ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಕೆರೆಗಳಿಗೆ ಅರ್ಧ ನೀರು ಹಂಚಿಕೆ

ಉಬ್ರಾಣಿ–ಅಮೃತಾಪುರ ಏತ ನೀರಾವರಿ ಯೋಜನೆ ರೈತರ ಸಮಾಲೋಚನಾ ಸಭೆಯಲ್ಲಿ ಸಿರಿಗೆರೆ ಶ್ರೀ
Last Updated 13 ಜುಲೈ 2017, 4:51 IST
ಅಕ್ಷರ ಗಾತ್ರ

ಚನ್ನಗಿರಿ: ಮಳೆ ಕೊರತೆಯ ಕಾರಣ ಈ ಬಾರಿ ಉಬ್ರಾಣಿ–ಅಮೃತಾಪುರ ಏತ ನೀರಾವರಿ ಯೋಜನೆಯಡಿ ಭದ್ರಾ ನದಿಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಉಬ್ರಾಣಿ ಭಾಗದ 89 ಹಾಗೂ ಅಮೃತಾಪುರ ಭಾಗದ 57 ಕೆರೆಗಳಿಗೆ ಸಂಪೂರ್ಣವಾಗಿ ನೀರನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆರೆಯನ್ನು ಅರ್ಧದಷ್ಟು  ತುಂಬಿಸಲು ನೀರಾವರಿ ಸಮಿತಿ ತೀರ್ಮಾನಿಸಿದೆ ಎಂದು ಸಿರಿಗೆರೆ ಬೃಹ್ಮನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರೈತರಿಗೆ ತಿಳಿಸಿದರು.

ಪಟ್ಟಣದ ಚೆನ್ನಮ್ಮಾಜಿ ಸಮುದಾಯ ಭವನದಲ್ಲಿ ಉಬ್ರಾಣಿ–ಅಮೃತಾಪುರ ಏತ ನೀರಾವರಿ ಯೋಜನೆಯ ರೈತರ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಜೂನ್ 12ರಿಂದ ಉಬ್ರಾಣಿ ಹಾಗೂ ಅಮೃತಾಪುರ ಭಾಗದ ಕೆರೆಗಳಿಗೆ ನೀರು ಹರಿಸಲು ಒಂದು ಮೋಟಾರ್‌ ಚಾಲನೆ ಮಾಡಲಾಗಿದೆ. ಭದ್ರಾ ಆಣೆಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳದೇ ಇರುವುದರಿಂದ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ರೈತರು ಮಳೆ ಇಲ್ಲದೇ ತತ್ತರಿಸಿ ಹೋಗಿದ್ದಾರೆ. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನು ಮನಗಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

‘ಭದ್ರಾ ನದಿಯಲ್ಲಿ ನೀರು ಹರಿಯುವ ಪ್ರಮಾಣ ನೋಡಿಕೊಂಡು ನಾಲ್ಕು ‘ಸಿರೀಸ್‌’ಗಳಿಗೆ ಸಮನಾಗಿ ನೀರನ್ನು ಹಂಚಿಕೆ ಮಾಡಬೇಕಾಗಿದೆ. ಇನ್ನು ಕೆಲವು ಕೆರೆಗಳಿಗೆ ಈ ಯೋಜನೆ ಅಡಿ ನೀರನ್ನು ತುಂಬಿಸಲು ಸಾಧ್ಯವಾಗದೇ ಇರುವುದರಿಂದ ಕೆರೆಗಳಿಗೆ ತುರ್ತಾಗಿ ತೂಬುಗಳನ್ನು ನಿರ್ಮಿಸುವ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಕಾಮಗಾರಿ ಕೈಗೊಳ್ಳದಿದ್ದರೆ ಅರ್ಧ ಕೆರೆಗೆ ನೀರು ತುಂಬಿಸಲು ಆಗುವುದಿಲ್ಲ. ಆದ್ದರಿಂದ ಯಾವ ಕಡೆಯಿಂದ ಕೆರೆಗೆ ನೀರು ಹರಿದು ಹೋಗುವಂತೆ ಮಾಡಲು ಸಮರ್ಪಕ ಕಾಮಗಾರಿ ಕೈಗೊಳ್ಳಬೇಕು ಎಂಬ ಬಗ್ಗೆ ಕ್ರಿಯಾಯೋಜನೆಯನ್ನು ನೀರಾವರಿ ಇಲಾಖೆ ಸಿದ್ಧಪಡಿಸಲಿದೆ. ಸದ್ಯಕ್ಕೆ ಯೋಜನೆ ಆರಂಭಿಸಲು ಅಗತ್ಯ ಅನುದಾನವನ್ನು ಮಠದಿಂದ ಕೊಡಲಾಗುವುದು. ಅನುದಾನ ಬಿಡುಗಡೆಯಾದ ಮೇಲೆ ನಾವು ನೀಡಿದ ಹಣವನ್ನು ವಾಪಸ್ ಕೊಡಬೇಕು’ ಎಂದು ತಿಳಿಸಿದರು.

ಶಾಸಕ ವಡ್ನಾಳ್‌ ರಾಜಣ್ಣ ಮಾತನಾಡಿ. ‘ರೈತರು ತಾಳ್ಮೆ ಕಳೆದುಕೊಂಡು ಕೆಲ ಕಡೆಗಳಲ್ಲಿ ಪೈಪ್‌ಗಳನ್ನು ಅಗೆದು ಹಾಕುತ್ತಿದ್ದಾರೆ. ಆದ್ದರಿಂದ ನೀರು ನಿರ್ವಹಣ ಸಮಿತಿಯನ್ನು ರಚಿಸಿ, 12 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಈ ಸಿಬ್ಬಂದಿ 6 ತಿಂಗಳು ಕಾರ್ಯನಿರ್ವಹಿಸಬೇಕಾಗಿದ್ದು, ತಿಂಗಳಿಗೆ ₹ 2 ಲಕ್ಷ ಖರ್ಚು ಬರುತ್ತದೆ.

ಈ ಖರ್ಚನ್ನು ಸರಿದೂಗಿಸಲು 6 ತಿಂಗಳಿಗೆ ₹ 12 ಲಕ್ಷ ಬೇಕಾಗುತ್ತದೆ. ಸ್ವಾಮೀಜಿ  ನಿರ್ದೇಶನದಂತೆ ಕೆರೆಗಳ ಭಾಗಗಳಲ್ಲಿರುವ ಪ್ರತಿ ರೈತ ₹ 5 ಸಾವಿರ ವಂತಿಗೆ ನೀಡಬೇಕಾಗುತ್ತದೆ. ಈ ಕಾರ್ಯವನ್ನು ನೀರಾವರಿ ಸಮಿತಿಗೆ ವಹಿಸಲಾಗಿದೆ. ಪ್ರಕೃತಿ ಮುನಿಸಿಕೊಂಡಿದೆ. ತಾಳ್ಮೆ ಕೆಟ್ಟರೆ ಯಾವುದೇ ಕಾರ್ಯವಾಗುವುದಿಲ್ಲ. ರೈತರು ಸಹಕರಿಸಬೇಕು’ ಎಂದು ಮನವಿ ಮಾಡಿಕೊಂಡರು.

ತರೀಕೆರೆ ಶಾಸಕ ಶ್ರೀನಿವಾಸ್, ಮಾಜಿ ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಮಹಿಮ ಪಟೇಲ್, ಸುರೇಶ್, ನೀರಾವರಿ ಸಮಿತಿ ಅಧ್ಯಕ್ಷ ಶಿವಕುಮಾರ್, ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಕಗ್ಮಾ ಸಂಸ್ಥೆ ಅಧ್ಯಕ್ಷ ಆರ್.ಎಂ. ರವಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿ.ಆರ್. ಲೋಕೇಶಪ್ಪ, ನೀರಾವರಿ ನಿಗಮದ ಎಇಇ ಸಿ.ವಿ. ಓಂಕಾರಪ್ಪ, ಫಣಿರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT