ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ದೃಶ್ಯಾವಳಿ ಪ್ರಸಾರ: ಸೈಬರ್‌ ಕ್ರೈಂಗೆ ದೂರು

ನಗರಸಭೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ, ಜೆಡಿಎಸ್‌ ಆಗ್ರಹ
Last Updated 13 ಜುಲೈ 2017, 9:30 IST
ಅಕ್ಷರ ಗಾತ್ರ

ಮಡಿಕೇರಿ: ನಗರಸಭೆ ಆವರಣದಲ್ಲಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಅಳವಡಿಸಿರುವ ಟಿ.ವಿಯಲ್ಲಿ ಅನ್ಯ ದೃಶ್ಯಾವಳಿಯನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿರುದ್ಧ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ.

ಡಾಟಾ ಆಪರೇಟರ್‌ ವಿಭಾಗದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ, ಜೆಡಿಎಸ್‌ ಸದಸ್ಯರು ಆಗ್ರಹಿಸಿದ್ದು ಯೋಜನಾ ನಿರ್ದೇಶಕ ಮಹಮ್ಮದ್‌ ಮುನೀರ್‌ಗೆ ಮನವಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?: ನಗರಸಭೆ ಸಭಾಂಗಣದ ಎದುರು ಕಳೆದ ಐದು ತಿಂಗಳ ಹಿಂದೆಯಷ್ಟೇ ಬೃಹತ್‌ ಟಿ.ವಿ ಅಳವಡಿಸಲಾಗಿತ್ತು. ಜುಲೈ 5ರಂದು ಮಧ್ಯಾಹ್ನ 3 ಗಂಟೆಯ ವೇಳೆ ಎರಡು ನಿಮಿಷಗಳ ಕಾಲ ದಿಢೀರ್‌ ಆಗಿ ಸಂಬಂಧವಿಲ್ಲದ ಮೂರು ಫೋಟೊ ಪ್ರಸಾರಗೊಂಡಿದ್ದವು.

ಕಚೇರಿಯ ಹೊರಗಿದ್ದ ಸಿಬ್ಬಂದಿಯೊಬ್ಬರು ಅದನ್ನು ಗಮನಿಸಿ ಟಿ.ವಿ ಆಫ್‌ ಮಾಡುವಂತೆ ಡಾಟಾ ಆಪರೇಟರ್‌ ವಿಭಾಗದ ಸಿಬ್ಬಂದಿಗೆ ಸೂಚಿಸಿದ್ದರು. ಅದನ್ನು ಗಮನಿಸಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್‌ ಅವರು ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌ಗೆ ಮಾಹಿತಿ ನೀಡಿದ್ದರು.

ಪ್ರಕಾಶ್‌ ಅವರು ಪೌರಾಯುಕ್ತೆ ಬಿ.ಶುಭಾ ಅವರಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಶುಭಾ ರಜೆಯಲ್ಲಿದ್ದ ಕಾರಣ ಪ್ರಕರಣ ತಣ್ಣಗಾಗಿತ್ತು. ಕೆಲವರು ಮಾತ್ರ ಅಶ್ಲೀಲ ದೃಶ್ಯಾವಳಿಯೇ ಪ್ರಸಾರವಾಗಿದೆ ಎಂದು ಆರೋಪಿಸಿದ್ದರು. 

ಬುಧವಾರ ಬೆಳಿಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ತನಿಖೆ ನಡೆಸಿ ವರದಿ ನೀಡುವಂತೆ ಮಹಮ್ಮದ್‌ ಮುನೀರ್‌ಗೆ ಸೂಚಿಸಿದರು. ಬೆಳಿಗ್ಗೆ 10 ಗಂಟೆಗೆ ನಗರಸಭೆಗೆ ಬಂದ ಯೋಜನಾ ನಿರ್ದೇಶಕರು, ಎಲ್ಲ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಸಿಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

‘ಸಿಬ್ಬಂದಿ ತಪ್ಪೇ ಮಾಡಿಲ್ಲ ಎನ್ನುವುದಾದರೆ ಟಿ.ವಿಯನ್ನು ಆಫ್‌ ಮಾಡುವ ಅಗತ್ಯವಾದರೂ ಏನಿತ್ತು. ಸದ್ಯಕ್ಕೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಡಾಟಾ ಆಪರೇಟಿಂಗ್‌ ವಿಭಾಗದಲ್ಲಿರುವ ಸಿಬ್ಬಂದಿಯ ಅವಧಿ ಮುಕ್ತಾಯವಾಗಿದೆ. ಆದರೂ ಸೇವೆಯಲ್ಲಿ ಮುಂದುವರಿಯುತ್ತಿದ್ದಾರೆ.

ಕೆಲವರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಕಚೇರಿಗೆ ಬಂದ ಹಿರಿಯರಿಗೆ ಗೌರವ ನೀಡುತ್ತಿಲ್ಲ. ಹಿಂದೆ ಕಡತವೊಂದು ನಾಪತ್ತೆಯಾಗಿತ್ತು. ಕೊನೆಗೆ ಡಾಟಾ ಆಪರೇಟರ್‌ ಸಿಬ್ಬಂದಿಯ ಟೇಬಲ್‌ ಮೇಲೆ ಪ್ರತ್ಯಕ್ಷವಾಗಿತ್ತು’ ಎಂದು ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌ ದೂರಿದ್ದಾರೆ. ಮನವಿ ಸಲ್ಲಿಸುವ ವೇಳೆ ಪಿ.ಡಿ.ಪೊನ್ನಪ್ಪ, ಅನಿತಾ ಪೂವಯ್ಯ, ಸಂಗೀತಾ ಪ್ರಸನ್ನ, ಸವಿತಾ ಹಾಜರಿದ್ದರು.’

***

ಅಶ್ಲೀಲ ದೃಶ್ಯ ಪ್ರಸಾರವಾಗಿಲ್ಲ; ಮಹಮ್ಮದ್‌

ಮಡಿಕೇರಿ: ‘ಯಾವುದೇ ಅಶ್ಲೀಲ ದೃಶ್ಯ ಪ್ರಸಾರವಾಗಿಲ್ಲ. ಜುಲೈ 5ರಂದು ಮಧ್ಯಾಹ್ನ 3 ಗಂಟೆ 7 ನಿಮಿಷದ ಸಂದರ್ಭದಲ್ಲಿ ಮೂರು ಫೋಟೊ ದಿಢೀರ್‌ ಆಗಿ ಟಿ.ವಿಯಲ್ಲಿ ಪ್ರತ್ಯಕ್ಷವಾಗಿವೆ. ಅದನ್ನೇ ಅಶ್ಲೀಲ ಚಿತ್ರವೆಂದು ಕೆಲವರು ಭಾವಿಸಿರುವ ಸಾಧ್ಯತೆಯಿದೆ.

ಟಿ.ವಿಯಲ್ಲಿ ಯೋಜನೆಗಳ ಮಾಹಿತಿ ಬಿಟ್ಟರೆ ಬೇರೆ ಯಾವ ದೃಶ್ಯಾವಳಿಯೂ ಪ್ರಸಾರವಾಗಬಾರದು. ಬೇರೆ ಚಿತ್ರಗಳು ಹೇಗೆ ಪ್ರಸಾರವಾದವು ಎಂಬುದರ ಬಗ್ಗೆ ತನಿಖೆ ನಡೆಸಲು ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗೂ ವರದಿ ನೀಡಲಾಗುವುದು’ ಎಂದು ಮಹಮ್ಮದ್‌ ಮುನೀರ್‌ ಸುದ್ದಿಗಾರರಿಗೆ ತಿಳಿಸಿದರು.

‘ನಗರಸಭೆ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿದೆ. ಎಲ್ಲ ಸಿಬ್ಬಂದಿಗೂ ವೈಫೈ ಪಾಸ್‌ವರ್ಡ್‌ ಗೊತ್ತಿದೆ. ನಗರಸಭೆ ಚಾಲಕರು, ಸದಸ್ಯರೂ ವೈಫೈ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಮೊಬೈಲ್‌ನ ಚಿತ್ರ ಗಳು ಟಿ.ವಿಯಲ್ಲಿ ಪ್ರಸಾರವಾಗಿರುವ ಸಾಧ್ಯತೆಯಿದೆ ಎಂದು ಡಾಟಾ ಆಪರೇ ಟರ್‌ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT