ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರವಧನ ಹೆಸರಲ್ಲಿ ಸರ್ಕಾರದಿಂದ ನಿರಂತರ ಶೋಷಣೆ’

ಆಶಾ ಕಾರ್ಯಕರ್ತೆಯರನ್ನು ಪೂರ್ಣಾವಧಿ ನೌಕರರು ಎಂದು ಪರಿಗಣಿಸಲು ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಸೋಮಶೇಖರ್ ಆಗ್ರಹ
Last Updated 13 ಜುಲೈ 2017, 11:24 IST
ಅಕ್ಷರ ಗಾತ್ರ

ಬಳ್ಳಾರಿ: ‘ಗೌರವಧನದ ಹೆಸರಿನಲ್ಲಿ ಸರ್ಕಾರವು ಆಶಾ ಕಾರ್ಯಕರ್ತೆಯರನ್ನು ನಿರಂತರವಾಗಿ ಶೋಷಿಸುತ್ತಿದೆ’ ಎಂದು ಎಐಯುಟಿಯುಸಿ ರಾಜ್ಯ  ಘಟಕದ ಕಾರ್ಯದರ್ಶಿ ಕೆ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ರಾಘವ ಕಲಾಮಂದಿರ ದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ತಾಯಂದಿರು ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡುತ್ತಿ ರುವ ಕಾರ್ಯಕರ್ತೆಯರನ್ನು ಪೂರ್ಣಾವಧಿ ನೌಕರರೆಂದು ಪರಿಗಣಿಸುತ್ತಿಲ್ಲ. ಗೌರವಧನವನ್ನು ಹೆಚ್ಚಿಸುವ ಕಡೆಗೂ ಗಂಭೀರ ಗಮನ ಹರಿಸಿಲ್ಲ. ಗೌರವಧನ ಹೆಚ್ಚಿಸಬೇಕು ಎಂಬ ಹೋರಾಟಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ’ ಎಂದು ದೂರಿದರು.

‘ಹೋರಾಟದಿಂದ ಗಳಿಸಿದ ಕಾರ್ಮಿಕರ ಹಕ್ಕುಗಳನ್ನು ಹಾಗೂ ಕಾರ್ಮಿಕ ಪರ ಕಾನೂನುಗಳನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸುತ್ತಿದೆ. ಒಳ್ಳೆಯ ದಿನಗಳನ್ನು ತರುವುದಾಗಿ ಹುಸಿ ಭರವಸೆಗಳನ್ನು ನೀಡಿದ ಸರ್ಕಾರವು ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಪಾಲಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಈಗಿನ ಬಿಜೆಪಿ ಸರ್ಕಾರದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡು ಕೂಡ ಬಂಡವಾಳಶಾಹಿ ಪಕ್ಷಗಳಾಗಿವೆ. ಸರ್ಕಾರ ಗಳ ಬದಲಾವಣೆಯಿಂದ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರವಿಲ್ಲದಂತಾಗಿದೆ. ಹೀಗಾಗಿ ಹೋರಾಟಗಳನ್ನು ಬೆಳೆಸುತ್ತಲೇ ಸಮಾಜವಾದಿ ಕ್ರಾಂತಿಗೆ  ತಯಾರಾಗ ಬೇಕು’ ಎಂದು ಪ್ರತಿಪಾದಿಸಿದರು,

ಸಮಾವೇಶವನ್ನು ಉದ್ಘಾಟಿಸಿದ ಡಾ.ಯೋಗಾನಂದ ರೆಡ್ಡಿ, ‘ಆಶಾ ಕಾರ್ಯಕರ್ತೆಯರ ಪ್ರಯತ್ನದಿಂದಾಗಿ ಮನೆಗಳಲ್ಲಿ ಹೆರಿಗೆಯಾಗುವ ಪ್ರಕರಣ ಗಳು ನಿಂತಿವೆ. ತಾಯಿ ಮತ್ತು ಶಿಶುವಿನ ಮರಣದ ಸಂಖ್ಯೆಯು ಸಹ ಗಣನೀಯ ವಾಗಿ ಕಡಿಮೆಯಾಗಿದೆ’ ಎಂದರು.

‘ಕಾರ್ಯಕರ್ತೆಯರ ವಿಶಿಷ್ಟ ಸೇವೆಯ ಬಗ್ಗೆ ರಾಷ್ಟ್ರೀಯ- ಮತ್ತು ಅಂತರ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಆದರೆ ಸೌಕರ್ಯ ನೀಡುವ ವಿಚಾರದಲ್ಲಿ ಜಿಪುಣತನ ತೋರುತ್ತವೆ’ ಎಂದು ಟೀಕಿಸಿದರು. ಸಂಘದ ಗೌರವ ಅಧ್ಯಕ್ಷೆ ಎ.ಶಾಂತಾ ಅಧ್ಯಕ್ಷತೆ ವಹಿಸಿದ್ದರು.

ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ  ಎಂ.ಎನ್‌.ಮಂಜುಳಾ, ದೇವದಾಸ್, ಈರಮ್ಮ, ಗೀತಾ, ರಾಜೇಶ್ವರಿ, ಗೌರಮ್ಮ ವೇದಿಕೆಯಲ್ಲಿದ್ದರು.

ವಿವಿಧ ತಾಲ್ಲೂಕಿನ ಮುಖಂಡರಾದ ನೇತ್ರಾವತಿ, ಪಕ್ಕೀರಮ್ಮ  ಹೋಸಪೇಟೆ, ಪ್ರತಿಭಾ, ಮಂಗಳಾ, ಅನಂತಲಕ್ಕ್ಮಿ. ಎಲ್ಲಮ್ಮ,  ಜಲಜಾಕ್ಷಿ, ಪರಿಮಳ,   ಚೆನ್ನಮ್ಮ . ಶಶಿಕಲಾ. ಕಮಲಾ ಮತ್ತು   ಜ್ಯೋತಿ ಉಪಸ್ಥಿತರಿದ್ದರು.

ಮೆರವಣಿಗೆ:  ಸಮಾವೇಶಕ್ಕೂ ಮುನ್ನ ಕಾರ್ಯಕರ್ತೆಯರು ನಗರದ ಗಾಂಧಿ ಭವನದಿಂದ ರಾಘವ ಕಲಾಮಂದಿರ ವರೆಗೆ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT