ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದನೆ ಹೆಚ್ಚಿಸಿದ ಪಶು ಸಂಗೋಪನೆ

ಕಸವನ್ನೇ ರಸವನ್ನಾಗಿಸಿ ನೆಮ್ಮದಿಯ ಬದುಕು ಕಂಡುಕೊಂಡ ರಾಜನಗೌಡ
Last Updated 13 ಜುಲೈ 2017, 5:00 IST
ಅಕ್ಷರ ಗಾತ್ರ

l ವಿಜಯ ಸಿ. ಕೆಂಗಲಹಳ್ಳಿ

ದಾವಣಗೆರೆ: ಜಿಲ್ಲೆಯಲ್ಲಿಯೇ ಗುಣಮಟ್ಟದ ಇಟ್ಟಿಗೆಗೆ ಹೆಸರಾದ ಗುತ್ತೂರು ಗ್ರಾಮದ ಕೂಲಿ ಕಾರ್ಮಿಕ ರಾಜನಗೌಡ ಚರಂಡಿ ತ್ಯಾಜ್ಯ ನೀರು ಸಂಗ್ರಹಿಸಿ, ಮೇವು ಬೆಳೆದು, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿ ಮಾದರಿ ಆಗಿದ್ದಾರೆ.

ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮದ ರಾಜನಗೌಡ ಈ ಹಿಂದೆ ಬೇರೆಯವರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಈಗ ವಿನೂತನ ಮಾದರಿ ಅಳವಡಿಸಿಕೊಂಡು ಪಶು
ಸಂಗೋಪನೆಯಲ್ಲಿ ಅಭಿವೃದ್ಧಿ ಹೊಂದಿರುವುದು ಅನೇಕರಿಗೆ ಪ್ರೇರಣೆಯಾಗಿದೆ.

2016ರಲ್ಲಿ ಸರ್ಕಾರದ ಪಶುಭಾಗ್ಯ ಯೋಜನೆಯ ₹ 1.20ಲಕ್ಷ ಸಹಾಯ ಧನದ ಸೌಲಭ್ಯದಡಿ ₹ 30 ಸಾವಿರ ಸಬ್ಸಿಡಿ ಪಡೆದ ಇವರು ಎಚ್‌.ಎಫ್‌ ಕ್ರಾಸ್‌ ತಳಿ ಹಸುವನ್ನು ಖರೀದಿಸಿದರು.

ನೀರಿನ ಮೂಲ: ಗ್ರಾಮದ ಕೊನೆಭಾಗದ ಮನೆಯಲ್ಲಿರುವ ಇವರು, ತಮ್ಮ ಹಿತ್ತಲಿನಲ್ಲಿ ಹಾದು ಹೋಗುವ ಚರಂಡಿ ನೀರನ್ನು ಹರಿಸಲು 5 ಅಡಿ ಆಳದಷ್ಟು ಕಾಲುವೆ ನಿರ್ಮಿಸಿದರು. ಅದನ್ನು ಸಂಗ್ರಹಿಸಲು ಗುಂಡಿ ತೋಡಿದರು. ನೀರಿನ ಮೋಟಾರಿಗೆ ಫುಟ್‌ವಾಲ್ವ್‌ ಅಳವಡಿಸಿ ಆ ಮೂಲಕ ಹೊಲಕ್ಕೆ ನೀರು ಹಾಯಿಸುತ್ತಿದ್ದಾರೆ.

ಹುಲ್ಲಿನ ಮಾದರಿ: ಗೇಣಿ ಪಡೆದ ಅಲ್ಪ ಜಾಗದಲ್ಲಿ ಕಾಗೆ ಹುಲ್ಲು, ರಾಗಿ ಹುಲ್ಲು, ಮೈಸೂರು ಹುಲ್ಲು, ಬಾತಿ ಡೈರಿ ಸಪ್ಪೆ ಹುಲ್ಲಿನ ಬೀಜ ಹಾಕಿದ್ದಾರೆ.

ತಮಗಾಗಿ ತುಂಡು ಭೂಮಿ ಇಲ್ಲದಿದ್ದರೂ ಬೇರೆಯವರ 20 ಗುಂಟೆ ಜಮೀನನ್ನು ವರ್ಷಕ್ಕೆ ₹ 5 ಸಾವಿರದಂತೆ ಬಾಡಿಗೆಗೆ ಪಡೆದು ನಳನಳಿಸುವ ಹುಲ್ಲನ್ನು ಬೆಳೆದು ಎಂಟು ಆಕಳುಗಳನ್ನು ಸಾಕುವ ಮೂಲಕ ಹೈನುಗಾರಿಕೆಯಲ್ಲಿ ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ.

ತಿಂಗಳ ಆದಾಯ: ಮೂರು ಹಸುಗಳು ನಿತ್ಯವೂ ಒಟ್ಟು 28 ಲೀಟರ್‌ ಹಾಲು ಕೊಡುತ್ತವೆ. ಇದರಿಂದ ತಿಂಗಳಿಗೆ ₹ 25 ಸಾವಿರ ಆದಾಯ ಬರುತ್ತದೆ.  ಹಸು ಆಹಾರ, ಚಿಕಿತ್ಸಾ ವೆಚ್ಚ ಸೇರಿದಂತೆ ₹ 10 ಸಾವಿರ ಕಳೆದು ₹ 15 ಸಾವಿರ ಉಳಿಯು ತ್ತಿದೆ. ವರ್ಷಕ್ಕೆ 10 ಸಣ್ಣ ಲಾರಿ ಲೋಡ್‌ ಕೊಟ್ಟಿಗೆ ಗೊಬ್ಬರ ದೊರೆಯುತ್ತಿದ್ದು, ಇದರಿಂದ ₹ 18,000 ಸಿಗುತ್ತಿದೆ.

ನಿರ್ವಹಣೆ: ‘ಎಚ್‌.ಎಫ್‌ ಹಸುಗಳು ಇತರೆ ಜವಾರಿ ಹಸುಗಳಂತೆ ಅಲ್ಲ. ಹಾಗಾಗಿ ಇವುಗಳಿಗೆ ದನದ ಕೊಟ್ಟಿಗೆ ನಿರ್ಮಿಸಿ, ಸೊಳ್ಳೆಗಳಿಂದ ರಕ್ಷಣೆಗೆ ಪರದೆ ಅಳವಡಿಸುತ್ತೇವೆ. ನೀರು, ಮೇವು ಬಿಟ್ಟರೆ ಜಾಗ್ರತೆ ವಹಿಸಿ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುತ್ತೇವೆ’ ಎನ್ನುತ್ತಾರೆ ರಾಜನಗೌಡ.

ಪ್ರೇರಣೆಗೊಂಡ ಬಸವರಾಜಪ್ಪ: ಇಟ್ಟಿಗೆ ಬಟ್ಟಿಯಲ್ಲಿ ಕಡಿಮೆ ಕೂಲಿ ಪಡೆದು ಜೀವನ ಸಾಗಿಸುತ್ತಿದ್ದ ಕೂಲಿ ಕಾರ್ಮಿಕ ಬಸವರಾಜಪ್ಪ ಕೂಡ ಸಂಬಂಧಿ ರಾಜನ ಗೌಡ ಅವರಿಂದ ಪ್ರೇರಣೆಗೊಂಡಿದ್ದಾರೆ.

ರಾಜೀವ್‌ಗಾಂಧಿ ಚೈತನ್ಯ ಯೋಜನೆ ಯಡಿ ₹ 50 ಸಾವಿರದಲ್ಲಿ ₹ 10 ಸಾವಿರ ಸಹಾಯಧನ ಪಡೆದು ಒಂದು ಆಕಳು ಖರೀದಿಸಿದ್ದಾರೆ. 20 ಗುಂಟೆ ಭೂಮಿ ಯನ್ನು ಗೇಣಿ ಪಡೆದು, ಅದರಲ್ಲಿ ದನದ ಕೊಟ್ಟಿಗೆ ಕಟ್ಟಿ, ಹುಲ್ಲು ಬೆಳೆಯುತ್ತಿದ್ದಾರೆ.

‘ಮೂರು ಹಸುಗಳನ್ನು ಸಾಕುತ್ತಿರುವ ನಮಗೆ ತಿಂಗಳ ಖರ್ಚೆಲ್ಲಾ ತೆಗೆದು ₹ 10 ಸಾವಿರ ಉಳಿಯುತ್ತಿದೆ. ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದೊಟ್ಟಿಗೆ ಬದುಕಿನ ಬಂಡಿ ಸಾಗುತ್ತಿದೆ’ ಎನ್ನುತ್ತಾರೆ ಬಸವರಾಜ ಅವರ ಪತ್ನಿ ಸುಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT