ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಾವಧಿ ಬೌಲಿಂಗ್ ಕೋಚ್‌ಗೆ ಪಟ್ಟು

ಆಡಳಿತಾಧಿಕಾರಿಗಳ ಸಮಿತಿಯನ್ನು ಭೇಟಿ ಮಾಡಲು ರವಿಶಾಸ್ತ್ರಿ ಸಿದ್ಧತೆ
Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಬೌಲಿಂಗ್‌ ಕೋಚ್‌ ಬೇಕು ಎಂದು ಪಟ್ಟು ಹಿಡಿದಿರುವ ಮುಖ್ಯ ಕೋಚ್‌ ರವಿಶಾಸ್ತ್ರಿ ಅವರು ತಂಡದ ಶ್ರೀಲಂಕಾ ಪ್ರವಾಸಕ್ಕಿಂತ ಮೊದಲೇ ಇದನ್ನು ಕಾರ್ಯಗತ ಗೊಳಿಸಲು ಪ್ರಯತ್ನ ನಡೆಸಿದ್ದಾರೆ.

ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ರವಿಶಾಸ್ತ್ರಿ ಅವರನ್ನು ಮುಖ್ಯ ಕೋಚ್‌ ಆಗಿ ಜುಲೈ 11ರಂದು ನೇಮಕ ಮಾಡಿತ್ತು. ಇದರ ಜೊತೆಯಲ್ಲೇ ಬ್ಯಾಟಿಂಗ್ ಸಲಹೆಗಾರರನ್ನಾಗಿ ರಾಹುಲ್ ದ್ರಾವಿಡ್ ಮತ್ತು ಬೌಲಿಂಗ್ ಸಲಹೆಗಾರ ರನ್ನಾಗಿ ಆಗಿ ಜಹೀರ್ ಖಾನ್ ಅವರನ್ನೂ ನೇಮಿಸಿತ್ತು. ಆದರೆ ಜಹೀರ್ ಖಾನ್ ಅವರದ್ದು ಕೂಡ ಸಲಹೆಗಾರನ ಪಾತ್ರ, ಅವರು ವರ್ಷಪೂರ್ತಿ ತಂಡದ ಜೊತೆ ಇರಲು ಸಾಧ್ಯವಿಲ್ಲ ಎನ್ನಲಾಗಿದೆ.

2016ರ ವರೆಗೆ ತಂಡದ ಬೌಲಿಂಗ್ ಕೋಚ್‌ ಆಗಿದ್ದ ಭರತ್ ಅರುಣ್ ಬಗ್ಗೆ ರವಿಶಾಸ್ತ್ರಿ ಅವರಿಗೆ ಒಲವು ಇದೆ. ಬೌಲಿಂಗ್ ಕೋಚ್ ಆಯ್ಕೆಗಾಗಿ ಜಹೀರ್ ಖಾನ್ ಅವರ ಹೆಸರನ್ನು ಶಿಫಾರಸು ಮಾಡುವಾಗ ಕ್ರಿಕೆಟ್ ಸಲಹಾ ಸಮಿತಿ ರವಿಶಾಸ್ತ್ರಿ ಅವರೊಂದಿಗೆ ಚರ್ಚಿಸಲಿಲ್ಲ. ಅರುಣ್‌ ಅವರನ್ನು ನೇಮಿಸುವ ಬಗ್ಗೆ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರೊ ಬ್ಬರಿಗೆ ಭಿನ್ನಾಭಿಪ್ರಾಯವೂ ಇತ್ತು. ಇಷ್ಟು ಮಾತ್ರವಲ್ಲದೆ ಜಹೀರ್ ಅವರು ವರ್ಷ ದಲ್ಲಿ 100 ದಿನಗಳಿಗಿಂತ ಹೆಚ್ಚು ಕಾಲ ತಂಡದ ಜೊತೆ ಇರಲು ಸಾಧ್ಯವಿಲ್ಲ ಎಂದೂ ತಿಳಿದು ಬಂದಿದೆ. ಅವರ ವೇತ ನದ ಬಗ್ಗೆ ಇನ್ನೂ ‘ಚೌಕಾಶಿ’ ನಡೆಯುತ್ತಿದೆ.

‘ಅರುಣ್ ಅವರನ್ನು ನೇಮಕ ಮಾಡಲು ಸಾಧ್ಯವಾಗದಿದ್ದರೆ ಆಸ್ಟ್ರೇಲಿ ಯಾದ ಜೇಸನ್ ಗಿಲೆಸ್ಪಿಯವರನ್ನಾದರೂ ನೀಡಿ’ ಎಂದು ರವಿಶಾಸ್ತ್ರಿ ಹೇಳಿದ್ದರು. ಆದರೆ ಗಿಲೆಸ್ಪಿ ಪಪುವಾ ನ್ಯೂಜಿನಿ ತಂಡದ ಕೋಚ್ ಆಗಿರುವುದರಿಂದ ಶಾಸ್ತ್ರಿ ಅವರ ಮಾತನ್ನು ಕ್ರಿಕೆಟ್ ಸಲಹಾ ಸಮಿತಿ ಪುರಸ್ಕರಿಸಲಿಲ್ಲ. ಕರ್ನಾಟಕದ ವೆಂಕಟೇಶ ಪ್ರಸಾದ್ ಅವರ ಹೆಸರೂ ಬಿಸಿಸಿಐ ಪಟ್ಟಿಯಲ್ಲಿತ್ತು. ಆದರೆ ಭರತ್ ಅರುಣ್ ಅವರನ್ನು ಹೊರತುಪಡಿಸಿ ಇತರ ಯಾರನ್ನು ನೇಮಕ ಮಾಡು ವುದಕ್ಕೂ ರವಿಶಾಸ್ತ್ರಿ ಒಪ್ಪಲಾರರು ಎಂಬ ಕಾರಣದಿಂದ ಪ್ರಸಾದ್‌ ಹೆಸರನ್ನು ಕೈಬಿಡಲಾಗಿದೆ.

ವಾರಾಂತ್ಯದಲ್ಲಿ ಭೇಟಿ?: ಬಿಸಿಸಿಐ ಮೂಲಗಳ ಪ್ರಕಾರ ರವಿಶಾಸ್ತ್ರಿ ವಾರಾಂತ್ಯದಲ್ಲಿ ಬಿಸಿಸಿಐ ಆಡಳಿತಾಧಿ ಕಾರಿಗಳ ಸಮಿತಿಯವರನ್ನು ಭೇಟಿ ಮಾಡಿ ಬೌಲಿಂಗ್ ಕೋಚ್ ನೇಮಕಕ್ಕೆ ಒತ್ತಾಯಿಸಲಿದ್ದಾರೆ. ಇದಕ್ಕಾಗಿ ಅವರು ಇಂಗ್ಲೆಂಡ್‌ ಪ್ರವಾಸವನ್ನು ಮೊಟಕು ಗೊಳಿಸುವ ಸಾಧ್ಯತೆ ಇದೆ.

‘ಜಹೀರ್ ಖಾನ್‌ ಬಗ್ಗೆ ರವಿಶಾಸ್ತ್ರಿ ಅವರಿಗೆ ಆದರವಿದೆ. ಆದರೆ ಪೂರ್ಣ ಪ್ರಮಾಣದ ಬೌಲರ್ ಬೇಕು ಎಂಬುದು ಅವರ ಉದ್ದೇಶ. ಜಹೀರ್ ಖಾನ್‌ ನೀಡುವ ಸಲಹೆಗಳನ್ನು ಭರತ್‌ ಅರುಣ್‌ ಜಾರಿಗೆ ತಂದರೆ ತಂಡದ ಬೌಲಿಂಗ್ ಬಲ ಹೆಚ್ಚಲಿದೆ’ ಎಂದು ಬಿಸಿಸಿಐ ಪದಾಧಿಕಾರಿ ಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಭರತ್‌ ಅರುಣ್‌ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲು ಕ್ರಿಕೆಟ್ ಸಲಹಾ ಸಮಿತಿಯ ಸೌರವ್‌ ಗಂಗೂಲಿ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಅವರನ್ನೇ ಕೋಚ್ ಆಗಿ ಪಡೆದು ಗಂಗೂಲಿ ಮೇಲೆ ಸೇಡು ತೀರಿಸುವ ಉದ್ದೇಶವೂ ರವಿಶಾಸ್ತ್ರಿ ಅವರ ಪ್ರಯತ್ನದ ಹಿಂದೆ ಇದೆ.

**

ಭರತ್ ಬಗ್ಗೆ ಒಲವು ಯಾಕೆ?

80ರ ದಶಕದಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ಆಡುತ್ತಿದ್ದಾಗಲೇ ಭರತ್ ಮತ್ತು ರವಿಶಾಸ್ತ್ರಿ ಜೊತೆಯಾಗಿ ಇದ್ದರು. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಬೌಲಿಂಗ್ ಸಲಹೆಗಾರರಾಗಿದ್ದ ಅರುಣ್ ಅವರನ್ನು ಭಾರತ ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲು ಹಿಂದಿನ ಬಿಸಿಸಿಐ ಅಧ್ಯಕ್ಷ ಎನ್‌.ಶ್ರೀನಿವಾಸನ್ ಒಪ್ಪಿಕೊಳ್ಳಲು ರವಿಶಾಸ್ತ್ರಿ ಅವರ ಒತ್ತಾಯವೇ ಕಾರಣ.

ಜೋ ಡೇವ್ಸ್ ಅವರ ಬದಲಿಗೆ 2014ರಲ್ಲಿ ಬೌಲಿಂಗ್ ಕೋಚ್ ಆಗಿ ನೇಮಕಗೊಂಡ ಭರತ್‌ 2016ರಲ್ಲಿ ರವಿಶಾಸ್ತ್ರಿ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ವರೆಗೂ ತಂಡದ ಜೊತೆ ಇದ್ದರು.

ಆಟಗಾರನಾಗಿ ಹೆಸರು ಮಾಡದಿದ್ದರೂ ಭರತ್ ಅರುಣ್‌ ಅವರದು ತರಬೇತಿಯಲ್ಲಿ ಎತ್ತಿದ ಕೈ. ವೇಗದ ಬೌಲಿಂಗ್‌ಗೆ ಸಂಬಂಧಿಸಿದ ತರಬೇತಿಯಲ್ಲಿ ಅವರು ತಮ್ಮದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT