ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾರ್ಥನಾಲಯಗಳಿಗಿಂತ ಗ್ರಂಥಾಲಯಕ್ಕೆ ಪ್ರಾಮುಖ್ಯ ನೀಡಿ

ತೀರ್ಥಹಳ್ಳಿ: ಸೇಂಟ್‌ ಮೇರೀಸ್ ಶಾಲೆಯಲ್ಲಿ ಸದಸ್ಯತ್ವ ಎರವಲು ಕಾರ್ಡ್‌ ವಿತರಿಸಿದ ಕಿಮ್ಮನೆ
Last Updated 13 ಜುಲೈ 2017, 5:28 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ನೀಡುವ ಪ್ರಾಮುಖ್ಯತೆ ಯನ್ನು ಜನರು  ಗ್ರಂಥಾಲಯಗಳಿಗೆ ನೀಡುವ ಅಗತ್ಯವಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ಕೇಂದ್ರ ಗ್ರಂಥಾಲಯದಲ್ಲಿ ಬುಧವಾರ ಸೇಂಟ್‌ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಿಗೆ  ಉಚಿತ ಸದಸ್ಯತ್ವ ಎರವಲು ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.

ಅತ್ಯುತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜಗತ್ತಿನ ಅನೇಕ ವಿದ್ಯಮಾನಗಳನ್ನು ತಿಳಿಯಲು ಸಾಧ್ಯವಿದೆ.  ಕಲಿಕೆಗೆ ಪೂರಕವಾಗಿರುವ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಪೋಷಕರು ಪುಸ್ತಕಗಳ ಮಹತ್ವವನ್ನು ಮಕ್ಕಳಿಗೆ ತಿಳಿಹೇಳಬೇಕು ಎಂದರು.

‘ಗ್ರಂಥಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರ ಹೆಸರನ್ನು ಇಡಲಾಗಿತ್ತು. ದಾನಿಗಳು ನೀಡುವ ಪುಸ್ತಕಗಳನ್ನು ಗ್ರಂಥಾಲಯ, ಶಾಲೆಗಳಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಗ್ರಂಥಾಲಯಗಳನ್ನು ಆಧುನೀಕರಿಸಿ ಸುಸಜ್ಜಿತಗೊಳಿಸಿದ್ದರೂ ಗ್ರಂಥಾಲಯ ಗಳನ್ನೇ ನೋಡದೇ ಇರುವ ಮಂದಿ ಸಾಕಷ್ಟಿದ್ದಾರೆ’  ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಎಂ.ಆರ್‌.ಹರೀಶ್‌ ಮಾತನಾಡಿ, ‘ಗ್ರಂಥಾಲಯಗಳನ್ನು ಉನ್ನತೀಕರಿಸಲಾಗಿದೆ. ಅವುಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ನಿವೃತ್ತ ಗ್ರಂಥಪಾಲಕ ಎಚ್‌.ಆರ್‌. ನಾರಾಯಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸದಸ್ಯತ್ವ ಎರವಲು ಕಾರ್ಡ್‌ಗೆ ತಗಲುವ ವೆಚ್ಚವನ್ನು ಸಂಘ ಸಂಸ್ಥೆಗಳು, ದಾನಿಗಳು ನೀಡಲು ಮುಂದೆ ಬಂದಿದ್ದಾರೆ. ಅದನ್ನು ಬಳಕೆ ಮಾಡಿಕೊಳ್ಳಬೇಕಿದ್ದ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಎರವಲು ಕಾರ್ಡ್‌ ಪಡೆಯಲು ಪಟ್ಟಣದ ಸೇಂಟ್‌ ಮೇರೀಸ್‌ ಶಾಲೆಯ ವಿದ್ಯಾರ್ಥಿಗಳು ಉತ್ಸುಕರಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಆಡಿನಸರ ಸತೀಶ್‌ ಮಾತನಾಡಿದರು. ರೈತ ಮುಖಂಡ ಕಡಿದಾಳು ಶಾಮಣ್ಣ, ಅಂಕಣಕಾರ ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.
ಗ್ರಂಥಾಲಯ ಸಲಹಾ ಸಮಿತಿ ಸದಸ್ಯೆ ಪ್ರಭಾವತಿ ಶಾಮಣ್ಣ ಸ್ವಾಗತಿಸಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ.ರಮೆಶ್‌ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದಿನೇಶ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT