ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಗೆ ನೀರಾವರಿ ಯೋಜನೆ: ಕಾಂಗ್ರೆಸ್‌ ಕೊಡುಗೆ’

Last Updated 13 ಜುಲೈ 2017, 6:39 IST
ಅಕ್ಷರ ಗಾತ್ರ

ರಾಯಚೂರು: ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ನಡೆಸಿದ ಅವಧಿಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಕಷ್ಟು ಅನುದಾನ ಒದಗಿಸುತ್ತಾ ಬಂದಿದೆ. ಇದೀಗ ನಂದವಾಡಗಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಯಚೂರು ತಾಲ್ಲೂಕಿನಲ್ಲಿ 22 ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಮಾಡಿ, ಈ ಕೆರೆಗಳನ್ನು ಕಾಲುವೆಗಳಿಂದ ಭರ್ತಿ ಮಾಡುವ ಯೋಜನೆ ಸಿದ್ಧಪಡಿಸಿಕೊಳ್ಳಲು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಎಂಜಿನಿಯರುಗಳಿಗೆ ತಿಳಿಸಲಾಗಿದೆ. ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಅನುದಾನ ಬಂದಿದೆ. ರಾಂಪುರ ಏತ ನೀರಾವರಿ ಯೋಜನೆ ಜಾರಿ ಮಾಡಿರುವುದು. ಗೂಗಲ್‌ನಲ್ಲಿ ಬ್ಯಾರೇಜ್‌ ನಿರ್ಮಾಣ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಂಡಿದೆ’ ಎಂದು ತಿಳಿಸಿದರು.

‘2013–14 ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದವಾಡಗಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಈ ಯೋಜನೆಯಿಂದ ಲಿಂಗಸುಗೂರು ಹಾಗೂ ಮಾನ್ವಿ ತಾಲ್ಲೂಕುಗಳ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.

ಈ ಯೋಜನೆಗೆ 3.75 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಮೊದಲ ಪ್ಯಾಕೇಜ್‌ ಜಾಕ್‌ವೇಲ್‌ ಕಾಮಗಾರಿಗೆ ₹278 ಕೋಟಿ ಹಣ ಬಿಡುಗಡೆಯಾಗಿದೆ. 88,205 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಈಗಾಗಲೇ ಟೆಂಡರ್‌ ವಹಿಸಿದ್ದು, ಕಾಮಗಾರಿಯನ್ನು ಬೇಗ ಪೂರ್ಣಗೊಳಿಸುವುದಕ್ಕೆ ಗುತ್ತಿಗೆದಾರ ಕಂಪೆನಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಸಮಸ್ಯೆ ಗಮನಕ್ಕೆ ತರಲಿ: ‘ದೇವದುರ್ಗ ತಾಲ್ಲೂಕಿನಲ್ಲಿ ಯಾವ ಕಾಮಗಾರಿಗಳು ಬಾಕಿ ಇವೆ ಎಂಬುದನ್ನು ನನ್ನ ಗಮನಕ್ಕೆ ತಂದರೆ, ಖಂಡಿತವಾಗಿ ಸ್ಪಂದಿಸಿ ಕೆಲಸ ಮಾಡಿಸಬಹುದು. ದೇವದುರ್ಗದಲ್ಲಿ ಆಡಳಿತ ಇದೆಯೋ ಇಲ್ಲವೋ ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಒಂದು ವೇಳೆ ಆಡಳಿತ ಸಮರ್ಪಕವಾಗಿ ನಡೆದಿಲ್ಲವಾದರೆ ಜನಪ್ರತಿನಿಧಿಗಳು ಅದನ್ನು ಸರಿಪಡಿಸುವುದಕ್ಕೆ ಸೂಕ್ತ ವೇದಿಕೆ ಇದೆ. ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯಬಹುದು. ಪ್ರಗತಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಬಹುದು’ ಎಂದು ಹೇಳಿದರು.

‘ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಒಂದು ನಿಯಮವಿದೆ. ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಶಾಸಕ ಶಿವನಗೌಡ ನಾಯಕ ಅವರು ಮಾಜಿ ಸಚಿವರೂ ಇದ್ದಾರೆ. ಹೀಗಾಗಿ ಅವರಿಗೆ ಎಲ್ಲ ನಿಯಮಗಳು ಗೊತ್ತಿಲ್ಲದೆ ಇರುವುದಿಲ್ಲ. ಮುಖ್ಯಮಂತ್ರಿ ಭೇಟಿಗೆ ಜಿಲ್ಲಾಧಿಕಾರಿ ಅಥವಾ ಇನ್ನಿತರೆ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿಲ್ಲ. ನೇರವಾಗಿ ಸಿಎಂ ಕಚೇರಿಯನ್ನು ಅವರು ಸಂಪರ್ಕಿಸಬೇಕಿತ್ತು’ ಎಂದು ಅವರು ತಿಳಿಸಿದರು.

ಸಂಸದ ಬಿ.ವಿ.ನಾಯಕ ಮಾತನಾಡಿ, ‘ಶಾಸಕ ಶಿವನಗೌಡ ನಾಯಕ ಅವರಿಗೆ ನಿಜಕ್ಕೂ ಜನಪರ ಅಭಿವೃದ್ಧಿಯ ಕಾಳಜಿಯಿದ್ದರೆ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿರಲಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸುತ್ತಿದ್ದರು ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ರಾಮಣ್ಣ ಇರಬಗೇರಾ, ನಗರಸಭೆ ಉಪಾಧ್ಯಕ್ಷ ಜಯಣ್ಣ ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT