ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಂದು ಬೆಂಗಳೂರಿಗೆ ಕಾರು ರ‍್ಯಾಲಿ

Last Updated 13 ಜುಲೈ 2017, 10:19 IST
ಅಕ್ಷರ ಗಾತ್ರ

ಕೋಲಾರ: ‘ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಈ ಧೋರಣೆ ಖಂಡಿಸಿ ಕೋಲಾರದಿಂದ ಬೆಂಗಳೂರಿಗೆ ಜುಲೈ 16ರಂದು ಕಾರು ರ‍್ಯಾಲಿ ನಡೆಸಿ ಮತ್ತು ಸರ್ಕಾರದ ಪಿಂಡ ತರ್ಪಣ ಬಿಟ್ಟು ಧರಣಿ ನಡೆಸಲಾಗುತ್ತದೆ’ ಎಂದು ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನೀಲೇಶ್‌ಗೌಡ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಯಲುಸೀಮೆ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ನೀರಿನ ಸಮಸ್ಯೆ ಇದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ’ ಎಂದರು.

‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸಂಸದರಾದ ಕೆ.ಎಚ್‌. ಮುನಿಯಪ್ಪ ಮತ್ತು ಎಂ.ವೀರಪ್ಪ ಮೊಯಿಲಿ ಈ ಹಿಂದೆ ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಉನ್ನತ ಸ್ಥಾನದಲ್ಲಿ ಇದ್ದರು. ಅವರಿಗೆ ರೈತರ ಸಂಕಷ್ಟದ ಅರಿವು ಇದ್ದಿದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಅವಳಿ ಜಿಲ್ಲೆಗಳ ನೀರಿನ ಸಮಸ್ಯೆ ಪರಿಹರಿಸುತ್ತಿದ್ದರು. ಆದರೆ, ಅವರಿಗೆ ರೈತರ ಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ಮುನಿಯಪ್ಪ ಮತ್ತು ಮೊಯಿಲಿ ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿದ್ದಾರೆ’ ಎಂದು ಟೀಕಿಸಿದರು.

ಪರಿಸ್ಥಿತಿ ಬದಲಾಗಿದೆ: ‘ಕಾಲ ಕಾಲಕ್ಕೆ ಉತ್ತಮ ಮಳೆಯಾಗಿದ್ದರೆ ಜಿಲ್ಲೆಯ ರೈತರು ಸರ್ಕಾರದಿಂದ ಯಾವುದೇ ಸವಲತ್ತು ನಿರೀಕ್ಷಿಸುತ್ತಿರಲಿಲ್ಲ. ಜಿಲ್ಲೆಯ ರೈತರು ಈ ಹಿಂದೆ ಇಡೀ ದೇಶಕ್ಕೆ ತರಕಾರಿ ಬೆಳೆದು ಕೊಡುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸತತ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಹೇಳಿದರು.

‘ರ‍್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ಕಾರುಗಳು ಪಾಲ್ಗೊಳ್ಳಲಿವೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸರ್ಕಾರದ ಪಿಂಡತರ್ಪಣಕ್ಕೆ ಪೂಜೆ ಸಲ್ಲಿಸಿ ಧರಣಿ ಮಾಡಿ ನಂತರ ಕೆಂಗೇರಿ ಮೋರಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ರೈತರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ವೇದಿಕೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ನಟರಾಜ್, ಉಪಾಧ್ಯಕ್ಷ ಹರೀಶ್, ಗೌರವಾಧ್ಯಕ್ಷ ಗುರುಪ್ರಸಾದ್, ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT