ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಶೌಚಾಲಯ ಬಳಕೆ: ಸಾರ್ವಜನಿಕರ ಗೊಂದಲ

ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ನಗರದ ಆರು ಕಡೆ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನ
Last Updated 13 ಜುಲೈ 2017, 6:13 IST
ಅಕ್ಷರ ಗಾತ್ರ

ಕಲಬುರ್ಗಿ: ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಹಾಗೂ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಮಹತ್ವಾಕಾಂಕ್ಷೆಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ‘ಇ–ಶೌಚಾಲಯ’ಗಳು ಮಾಹಿತಿ ಕೊರತೆಯಿಂದ ಸಮರ್ಪಕ ಬಳಕೆಯಾಗುತ್ತಿಲ್ಲ. ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲ, ಆತಂಕವಿದೆ.

ಮಹಾನಗರ ಪಾಲಿಕೆ ವತಿಯಿಂದ ‘ಇ–ಶೌಚಾಲಯ’ಗಳನ್ನು ಅಳವಡಿಸಲಾಗಿದೆ. ಆರಂಭದಿಂದ 20 ದಿನಗಳಲ್ಲಿ ಐದು ಕಡೆಯ ಇ–ಶೌಚಾಲಯಗಳಿಂದ ₹9,367 ಸಂಗ್ರಹವಾಗಿದೆ.

ಮೋಹನ್ ಲಾಡ್ಜ್ ಸಮೀಪವಿರುವ ಶೌಚಾಲಯವನ್ನು ಪ್ರತಿದಿನ ಸರಾಸರಿ 84 ಜನರಂತೆ (ಮಹಿಳೆಯರು ಮತ್ತು ಪುರುಷರು) ಬಳಕೆ ಮಾಡಿದ್ದಾರೆ. ರೈಲ್ವೆ ನಿಲ್ದಾಣ ಎದುರು 74 ಜನ, ಸಂತ್ರಾಸವಾಡಿ 46, ರಾಷ್ಟ್ರಪತಿ ವೃತ್ತ (ಜೇವರ್ಗಿ ಕ್ರಾಸ್‌) 43, ಕೇಂದ್ರ ಬಸ್ ನಿಲ್ದಾಣ 42 ಜನ ಬಳಸಿದ್ದಾರೆ.

ಹಳೆ ಚೌಕ್‌ ಪೊಲೀಸ್‌ ಠಾಣೆ ಬಳಿಯಿದ್ದ ಇ–ಶೌಚಾಲಯ ಘಟಕಗಳ ಬಗ್ಗೆ ಆಕ್ಷೇಪಣೆ ವ್ಯಕ್ತವಾದ ಕಾರಣ ಅವುಗಳನ್ನು ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಸ್ಥಳಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ವಾರದಲ್ಲಿ ಬಳಕೆಗೆ ಸಿದ್ಧವಾಗಲಿವೆ.

‘ಮೋಹನ್‌ ಲಾಡ್ಜ್‌ ಸಮೀಪದ ಇ–ಶೌಚಾಲಯದಲ್ಲಿ ಶೌಚ ಹಾಗೇ ಉಳಿಯುತ್ತಿದೆ. ಕೆಲ ಬಾರಿ ಹಸಿರು ಮತ್ತು ಕೆಂಪು ದೀಪವೂ ಇರುವುದಿಲ್ಲ. ಒಳಗೆ ಹೋದಾಗ ಇಂಗ್ಲಿಷ್‌ ಭಾಷೆಯಲ್ಲಿ ಧ್ವನಿ ಬರುತ್ತದೆ. ಇದನ್ನು ಕನ್ನಡದಲ್ಲಿ ಕೇಳಿಸಬೇಕು’ ಎಂದು ಸಾರ್ವಜನಿಕ ಹರೀಶ್‌ ಒತ್ತಾಯಿಸಿದರು.

‘₹2 ನಾಣ್ಯಗಳನ್ನು ಎರಡು ಬಾರಿ ಹಾಕಿದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಮೂತ್ರ ವಿಸರ್ಜನೆಗೆ ತೊಂದರೆಯಾಯಿತು’ ಎಂದು ಸುನಿಲ್‌ ಪ್ರೇಮ್‌ ರಾಠೋಡ್‌ ತಿಳಿಸಿದರು.

‘ಬಸ್‌ನಿಲ್ದಾಣ ಹತ್ತಿರ ಇ–ಶೌಚಾಲಯ ಅಳವಡಿಕೆಯಿಂದ ದೊಡ್ಡ ಸಮಸ್ಯೆ ನಿವಾರಿಸಿದಂತಾಗಿದೆ. ಆಟೊ ನಿಲ್ಲಿಸಿ ಬೇರೆಡೆ ಹೋಗಿ ಬರಲು ಆಗುತ್ತಿರಲಿಲ್ಲ. ಸುತ್ತಲಿನ ಹಣ್ಣಿನ ವ್ಯಾಪಾರಿಗಳು ಬಳಕೆ ಮಾಡುತ್ತಾರೆ’ ಎಂದು ಆಟೊ ಚಾಲಕ ಶರಣಬಸವ ಹೇಳಿದರು.

‘ಹೊಸ ವ್ಯವಸ್ಥೆ ಆದ್ದರಿಂದ ಜನರಲ್ಲಿ ತಿಳಿವಳಿಕೆ ಮೂಡಲು ಸಮಯ ಬೇಕು. ವಿದ್ಯಾವಂತರು ಶೌಚಾಲಯದ ಬಾಗಿಲಿಗೆ ಅಂಟಿಸಿರುವ ಕನ್ನಡ ಭಾಷೆ ಸೂಚನೆಗಳನ್ನು ಓದಿ ಬಳಸುತ್ತಿದ್ದಾರೆ. ಬಳಕೆ ಮತ್ತು ಪ್ರಚಾರಕ್ಕಾಗಿ ಪಾಲಿಕೆಯಿಂದ ಶೌಚಾಲಯ ಬಳಿ ಒಬ್ಬರನ್ನು ನೇಮಕ ಮಾಡಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲ ಕುಮಾರ್‌ ತಿಳಿಸಿದರು.

ಏನಿದು ಇ–ಶೌಚಾಲಯ?: ಸ್ವಯಂಚಾಲಿತ ಸೇವೆ ಹಾಗೂ ಯಾಂತ್ರಿಕ ವ್ಯವಸ್ಥೆಯನ್ನು ಒಳಗೊಂಡ ಶೌಚಾಲಯ ಇದಾಗಿದೆ. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತಿ ಜಾಗದಲ್ಲಿ ಪ್ರತ್ಯೇಕ ಘಟಕಗಳನ್ನು ಅಳವಡಿಸಲಾಗಿದೆ. ಒಂದು ಘಟಕಕ್ಕೆ ₹5.30 ಲಕ್ಷ ತಗುಲಿದ್ದು, 12 ಘಟಕಗಳಿಗೆ ಒಟ್ಟು ₹63.60 ಲಕ್ಷ ವೆಚ್ಚ ಮಾಡಲಾಗಿದೆ.

ಎಲ್ಲ ಶೌಚಾಲಯಗಳಿಗೂ ಒಳಚರಂಡಿ ಸಂಪರ್ಕ, ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇರಳದ ಸಂಸ್ಥೆಯೊಂದಕ್ಕೆ ನಿರ್ವಹಣೆ ಹೊಣೆ ವಹಿಸಲಾಗಿದೆ.

***

ಇ–ಶೌಚಾಲಯ ಬಳಕೆ ಹೇಗೆ?
ಇ–ಶೌಚಾಲಯದ ಬಾಗಿಲು ಮೇಲೆ ವಿದ್ಯುತ್‌ ಬೆಳಕು ಅಳವಡಿಸಲಾಗಿದೆ. ಕೆಂಪು ಬೆಳಕು ಇದ್ದರೆ ಒಳಗಡೆ ವ್ಯಕ್ತಿ ಇದ್ದಾರೆ ಎಂದರ್ಥ. ಹಸಿರು ಬೆಳಕು ಇದ್ದಾಗ ₹1, ₹2, ₹5 ಯಾವುದಾದರೊಂದು ನಾಣ್ಯ ಹಾಕಿ ಶೌಚಾಲಯದ ಬಾಗಿಲು ತೆರೆಯಬೇಕು. ಒಳಗಡೆ ಹೋದ ಬಳಿಕ ಬಾಗಿಲು ಮುಚ್ಚಿ ಚಿಲಕ ಹಾಕಿಕೊಳ್ಳಬೇಕು.

ಇಲ್ಲದಿದ್ದರೆ ನೀರು ಬರುವುದಿಲ್ಲ. ಶೌಚಾಲಯ ಸ್ವಯಂಚಾಲಿತ ಸ್ವಚ್ಛತಾ ವ್ಯವಸ್ಥೆ (ಸೆಲ್ಫ್ ಕ್ಲೀನಿಂಗ್)ಯನ್ನು ಒಳಗೊಂಡಿದ್ದು, ಬಳಕೆ ಮಾಡಿದ ಬಳಿಕ ನೀರಿನಿಂದ ಸ್ವಚ್ಛಗೊಳಿಸು ತ್ತವೆ. ಕೈ ತೊಳೆದುಕೊಳ್ಳಲು ವಾಷ್‌ಬೇಸಿನ್ ಅಳವಡಿಸಲಾಗಿದೆ.

***

ಬಾಗಿಲು ತೆರೆಯಲು ಕಬ್ಬಿಣದ ಬಿಲ್ಲೆ!
ಇ–ಶೌಚಾಲಯವನ್ನು ಉಚಿತವಾಗಿ ಬಳಸಲು ಕೆಲ ಕಿಡಿಗೇಡಿಗಳು ಬಗೆಬಗೆಯ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಕೆಲವರು ನಾಣ್ಯದ ಬದಲಿಗೆ ಕಬ್ಬಿಣದ ಬಿಲ್ಲೆಗಳು ಹಾಕಿದರೆ, ಇನ್ನೂ ಕೆಲವರು ಹೆಚ್ಚು ಬಳಕೆಯಲ್ಲಿರದ 50 ಪೈಸೆ ನಾಣ್ಯ ತುರುಕಿ ಶೌಚಾಲಯದ ಬಾಗಿಲು ತೆರೆಯಲು ಹರಸಾಹಸಪಟ್ಟಿದ್ದಾರೆ. ಕಬ್ಬಿಣದ ಬಿಲ್ಲೆ ಸುತ್ತಳತೆ ಹೆಚ್ಚು ಇರುವುದರಿಂದ ಮಷಿನ್‌ ಬಂದ್‌ ಆಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

***

ಜನರಿಗೆ ಚಿಲ್ಲರೆ ಸಮಸ್ಯೆ ಆಗದಂತೆ ₹1, ₹2 ಮತ್ತು ₹5 ನಾಣ್ಯ ಹಾಕಲು ಅವಕಾಶ ಇದೆ.ಇಲ್ಲಿ ಕರಪತ್ರ ಅಂಟಿಸಿದರೆ  ಕ್ರಮಕೈಗೊಳ್ಳುತ್ತೇವೆ.
ಪಿ.ಸುನೀಲಕುಮಾರ್‌, ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT