ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಕಟಾವಿನಂತೆ ನೆಲಕ್ಕೆ ಬಿದ್ದ ಕೂದಲು

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಜಾತ್ರೆ ಎಂಬ ಶಬ್ದ ನನ್ನ ಕಿವಿಗೆ ಬಿದ್ದಾಗಲೆಲ್ಲಾ ನಮ್ಮೂರ ಜಾತ್ರೆಯಲ್ಲಿ ನಡೆದ ಘಟನೆ ನೆನಪಾಗುತ್ತದೆ. ಐದು ವರ್ಷಗಳಿಗೊಮ್ಮೆ ಬರುವ ಜಾತ್ರೆಗೆ ನಮ್ಮೂರಷ್ಟೇ ಅಲ್ಲದೆ ಅಕ್ಕಪಕ್ಕದ ಹತ್ತಾರು ಹಳ್ಳಿಗಳಿಂದ ಜನ ಕಿಕ್ಕಿರಿದು ಬಂದಿದ್ದರು. ಶಾಲೆಗಳಿಗೆ ಬೀಗ, ಮನೆಗಳಲ್ಲಿ ಲೆಕ್ಕವಿಲ್ಲದಷ್ಟು ನೆಂಟರ ಆಗಮನ, ಭೂರಿಭೋಜನ ತಯಾರಿಕೆಗೆ ಅಮ್ಮನಿಗೆ ಬಿಡುವಿಲ್ಲದ ಕೆಲಸ, ಅಪ್ಪನೋ ಜಾತ್ರೆಯಲ್ಲಿ ಚಿಕ್ಕಪ್ಪ ಹಾಕಿದ ಜಿಲೇಬಿ ಅಂಗಡಿಗೆ 5–6 ಬಾರಿ ಹೋಗಿ ಬರುತ್ತಿದ್ದರು.

ಮನೆಗೆ ಬಂದವರೆಲ್ಲ ಸಣ್ಣವಳೆಂದು ನನ್ನ ಗಲ್ಲ ಹಿಂಡಿದ್ದೇ ಹಿಂಡಿದ್ದು. ಜೊತೆಗೆ ಒಂದಿಷ್ಟು ಸಿಹಿ ತಿಂಡಿ ಪೊಟ್ಟಣಗಳನ್ನು ನನ್ನ ಕೈಲಿ ಕೊಟ್ಟು ಮುದ್ದಿಸಲು ಬಂದಾಗಲೆಲ್ಲ ಅಮ್ಮನ ಸೆರಗಿನಲ್ಲಿ ಅವಿತು ಅವರನ್ನು ದುರುಗುಟ್ಟಿ ನೋಡುತ್ತಿದ್ದೆ. ಮನೆ ಅಂಗಳದಲ್ಲಿ ಕಟ್ಟಿ ಹಾಕಿದ ಕುರಿ ಮತ್ತು ನನ್ನ ಕೂದಲು ಎರಡಕ್ಕೂ ಅಂದೇ ಆಯಸ್ಸು ಮುಗಿದಿತ್ತು. ದೇವರಿಗೆ ಹರಕೆ ತೀರಿಸಲು ಇವೆರಡು ಕೊಡಲೇಬೇಕಾಗಿತ್ತು.

ರಥ ಎಳೆಯುವ ಸಮಯಕ್ಕೆ ನಾವೆಲ್ಲ ಜಾತ್ರೆಗೆ ಹೋದೆವು. ಬಣ್ಣದ ಪತಾಕೆ, ಹೂಗಳಿಂದ ಅಲಂಕರಿಸಿದ ರಥವು ಬಹು ಎತ್ತರ ಬಾನಿಗೆ ತಾಗಿದಂತೆ, ಬಾಳೆಗೊನೆ ದಿಂಡು ನಿಂತಂತೆ ಕಾಣುತ್ತಿತ್ತು. ದೇವಾಲಯದ ಬಳಿ ಅಪ್ಪನ ಹೆಗಲೇರಿ ಹೋಗುವಾಗ ವಿಮಾನದಿ ಭೂಮಿ ನೋಡಿದ ಹಾಗೆ ತಿಂಡಿ, ಆಟಿಕೆ ಸಾಮಾನುಗಳ ಅಂಗಡಿಗಳು ನನ್ನ ಕಣ್ಣನ್ನು ಕುಕ್ಕುತ್ತಿದ್ದವು. ಜಿಲೇಬಿ, ಜಹಾಂಗೀರ್ ಕರಿದ ವಾಸನೆ ಪದೇ ಪದೇ ಮೂಗಿಗೆ ಬಡಿದು ಬಾ ಬಾ ಅಂತ ಕರೆದಂತಾಗುತ್ತಿತ್ತು.

ಅಂಗಡಿಯತ್ತ ಬೆರಳು ಮಾಡಿ ಅಪ್ಪಾ ಅಪ್ಪಾ ಅಂದರೂ ನನ್ನ ಮನಸ್ಸಿನ ಮಾತು ಅವರಿಗೆ ಗೊತ್ತಾಗಿ ‘ಮೊದಲು ದೇವರಿಗೆ ಹರಕೆ, ಆಮೇಲೆ ನಿನ್ನ ಬಯಕೆ’ ಅಂತ ಸಮಾಧಾನಿಸಿದರು. ನನ್ನ ಆಸೆ ಅಪ್ಪನ ಮಾತಿನಿಂದ ಜಾತ್ರೇಲಿ ಗಾಳಿಗೆ ಒಡೆದು ಹೋಗುತ್ತಿದ್ದ ಬಲೂನಿನಂತೆ ಆಗುತ್ತಿತ್ತು. ದೇವರ ಮುಂದೆ ನಿಂತಿದ್ದಷ್ಟೆ. 2 ನಿಮಿಷ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನನ್ನ ತಲೆ ಬರಡು ಭೂಮಿಯಂತೆ ಬೋಳಾಗಿ ಕೂದಲುಗಳು ಕಬ್ಬು ಕಟಾವಿನಂತೆ ನೆಲಕ್ಕೆ ಬಿದ್ದವು.

ತಲೆ ಮೇಲೆ ಕೈಯಾಡಿಸಲು ಬಿಡದ ಅಮ್ಮ ಈಗ ಸೊಂಟದ ಮೇಲೆ ನನ್ನನ್ನೇರಿಸಿಕೊಂಡಳು. ರಥ ಎಳೆಯಲು ಪ್ರಾರಂಭಿಸಿದಾಗ ಬಾಳೆಹಣ್ಣನ್ನು ರಥದ ಮೇಲೆ ಎಸೆದಾಗ ಬಾಳೆಹಣ್ಣಿನ ಮಳೆಯಂತೆಯೇ ಇತ್ತು. ಅಪ್ಪ ರಥದ ಹಗ್ಗಕ್ಕೆ ಕೈ ಜೋಡಿಸಲು ಹೋದರು. ಅಮ್ಮ ನನ್ನನ್ನು ಸರಕ್ಕನೆ ಕೆಳಗಿಳಿಸಿ ಸೆರಗನ್ನು ಸೊಂಟಕ್ಕೆ ಸಿಕ್ಕಿಸುವಷ್ಟರಲ್ಲಿ ಕಾಲಡಿ ಬಿದ್ದ ಬಾಳೆ ಹಣ್ಣನ್ನು ಹೆಕ್ಕಲು ಬಗ್ಗಿದಾಗ ಜನಸಂದಣಿಯಲ್ಲಿ ಕೈ ತಪ್ಪಿ ಮತ್ಯಾರದೋ ಹೆಂಗಸಿನ ಕೈ ಹಿಡಿದಿದ್ದೆ.

ನನ್ನನ್ನು ಅವರು ಸೊಂಟಕ್ಕೆ ಏರಿಸಿದಾಗಲೆ ಗೊತ್ತಾಯ್ತು ಅವರು ನನ್ನ ಅಮ್ಮ ಅಲ್ಲವೆಂದು. ಆಗಿನಿಂದ ಅಳಲು ಶುರು ಮಾಡಿದವಳು ಕಣ್ಣು ತೆರೆದು ನೋಡಿದಾಗ ಪೊಲೀಸರ ಬಳಿಯಿದ್ದೆ. ಅಲ್ಲೇ ಎದುರು ಅಪ್ಪ ಅಮ್ಮ ಇದ್ದರು. ತಡ ಮಾಡದೆ ಅಪ್ಪನ ಮೇಲೆ ಜಿಗಿದು ಅವರನ್ನು ತಬ್ಬಿಕೊಂಡೆ. ಆ ಹೆಂಗಸು ನನಗೆ ಮತ್ತೆ ನನ್ನವರನ್ನು ಸೇರಿಸಿದ ಕೃತಜ್ಞತೆ ಭಾವದಿಂದ ಕೈಲಿದ್ದ ಬಾಳೆಹಣ್ಣನ್ನು ಅವಳಿಗೆ ಕೊಟ್ಟೆ. ಎಲ್ಲರೂ ಬಿದ್ದುಬಿದ್ದು ನಕ್ಕಿದ್ದರು. ಆ ಹೆಂಗಸು ಅದನ್ನು ಸುಲಿದು ನನ್ನ ಬಾಯಿಗೆ ಇಟ್ಟಳು. ಖುಷಿಯಿಂದ ಬಲೂನು ಹಿಡಿದು ನಾವು ಮನೆಗೆ ನಡೆದೆವು. ಇಂಥ ಜಾತ್ರೆ ಪ್ರಸಂಗ ಮತ್ತೆ ಬರಲಿಲ್ಲ. ಅದು ಮರೆಯಲಾಗದ ದಿನವಾಗಿ ಹಾಗೆ ನನ್ನಲ್ಲಿ ಉಳಿಯಿತು.
–ಆರತಿ ಗಣಪತಿ ತಳೇಕರ ಕಾರವಾರ

*
ಯಾವ ಪೈಲ್ವಾನ ಬೆಳ್ಳಿ ಗದಾ ಗೆಲ್ತಾನ?
ನಮ್ಮೂರ ಜಾತ್ರಿ ಅಂತಂದ್ರ, ಅದು ಸುತ್ತ ಹತ್ತಳ್ಳಿಗೆಲ್ಲಾ ಭಾಳ ದೊಡ್ಡ ಜಾತ್ರಿ. ಸಂಕ್ರಮಣಕ್ಕ ನಡಿಯೂ ಜಾತ್ರಿಗಿ ಡಿಸೆಂಬರ್ದಾಗ ಜಬರ್ದಸ್ತ್‌ ತಯಾರಿ ಶುರು ನೋಡ್ರಿ. ಅಂದ್ರ ಬರೊಬ್ಬರಿ ಒಂದ ತಿಂಗಳ ಅಗಾವ ಮನ್ಯಾಗ ಎಲ್ಲಾರಿಗೂ ಮೈ ತುಂಬಾ ದಗದ, ಮನಿ ಸಾರ್ಸೂದು, ಎಲ್ಲಾರ್ಗೂ ಹೊಸಾ ಅರವಿ ಹೊಲ್ಸೂದು, ದೂರದೂರಾನ ಬೀಗ್ರು ಬಿಜ್ರು ಎಲ್ಲಾರನ್ನೂ ಕರ್ದು, ಅವ್ರಿಗಿ ತಿನ್ನಾಕ ನಾನಾ ನಮನಿ ತಿನಸಾ ಮಾಡುದು, ಮನ್ಯಾನ ಹೆಣ್ಣೈಕ್ಳಿಗೆಲ್ಲಾ ಬಳಿ ಹಾಕ್ಸೂದು!

ಬಳಿ ಅನಾನ ನೆನಪಾತು ನೋಡ್ರಿ. ನಮ್ಮವ್ವ ಸಣ್ಣೆಕ್ಕಿದ್ದಾಗ ಹಿಂಗ ಜಾತ್ರಿಗಂತ ಬಳಿ ಹಾಕ್ಸಿದ್ರಂತ ಹಾಕ್ಕೊಂಡ ಹಿಗ್ಗಿಲೆ ಊರ ಮಂದಿಗೆಲ್ಲಾ ಮುಂಗೈಮಟಾ ಹಾಕ್ಸಿದ್ದ ಬಳಿ ತೋರ್ಸಾಕಂತ ಓಡಿಹೋಗಾಗ ಅಗಸ್ಯಾಗ ಇಳಕ್ಲಿಗಿ ಧನ್ ಅಂತ ಬಿದ್ರ ಮುಂಗೈತನಾ ಇದ್ದ ಬಳಿ ಒಡ್ದ ಮುಂಗಾಲಿಗಿ ನಟ್ಟು ಕಾಲೆಲ್ಲ ರಕ್ತ ಆಯ್ತಂತ. ಅಳಕೊಂತ ಮನಿಗಿ ಹೋದ್ಲಂತ.

ಅವಾಗ ನಮ್ಮವ್ವನ ಅತ್ತಿ ಮೈ ತುಂಬಾ ಆಗಿದ್ದ ರಕ್ತ ಬಿಟ್ಟು ಈಗರೇ ಹಾಕ್ಸಿದ್ದ ಬಳಿ ಒಡಕೊಂಡ ಬಂದೆಲ್ಲ ಯವ್ವಾ ಹೋಗ ಇಲ್ಲ್ಯಾಕ ಬಂದಿ ಅಂತ ಬೈದು ಹೊರಗ ಹಾಕಿದ್ಲಂತ. ಆ ವರ್ಷದ ಜಾತ್ರಿಗಿ ನಮ್ಮವ್ವನ ಕೈ ಬಳಿ ಕಾಣ್ಲಿಲ್ಲಂತ. ಮತ್ತ ನಮ್ಮೂರ ಜಾತ್ರ್ಯಾಗ ಕುಸ್ತಿ ಪಂದ್ಯ, ಓಕಳಿ ಆಟ, ಗುಂಡಗಲ್ಲ ಎತ್ತೂದು, ಎಲ್ಲಾ ಸ್ಪರ್ಧೆ ಇರ್ತಾವ. ಅವನ್ನೆಲ್ಲಾ ನೋಡೂದ ಒಂದ್ ಮಜಾ.

ಓಕಳಿ ಆಟಕ್ಕಂತ್ರೂ ಮನ್ಯಾನ ಎಣ್ಣಿ ಒಯ್ದು ಕಂಬಕ್ಕ ಹಚ್ಚುದಂದ್ರ ಭಾಳ ಹಿಗ್ಗು. ಆ ಓಕ್ಳಿ ಆಟ ಆಡುದು ನೋಡುದು ಅಂದ್ರssss ಯಾ ಇಂಡಿಯಾ ಪಾಕಿಸ್ತಾನ ಮ್ಯಾಚ್ ನೋಡುಮುಂದು ಅಷ್ಟ್‌ ಥ್ರಿಲ್ ಇರಾಂಗಿಲ್ಲ ಬಿಡ್ರಿ. ಯಾರ್ ಹೋಗಿ ಕಂಬದ ತುದಿ ಮುಟ್ತಾರ ಅನ್ನೂದ ಒಂದ್ ಸುದ್ದಿ. ಅದಾಗಿಂದ ಕುಸ್ತಿ ಆಟದಾಗ ಯಾವ ಪೈಲ್ವಾನ ಬೆಳ್ಳಿ ಗದಾ ಗೆಲ್ತಾನ ಅನ್ನೂ ಕುತೂಹಲ. ಇದೆಲ್ಲಾ ಆಗಿಂದ ತೇರು ಎಳಿಯೋದು. ಅಂದ ನೋಡ್ರಿ ಎಲ್ಲಾರೂ ಹೊಸಾ ಅರವಿ ಹಾಕ್ಕೊಂಡ್ ಜಗಾಮಗಾ ಅಂತ ತಯ್ಯಾರಾಗಿ ತೇರ ಎಳ್ಯಾಕ ಕೈ ಕೂಡ್ಸುದು. ತೇರ ಹೊಂಟ್ತಂದ್ರ ಊರ ಮಂದಿಗೆಲ್ಲಾ ಘನ ಹಿಗ್ಗು.

ಆಮೇಲೆ ಖರೀದಿ ಮಾಡೋದಕ್ಕೆ ಗೆಳತಿಯರ ಕೂಡ ಜಾತ್ರ್ಯಾಗೆಲ್ಲ ಓಡಾಟ. ಅದಾಗಿಂದ ಬಯಲಾಟ, ನಾಟಕ ನೋಡಾಕ ಹೊಂಡುದು. ರಾತ್ರಿ ನಡಿತಿದ್ದ ಆಟಕ್ಕ ಮಧ್ಯಾಹ್ನ ನಾಕಕ್ಕ ಹೋಗಿ ಚಾಪಿ ಹಾಸಿ ಜಾಗಾ ಹಿಡ್ದು ಇನ್ನೇನ ಎಂಟಕ್ಕ ಆಟ ಸುರು ಆತು ಅನ್ನುದ್ರಾಗ, ಪೋಣೆ ಒಂಬತ್ತಕ್ಕೆ ನಮ್ಮ ನಿದ್ದಿ ಆಟಾನೂ ಸುರು. ಹಂಗ ಮರದಿನಾ ಮುಂಜಾನಿ ಎದ್ರ ಆಟ ಮುಗ್ದು ಹೋಗಿರ್ತಿತ್ತು. ಮುಂದಿನ ವರ್ಷ ಮಲಗಬಾರ್ದಂತ ಶಪಥ ಮಾಡ್ತಿದ್ವಿ. ಮತ್ತ ಅದ್ss ನಿದ್ದಿ ಆಟನ ನಡ್ಸುದು. ಜಾತ್ರಿ ಮುಗುದು ಒಂದ್ ತಿಂಗಳ್ತನಾನೂ ಮತ್ತ ಅದರದ್ದೇ ಮಾತು. ವಟ್ಟ ಈ ಜಾತ್ರಿ ಅನ್ನೂದು ಒಂದಿನದ ಮಾತಲ್ಲ ನೋಡ್ರಿ!
– ಸುಕೃತಾ ಪಟ್ಟಣಶೆಟ್ಟಿ ಸಿಂದಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT