸಿದರು. ದೇಗುಲದ ಮುಂಭಾಗ ತೋಡಲಾಗಿದ್ದ ಕೊಂಡ ಹಾಯುವ ಹೊಂಡಕ್ಕೆ ಉಪ್ಪನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಸಂಜೆ ಸಿಂಗ್ರಾಭೋವಿ ದೊಡ್ಡಿಯ ದೇಗುಲದಿಂದ ತಂದ ಬೆಂಕಿಯನ್ನು ಹೊಂಡದಲ್ಲಿ ಹಾಕುವ ಮೂಲಕ ಕೊಂಡಕ್ಕೆ ಕಿಡಿ ಹೊತ್ತಿಸಲಾಯಿತು. ದೂರದ ಊರುಗಳಿಂದ ಭಕ್ತರು ವಾಹನಗಳಲ್ಲಿ ಕಟ್ಟಿಗೆ ತಂದು ಕೊಂಡಕ್ಕೆ ಹಾಕಿ ಹರಕೆ ತೀರಿಸಿದರು.

ನವ ಮಾತೃಕೆಯರ ಉತ್ಸವ: ಚಾಮುಂಡೇಶ್ವರಿ ಜತೆಗೆ ನಗರದ ವಿವಿಧ ಭಾಗಗಳಲ್ಲಿ ಇರುವ ನವ ಮಾತೃಕೆಯರ ಕರಗ ಉತ್ಸವವೂ ಇದೇ ಸಂದರ್ಭದಲ್ಲಿ ಜರುಗಿತು. ಐಜೂರು ಆದಿಶಕ್ತಿ, ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ, ಭಂಡಾರಮ್ಮ, ಚೌಡೇಶ್ವರಿ, ಮುತ್ತುಮಾರಮ್ಮ, ಶೆಟ್ಟಿಹಳ್ಳಿ ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ  ದೇವತೆಗಳ ಕರಗ ಮಹೋತ್ಸವ ಮಂಗಳ ವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಿಗ್ಗೆ ಅಗ್ನಿಕೊಂಡ ಮಹೋತ್ಸವ ನಡೆಯಲಿವೆ.

ಬೀದಿಗಳಿಗೆ ರಂಗು: ಕರಗದ ಸಲುವಾಗಿ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಲಕ್ಷ್ಮಿ, ಚಾಮುಂಡಿ, ಶಿವ, ವೆಂಕಟೇಶ್ವರ ಮೊದ ಲಾದ ದೇವರ ಮೂರ್ತಿಗಳು ದೀಪಗಳ ಮೂಲಕ ರೂಪ ಪಡೆದುಕೊಂಡಿವೆ.

ಎಂ.ಜಿ. ರಸ್ತೆ, ಐಜೂರು ವೃತ್ತ, ಹಳೇ ಬಸ್‌ನಿಲ್ದಾಣ ವೃತ್ತ, ಕೆಂಪೇಗೌಡ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ. ಅಲ್ಲಲ್ಲಿ ಧ್ವನಿವರ್ಧಕಗಳ ಅಬ್ಬರ ಜೋರಾಗಿದ್ದು, ದಿನವಿಡೀ ಸಿನಿಮಾ ಗೀತೆಗಳೇ ಮೊಳಗಿದವು.

ಆಟದ ಮೋಜು: ಕರಗಕ್ಕೆಂದು ಬಂದವರ ಪೈಕಿ ಸಾಕಷ್ಟು ಮಂದಿ ಜೂನಿ ಯರ್‌ ಕಾಲೇಜು ಮೈದಾನದತ್ತ ಹೆಜ್ಜೆ ಇಟ್ಟರು. ಇಲ್ಲಿ ರ್‍ಯಾಟ್‌ವೀಲ್‌, ಮ್ಯೂಸಿ ಕಲ್‌ ಚೇರ್‌ ಸಹಿತ ಹಲವು ಆಕರ್ಷಣೆ ಗಳಿದ್ದು, ಮಕ್ಕಳ ಜತೆಗೆ ಹಿರಿಯರೂ ಮೋಜು ಸವಿದರು.

ಬೀದಿ ಬದಿಯಲ್ಲಿನ ಅಂಗಡಿ–ಮುಂಗಟ್ಟುಗಳು ಜಾತ್ರೆಯ ವಾತಾವರಣ ವನ್ನು ನೆನಪಿಸುವಂತೆ ಇದ್ದು, ಕ್ರಮೇಣ ಖರೀದಿ ಕೂಡ ಚುರುಕು ಪಡೆದುಕೊಂಡಿತು. ಅರವಟಿಗೆ:ಕರಗ ಮಹೋತ್ಸವದ ಅಂಗವಾಗಿ ನಗರದ ವಿವಿಧೆಡೆ ಅರವಟಿಗೆ ತೆರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT