ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆ ರೂಪಿಸಿ

ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೆ.ಎಸ್.ಮಣಿ ಪ್ರತಿಪಾದನೆ
Last Updated 13 ಜುಲೈ 2017, 5:31 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗುತ್ತಾರೆ ಎಂದು ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೆ.ಎಸ್.ಮಣಿ ಪ್ರತಿಪಾದಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಯೋಜನೆ ಅಡಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿಸಬೇಕು. ದೈನಂದಿನ ಕಲಿಕೆಯ ಜತೆಗೆ ತಂತ್ರಜ್ಞಾನ ಆಧಾರಿತ ಚಟುವಟಿಕೆ ಮಾಡಿಸಬೇಕು. ಇಂತಹ ಪ್ರಯತ್ನಗಳ ಮೂಲಕ ಮಕ್ಕಳ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಸಮಾಜದಲ್ಲಿ ಮನೆ ಮಾಡಿರುವ ಮೌಢ್ಯ ನಿವಾರಣೆಗೆ ವಿಜ್ಞಾನದ ಅರಿವು ಅಗತ್ಯ. ಶಿಕ್ಷಕರು ಮಕ್ಕಳ ಆಲೋಚನೆಗೆ ಪ್ರೇರಣೆ ನೀಡಬೇಕು. ವಿಜ್ಞಾನದ ಉತ್ತಮ ಮಾದರಿ ತಯಾರಿಸಲು ಪ್ರೋತ್ಸಾಹ ಕೊಡಬೇಕು. ಮಕ್ಕಳಲ್ಲಿನ ಮೌಢ್ಯ ಹೋಗಲಾಡಿಸಲು, ಅವರ ಪ್ರತಿಭೆ ಅನಾವರಣಗೊಳ್ಳಲು ಇಂತಹ ಪ್ರಯತ್ನಗಳು ಸಹಕಾರಿ ಎಂದರು.

ಹುಟ್ಟಿನಿಂದಲೇ ಎಲ್ಲಾ ವಿಷಯಗಳಲ್ಲೂ ಯಾರೊಬ್ಬರೂ ಸಮರ್ಥರಾಗಿರುವುದಿಲ್ಲ. ವಿದ್ಯಾರ್ಥಿ ಬೆಳೆದಂತೆ ಸಂಸ್ಕಾರ ಕಲಿಯುತ್ತಾನೆ. ಎಲ್ಲಾ ಮಕ್ಕಳಲ್ಲಿಯೂ ಸಹಜ ಪ್ರತಿಭೆ ಇರುತ್ತದೆ. ಉತ್ತೇಜನ ನೀಡಿದರೆ ಪ್ರಸಿದ್ಧ ವಿಜ್ಞಾನಿಗಳ ರೀತಿ ಹೊಸ ಆವಿಷ್ಕಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ ಮಾತನಾಡಿ, ‘ವಿಜ್ಞಾನ ಮತ್ತು ಗಣಿತ  ಆಸಕ್ತಿ ಮತ್ತು ಕುತೂಹಲ ಮೂಡಿಸುವ ವಿಷಯಗಳು. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಅಸಾಧಾರಣವಾ ದುದು. ಇನ್ನಷ್ಟು ಸಾಧನೆಗೆ ಪ್ರೇರೇಪಿಸಲು ಸರ್ಕಾರ ಈ ಯೋಜನೆ ಅನುಷ್ಠಾನ ಗೊಳಿಸಿದೆ’ ಎಂದು ಮಾಹಿತಿ ನೀಡಿದರು.

ಯೋಜನಾ ಸಮನ್ವಯಾಧಿಕಾರಿ ಗಣಪತಿ ಮಾತನಾಡಿ, ‘ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ 19 ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಎಲ್ಲರೂ ಆಕರ್ಷಕ ವಿಜ್ಞಾನದ ಮಾದರಿ ತಯಾರಿಸಿ, ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಶಿಕ್ಷಣ ಇಲಾಖೆ ಪ್ರತಿ ಶಾಲೆಗೆ ₹ 52,200 ಸಾವಿರ ಸಹಾಯಧನ ನೀಡಿದೆ’ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಚೋಪ್ದಾರ್, ಉಮಾ ಮಹೇಶ್, ಸುರೇಶ್, ಎ.ಎಸ್.ಮುದ್ದಪ್ಪ ಉಪಸ್ಥಿತರಿದ್ದರು.

***

ವಿದ್ಯಾರ್ಥಿಗಳ ಉತ್ಸಾಹ, ಪ್ರೋತ್ಸಾಹ

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ತಯಾರಿಸಿದ ವಿಜ್ಞಾನ ಮತ್ತು ಗಣಿತದ ಮಾದರಿಗಳನ್ನು ಉತ್ಸಾಹದಿಂದ ಪ್ರದರ್ಶಿಸಿದರು. ಶಕ್ತಿಯ ವರ್ಗಾವಣೆ,
ತ್ಯಾಜ್ಯ ವಸ್ತುವಿನಿಂದ ವಿದ್ಯುತ್‌ ತಯಾರಿಕೆ, ಹಸಿರು ಮನೆ, ಬೆಳಕಿನ ಪ್ರತಿಫಲನ ನಿಯಮ, ಪ್ರಾಣಿ ಮತ್ತು ಮನುಷ್ಯರ ಜೀವಕೋಶ, ಸೂರ್ಯ ಮತ್ತು ಚಂದ್ರಗ್ರಹಣ, ಕಸದಿಂದ ರಸ, ಮಂಗನಕೋವಿ, ಪ್ರಕೃತಿಯ ಪಳೆಯುಳಿಕೆಗಳ ಮಾದರಿ, ಸಂಖ್ಯೆಗಳ ಸ್ಥಾನಬೆಲೆ ಆಟ, ಪರಿಸರ ಸ್ನೇಹಿ ಮಾದರಿ ಗ್ರಾಮ, ರಾಕೆಟ್ ಉಡಾವಣಾ ಮಾದರಿ, ಜಿಯೊಬೋರ್ಡ್‌, ಜೀರ್ಣಾಂಗ ವ್ಯವಸ್ಥೆ, ಬಾಗಿಲು ತೆರೆಯುವ– ಮುಚ್ಚುವ ಸ್ವಯಂಚಾಲಿತ ವ್ಯವಸ್ಥೆ, ಬೆಳಕಿನ ವಕ್ರೀಭವನ, ಮಾದರಿ ಸರ್ಕಾರಿ ಆಸ್ಪತ್ರೆ, ಗಣಿತ ಉಪಕರಣಗಳ ಮಾದರಿ ತಯಾರಿಸಿದ್ದರು.

ಗಮನ ಸೆಳೆದ ಮಾದರಿ: ಮನುಷ್ಯನ ಜೀರ್ಣಾಂಗ ವ್ಯವಸ್ಥೆಯ ಮಾದರಿಯಲ್ಲಿ ಪಿತ್ತಕೋಶ, ಯಕೃತ್, ಜಠರ, ಸಣ್ಣ ಕರುಳು, ದೊಡ್ಡ ಕರುಳು ಮೊದಲಾದ ಅಂಗಗಳ ಮಾದರಿಗಳನ್ನು ಪಾನೀಯ ಡಬ್ಬ ಹಾಗೂ ಪೈಪ್‌ ಬಳಸಿ ತಯಾರಿಸಲಾಗಿತ್ತು. ತ್ಯಾಜ್ಯದಿಂದ ತಯಾರಿಸಿದ್ದ ವಿದ್ಯುತ್‌ ಉತ್ಪಾದನೆಯ ಮಾದರಿ, ಸೂರ್ಯ ಮತ್ತು ಚಂದ್ರ ಗ್ರಹಣದ ಮಾದರಿ ಆಕರ್ಷಕವಾಗಿದ್ದವು. ವಿದ್ಯಾರ್ಥಿಗಳು ಉತ್ಸಾಹದಿಂದ ಅವುಗಳ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT