ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ಕ್ಕೆ ಕಾಂಗ್ರೆಸ್‌ ಪದಾಧಿಕಾರಿಗಳ ಸಮಾವೇಶ

ಕೋಲಾರ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ವಿ.ಆರ್.ಸುದರ್ಶನ್ ಹೇಳಿಕೆ
Last Updated 13 ಜುಲೈ 2017, 11:18 IST
ಅಕ್ಷರ ಗಾತ್ರ

ಕೋಲಾರ: ‘ನಗರದಲ್ಲಿ ಜುಲೈ 22ರಂದು ಪಕ್ಷದ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ’ ಎಂದು ಮುಖಂಡ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಪಕ್ಷದ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಕೋಲಾರ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಪಕ್ಷದಲ್ಲಿ 2004ರಲ್ಲಿ ಆರಂಭವಾದ ಗೊಂದಲ ಬಗೆಹರಿದಿಲ್ಲ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕಾದರೆ ಜಿಲ್ಲಾ ಮುಖಂಡರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದರು.

‘ಕಾಂಗ್ರೆಸ್‌ಗೆ ಮುಂದಿನ ವಿಧಾನಸಭಾ ಚುನಾವಣೆ ಅಳಿವು ಉಳಿವಿನ ಪ್ರಶ್ನೆ. ಪಕ್ಷದಲ್ಲಿನ ಗೊಂದಲಕ್ಕೆ ಸಾಮಾನ್ಯ ಕಾರ್ಯಕರ್ತರು ಕಾರಣರಲ್ಲ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾನದಂಡ ನಿರ್ಧರಿಸಲು ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೇರೆ ಪಕ್ಷಗಳಿಗಿಂತ ಕಾಂಗ್ರೆಸ್‌ಗೆ ರಾಷ್ಟ್ರೀಯ ಬದ್ಧತೆ ಮತ್ತು ಜವಾಬ್ದಾರಿ ಹೆಚ್ಚಿದೆ. ಜನರು ಪಕ್ಷವನ್ನು ಬೆಂಬಲಿಸಲು ಸಿದ್ಧರಿದ್ದಾರೆ. ಜನ ಬೆಂಬಲ ಪಡೆಯಲು ಬೂತ್ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಸಮಯ ಮೀಸಲಿಡಬೇಕು: ‘ಶಾಸಕ ರಮೇಶ್‌ಕುಮಾರ್‌ ಆರೋಗ್ಯ ಸಚಿವರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಸಚಿವ ಸ್ಥಾನದ ಜವಾಬ್ದಾರಿ ಜತೆಗೆ ಪಕ್ಷ ಸಂಘಟನೆಗೂ ಸಮಯ ಮೀಸಲಿಡಬೇಕು. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ಗೊಂದಲ ನಿವಾರಿಸಲು ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಪಕ್ಷದ ಹಿರಿಯ ಮುಖಂಡರೊಂದಿಗೆ ಶೀಘ್ರವೇ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಗೊಂದಲ ನಿವಾರಿಸಬೇಕು: ಮುಖಂಡ ಎಂ.ಎಲ್‌.ಅನಿಲ್‌ಕುಮಾರ್ ಮಾತನಾಡಿ, ‘ವಿಭಾಗೀಯ ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಕರೆತರುವ ಪ್ರಯತ್ನ ನಡೆದಿದೆ. ಮುಖಂಡರು ಸಮಾವೇಶದೊಳಗೆ ಕೋಲಾರ ಮತ್ತು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿನ ಗೊಂದಲ ನಿವಾರಿಸಬೇಕು’ ಎಂದು ಹೇಳಿದರು.

‘ಸಮಾವೇಶದ ಯಶಸ್ಸಿಗೆ ಮುಖಂಡರು ಹಾಗೂ ಕಾರ್ಯಕರ್ತರು ಸಹಕರಿಸಬೇಕು. ಸದಸ್ಯತ್ವ ಬಾಕಿ ಉಳಿಸಿಕೊಂಡವರು ಶೀಘ್ರವೇ ಸದಸ್ಯತ್ವ ಸಂಖ್ಯೆ ಹೆಚ್ಚಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ ಮನವಿ ಮಾಡಿದರು.

ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಸಚಿವ ನಿಸಾರ್ ಅಹಮ್ಮದ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅತಾವುಲ್ಲಾಖಾನ್, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಫ್ರಾನ್ಸಿಸ್, ಪ್ರಧಾನ ಕಾರ್ಯದರ್ಶಿ ಜಮಿವುಲ್ಲಾ, ಎಸ್ಸಿ ವಿಭಾಗದ ಅಧ್ಯಕ್ಷ ಕೆ.ಜಯದೇವ್, ಕೆಪಿಸಿಸಿ ಸದಸ್ಯ ರಾಜಣ್ಣ, ನಗರಸಭೆ ಸದಸ್ಯರಾದ ಸಲಾವುದ್ದಿನ್‌ ಬಾಬು, ಪ್ರಸಾದ್‌ಬಾಬು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT