ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಲಕ್ಷ್ಮಿವೆಂಕಟರಮಣ ಸ್ವಾಮಿ ತೆಪ್ಪೋತ್ಸವ

ಪೊಲೀಸ್‌ ಇಲಾಖೆಯಿಂದ ಜರುಗಿದ ಕಾರ್ಯಕ್ರಮ
Last Updated 13 ಜುಲೈ 2017, 10:08 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ಅಮರಗಿರಿ ಮಾಲೇಕಲ್‌ ತಿರುಪತಿ ಲಕ್ಷ್ಮಿವೆಂಕಟರಮಣ ಸ್ವಾಮಿ ಜಾತ್ರೆಯ ಅಂತಿಮ ದಿನವಾದ ಮಂಗಳವಾರ ರಾತ್ರಿ ಪೊಲೀಸ್‌ ಇಲಾಖೆಯಿಂದ ತೆಪ್ಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ದೇವಾಲಯ ಹಾಗೂ ಸುತ್ತಮುತ್ತಲಿನ ಬೀದಿಗಳನ್ನು ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಮುಂಭಾಗ ಇರುವ ಪುಷ್ಕರಣಿಯಲ್ಲಿ ನಡೆಯುವ ತೆಪ್ಪೋತ್ಸವಕ್ಕೆ ಆಗಾಗ ಮಳೆಯ ಸಿಂಚನವಾಯಿತು.

ಮಂಗಳವಾರ ಬೆಳಿಗ್ಗೆ ದೇವಾಲಯದ ಮೂಲವಿಗ್ರಹ ಶಯನ ವ್ಯವಸ್ಥೆಯಲ್ಲಿರುವ ಗೋವಿಂದರಾಜ ಸ್ವಾಮಿ ಹಾಗೂ ಲಕ್ಷ್ಮಿದೇವಿಗೆ ವಿವಿಧ ಅಭಿಷೇಕಗಳು ಪ್ರಧಾನ ಅರ್ಚಕ ರಾಮಪ್ರಸಾದ್‌ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದವು.

ಶ್ರೀದೇವಿ–ಭುದೇವಿ ಸಮೇತ ಲಕ್ಷ್ಮಿವೆಂಕಟರಮಣಸ್ವಾಮಿ ಉತ್ಸವ ಮೂರ್ತಿಯನ್ನು ವಿವಿಧ ಆಭರಣಗಳು ಮತ್ತು ಪುಷ್ಪಗಳಿಂದ ಅಲಂಕರಿಸಿ ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ಬಳಿಕ ಮಂಗಲ ವಾದ್ಯಗಳೊಂದಿಗೆ ಗ್ರಾಮಾಂತರ ಸಿಪಿಐ ಸಿದ್ದರಾಮೇಶ್‌, ಜೆ.ಎಂ.ಎಫ್‌.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ನಿರ್ಮಲಾ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ, ತಹಶೀಲ್ದಾರ್‌ ಎನ್‌.ವಿ.ನಟೇಶ್‌ ಅವರ ಸಮ್ಮುಖದಲ್ಲಿ ದೇವಾಲಯ ಆವರಣದಿಂದ ಪುಷ್ಕರಿಣಿ ಮುಂಭಾಗಕ್ಕೆ ಕರೆತರಲಾಯಿತು.

ಪುಷ್ಕರಿಣಿಯಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದ ತೆಪ್ಪದಲ್ಲಿ ದೇವರ ಮೂರ್ತಿಯನ್ನು ಕೂರಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಆರ್‌.ನಾಗರಾಜ್‌, ಸದಸ್ಯರಾದ ಎನ್‌.ಸಿ.ಗೋವಿಂದರಾಜ್‌, ತಿರುಪತಿ ಚಂದ್ರು,  ಅವರು ದೇವರಿಗೆ ಪೂಜೆ, ಮಹಾಮಂಗಳಾರತಿ ಸಲ್ಲಿಸಿದರು.

ಅರಸೀಕೆರೆ ನಗರ, ಜಿ.ಶಂಕರನಹಳ್ಳಿ, ಅಗ್ಗುಂದ, ಬೊಮ್ಮೇನಹಳ್ಳಿ, ಸಿದ್ದರಹಳ್ಳಿ, ತಿರುಪತಿ, ಜಾಜೂರು, ನಾಗತಿಹಳ್ಳಿ, ಪುರಲೇಹಳ್ಳಿ, ಭೈರನಾಯಕನಹಳ್ಳಿ, ಅಂಚೆ ಕೊಪ್ಪಲು ಹಾಗೂ ಸುತ್ತಲಿನ ಹಲವು ಹಳ್ಳಿಗಳ ಗ್ರಾಮಸ್ಥರು ತೆಪ್ಪೋತ್ಸವದಲ್ಲಿ ಭಾಗವಹಿಸಿ ಕಣ್ತುಂಬಿಕೊಂಡರು. 15 ದಿನಗಳಿಂದ ಜಾತ್ರೆ ಅಂಗವಾಗಿ ನಡೆಯುತ್ತಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳಿಗೆ ತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT