ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲೂ ತುಂಬಿ ಹರಿಯದ ‘ಆವತಿ’

ಕಡೂರು ತಾಲ್ಲೂಕಿನಲ್ಲಿ ಈ ವರ್ಷವೂ ಬರದ ಭೀತಿ: ರೈತರಲ್ಲಿ ಆತಂಕ
Last Updated 13 ಜುಲೈ 2017, 8:28 IST
ಅಕ್ಷರ ಗಾತ್ರ

ಕಡೂರು: 4 ವರ್ಷಗಳಿಂದ ಆವರಿಸಿರುವ ಬರದ ಛಾಯೆ ಕಡೂರು ತಾಲ್ಲೂಕಿನಲ್ಲಿ ಈ ಬಾರಿಯೂ ಬರ ಮುಂದುವರಿಯುವ ಲಕ್ಷಣ ಸ್ಪಷ್ಟವಾಗಿದೆ. ಮಳೆ  ಈ ಬಾರಿ ಉತ್ತಮವಾಗಿ ಸುರಿಯುವುದು ಎಂಬ ನಿರೀಕ್ಷೆ ಮಾತ್ರ ಸುಳ್ಳಾಗಿದೆ.

ಕಾರ್ಮೋಡಗಳಿಗೇನೂ ಬರವಿಲ್ಲ. ಕರಗಿ ಧರೆಗಿಳಿಯುತ್ತಿಲ್ಲ. ರೈತರಿಗೆ ಆಗಸ ನೋಡುವುದೊಂದನ್ನು ಬಿಟ್ಟು ಬೇರೇನೂ ಕೆಲಸವಿಲ್ಲ. ಮುಂಗಾರು ಕೈಕೊಟ್ಟಂತೆ ಹಿಂಗಾರು ಮಳೆಯಾದರೂ ಭೂಮಿಗೆ ಸುರಿಯಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ. ಆವತಿ ನದಿಯೂ ಮಳೆಗಾಲದಲ್ಲಿ ತುಂಬಿ ಹರಿಯುವ ಬದಲು ಬತ್ತಿರು ವುದು ರೈತರಲ್ಲಿ ಮತ್ತಷ್ಟು ಚಿಂತೆಗೆ ದೂಡಿದೆ.

ಈ ಸಮಯದಲ್ಲಿ ಸಾಮಾನ್ಯವಾಗಿ ಈರುಳ್ಳಿ ಕಳೆ ತೆಗೆಯುವ, ಹತ್ತಿ ಗಿಡಗಳಿಗೆ ಔಷಧ ಸಿಂಪಡಿಸುವ, ರಾಗಿ ಬೆಳೆಗೆ ಎಡೆಕುಂಟೆ ಹೊಡೆಯುವ ಕಾಯಕ ನಡೆಯುತ್ತಿತ್ತು. ಸತತ ಸೋನೆ ಮಳೆ ಸುರಿ ಯುತ್ತಿತ್ತು. ಆದರೆ ಈಗ ಎಲ್ಲವೂ ಸ್ಥಗಿತ. ಕೆಲವು ಬೆರಳೆಣಿಕೆಯ ರೈತರು ಕೊಳವೆ ಬಾವಿ ನೆಚ್ಚಿಕೊಂಡು ಅಲ್ಪ ಪ್ರಮಾಣದಲ್ಲಿ ಹತ್ತಿ ಈರುಳ್ಳಿ ಬೆಳೆದಿದ್ದಾರೆ.

ಬರಗಾಲ ಪೀಡಿತ ಕಡೂರು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದ ಪರಿಣಾಮ ಸಮೃದ್ಧ ನೀರು ನೀಡುತ್ತಿದ್ದ ಕೊಳವೆ ಬಾವಿಗಳಲ್ಲಿ ಶೇ 80 ರಷ್ಟು ಬತ್ತಿ ಹೋದವು. ಶೇ 70 ತೆಂಗು ಅಡಿಕೆ ತೋಟಗಳು ಒಣಗಿ ಹೋದವು.

ಉಳಿದವುಗಳಲ್ಲಿ ಬರುತ್ತಿದ್ದ ನೀರಿನ ಪ್ರಮಾಣ ತೀರ ಕಡಿಮೆಯಾಗಿದೆ. ಇದೀಗ ಮಳೆ ಬಂದು ಹಳ್ಳ ಕೊಳ್ಳಗಳು ಹರಿದು ಕೆರೆಗಳಲ್ಲಿ ನೀರು ತುಂಬಿದರೆ ಕೊಳವೆ ಬಾವಿಗಳು ಮರು ಜೀವ ಪಡೆಯುತ್ತವೆ. ಇಲ್ಲದಿದ್ದಲ್ಲಿ ಪ್ರಸ್ತುತ ಅಳಿದುಳಿದಿರುವ ತೆಂಗು- ಅಡಿಕೆ ತೋಟಗಳು ಸಂಪೂರ್ಣ ನಾಶವಾ ಗುತ್ತವೆ ಎಂಬ ಆತಂಕ ರೈತರದು.

ರೈತರಿಗೆ ಸದ್ಯಕ್ಕೆ ಬದುಕು ಸಾಗಿಸುವುದು ಹೇಗೆಂಬ ಚಿಂತೆ. ತೋಟಗಳು ಒಣಗಿ ಹೋಗಿವೆ. ಬೆಳೆ ಬೆಳೆಯಲು ಮಳೆಯಿಲ್ಲ. ಕೊಳವೆ ಬಾವಿಯಿಲ್ಲ. ಇನ್ನು  ದುಡಿಯುವುದು ಹೇಗೆ? ಕೂಲಿ ಮಾಡಲೂ ಕೆಲಸವಿಲ್ಲ. ಹೈನುಗಾರಿಕೆಯನ್ನೇ ನೆಚ್ಚಿಕೊಂಡ ರೈತರೂ ಇದ್ದಾರೆ. ಅವರಿಗೆ ಹಸುಗಳನ್ನು ಉಳಿಸುವುದು ಹೇಗೆ ಎಂಬ ಚಿಂತೆ ಶುರುವಾಗಿದೆ. ಹೀಗಾಗಿ ಸಿಕ್ಕಷ್ಟು ಬೆಲೆಗೆ ಹಸುಗಳ ಮಾರಾಟ ಕಾರ್ಯವು ನಡೆಯುತ್ತಿದೆ.

ತಾಲ್ಲೂಕಿನಲ್ಲಿ ರಾಗಿ ಬೆಳೆ ಬಿತ್ತನೆ ತೀರ ಕುಂಠಿತವಾಗಿದೆ. ಕಳೆದ ಸಾಲಿನಲ್ಲಿ ಆದಷ್ಟು ಬಿತ್ತನೆಯೂ ಈಬಾರಿ ಆಗಿಲ್ಲ. ಇಲ್ಲವೇ ಇಲ್ಲ ಎಂದು ಹೇಳಿದರೂ ತಪ್ಪಾಗಲಾರದು. ರೈತ ಸಂಪರ್ಕ ಕೇಂದ್ರ ಗಳೂ ಸೇರಿದಂತೆ ಗೊಬ್ಬರದ ಅಂಗಡಿ ಗಳಲ್ಲಿ ಗೊಬ್ಬರ ದಾಸ್ತಾನು ಖರ್ಚಾಗದೇ ಉಳಿದಿದೆ. ಮಳೆ ಬಾರದೆ ಏನನ್ನೂ ಮಾಡುವ ಪರಿಸ್ಥಿತಿಯಲ್ಲಿ ರೈತರು ಇಲ್ಲ ಎಂಬುದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್.

ರೈತರ ಭವಿಷ್ಯ ಪ್ರಕೃತಿಯ ಮೇಲೆ ನಿಂತಿದೆ. ಈಗ ಸಮೃದ್ಧವಾಗಿ ಮಳೆ ಬಂದರೂ ರೈತರು ಚೇತರಿಸಿಕೊಳ್ಳಲೇ ಕನಿಷ್ಠ 3 ವರ್ಷ ಬೇಕು. ಕುಡಿಯುವ ನೀರಿಗೂ ತತ್ವಾರವಾ ಗುವುದು ವಾಸ್ತವ, ಜಿಲ್ಲಾಡಳಿತ  ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕು. ಕಡೂರಿಗೆ ಶಾಶ್ವತ ನೀರಾವರಿ ಯೋಜನೆಗಳು ಬರಬೇಕು. ರೈತರ ಬೇಡಿಕೆ ಸಾಧುವಾದದ್ದೇ ಆದರೆ ಮಳೆ ಸಮೃದ್ಧವಾಗಿ ಆದರೆ  ಯೋಜ ನೆಗಳ ಅನುಷ್ಠಾನವು ಯಶಸ್ವಿ ಆಗುತ್ತವೆ ಎಂದು ರೈತರ ಎಂ.ಎಸ್.ವೆಂಕಟೇಶ ಅಯ್ಯಂ ಗಾರ್ ಹೇಳಿದರು.
ಬಾಲುಮಚ್ಚೇರಿ, ಕಡೂರು

***

ಅತಿ ಅಂತರ್ಜಲ ಬಳಕೆ ಪ್ರದೇಶ ಎಂದು ಅಧಿಸೂಚನೆ ಹೊರಡಿಸಿರುವ ಸರ್ಕಾರವು ಕುಡಿಯುವ ನೀರು ಹೊರತು ಪಡಿಸಿ ಕೊಳವೆ ಬಾವಿ ಕೊರೆಯಲು ನಿರ್ಬಂಧ ವಿಧಿಸಿದೆ  ಎಂ.ಎನ್.ರಾಮಸ್ವಾಮಿ. ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT