ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾಶೀಲ ಕಲಾವಿದರಿಂದ ಬಯಲಾಟಕ್ಕೆ ಅಸ್ತಿತ್ವ

Last Updated 14 ಜುಲೈ 2017, 5:43 IST
ಅಕ್ಷರ ಗಾತ್ರ

ದಾವಣಗೆರೆ: ಬಯಲಾಟವನ್ನು ಉಳಿಸಲು ಸಮುದಾಯವೇ ಶ್ರಮಿಸ ಬೇಕು ಎಂಬ ಅಭಿಪ್ರಾಯ ಹಿಂದಿ ನಿಂದಲೂ ವ್ಯಕ್ತವಾಗುತ್ತಿದೆ. ಆದರೆ, ಕಲಾವಿದರು ಬಯಲಾಟದ ಗುಣಮಟ್ಟ ಕಾಪಾಡುತ್ತಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ತೀಕ್ಷ್ಣವಾಗಿ ಹೇಳಿದರು.

ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆರಂಭಗೊಂಡ ಎರಡು ದಿನಗಳ ಬಯಲಾಟ ಯಕ್ಷಗಾನ ಕಲಾ ಸಂಭ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ಕಲಾವಿದರ ಹಾಡು, ಕುಣಿತ, ಸಂಭಾಷಣೆ, ಪ್ರಸಾಧನ, ವೇಷ ಭೂಷಣ ಕಳಪೆಯಾಗಿದೆ. ಈ ಬಗ್ಗೆ ಕಲಾವಿದರು  ಗಮನ ಹರಿಸಬೇಕು. ಗುಣಮಟ್ಟ ಕೊರತೆ ನಿವಾರಿಸಿಕೊಂಡರೆ ಹೆಚ್ಚಿನ ಪ್ರದರ್ಶನಗಳು ಸಿಗುವುದಕ್ಕೆ ಈಗಲೂ ಅಡ್ಡಿಯಿಲ್ಲ ಎಂದು ಅಭಿಪ್ರಾಯಪಟ್ಟರು.

‘ಕಲಾವಿದರು ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು. ನಾನು ತೊಗಲುಗೊಂಬೆಯಾಟದಲ್ಲಿ ಮಾಡಿದ ಪ್ರಯೋಗಗಳೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿವೆ. ತೊಗಲುಗೊಂಬೆಯಾಟದಲ್ಲಿ ‘ಸ್ವಾತಂತ್ರ್ಯ ಸಂಗ್ರಾಮ’ ತಂದಿದ್ದೇನೆ. ‘ಮಹಾತ್ಮ ಗಾಂಧಿ’ ತೊಗಲುಗೊಂಬೆಯಾಟ ಎರಡು ಸಾವಿರ ಪ್ರದರ್ಶನ ಕಂಡಿದೆ. ಬಸವಣ್ಣನ ಕಥೆಯಲ್ಲಿ 201 ಪ್ರಯೋಗ ಗಳನ್ನು ಮಾಡಿದ್ದೇನೆ. ಇಂಥ ಪ್ರಯೋಗಗಳಿಗೆ ಬಯಲಾಟ ಕಲಾವಿದರು ಏಕೆ ತಮ್ಮನ್ನು ಒಡ್ಡಿಕೊಳ್ಳ ಬಾರದು’ ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್‌, ‘ದೈಹಿಕ ಮತ್ತು ಮಾನಸಿಕವಾಗಿ ಚಟುವಟಿಕೆಯಿಂದ ಇದ್ದರಷ್ಟೇ ಆರೋಗ್ಯ ಸದೃಢವಾಗಿರುತ್ತದೆ. ನಟನೆ, ನೃತ್ಯದಿಂದ ದೇಹದ ಎಲ್ಲಾ ಭಾಗಗಳು ಚುರುಕಾಗುತ್ತವೆ. ಸಂಗೀತ, ಸಂಭಾಷಣೆಗಳು ವ್ಯಕ್ತಿಯ ಬೌದ್ಧಿಕ ಕ್ರಿಯಾಶೀಲತೆಯನ್ನು ವೃದ್ಧಿಸುತ್ತವೆ. ಇಂತಹ ಕಲೆಗಳು ಹಿರಿಯರ ಕೊಡುಗೆ’ ಎಂದರು.

‘ಭೌತಿಕ ಮತ್ತು ಅಧ್ಯಾತ್ಮದಿಂದ ಮಿಳಿತವಾದ ಬಯಲಾಟವನ್ನು ಕಲಿತು ಪ್ರದರ್ಶನ ನೀಡಬೇಕು. ಈ ಮಾರ್ಗದಿಂದಷ್ಟೇ ಕಲೆ ಉಳಿಸಿಕೊಳ್ಳಲು ಸಾಧ್ಯ. ಕಲೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ನಮಗೇ ಗೊತ್ತಿಲ್ಲದೇ ನಮ್ಮ ಬೆಳವಣಿಗೆ ಆಗುತ್ತದೆ. ಕಲೆಯ ಉಳಿವಿನಲ್ಲಿ ನಮ್ಮ ಬೆಳವಣಿಗೆಯೂ ಅಡಗಿದೆ’ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಎಚ್‌.ವಿಶ್ವನಾಥ್‌ ಮಾತನಾಡಿ, ‘ತಳ ಸಮುದಾಯದವರ ಜಾನಪದ ಕಲೆಗಳು ಸಂಕಷ್ಟದಲ್ಲಿವೆ. ಅನೇಕ ಜನಪದರ ಬದುಕು ದುಸ್ಥಿತಿಯಲ್ಲಿದೆ. ಕಲಾವಿದರಿಗೆ ಅಕ್ಷರ ಜ್ಞಾನ ಹಾಗೂ ಜೀವನಕ್ಕೆ ಆಧಾರ ಒದಗಿಸದ ಹೊರತು ಜಾನಪದ ಕಲೆಗಳ ಉಳಿವು ಕಷ್ಟ’ ಎಂದು ಹೇಳಿದರು.

ಸಿದ್ದಗಂಗಾ ವಿದ್ಯಾಸಂಸ್ಥೆಯ ಪ್ರಾಂಶು ಪಾಲರಾದ ಜಸ್ಟಿನ್‌ ಡಿಸೋಜ ಮಾತ ನಾಡಿ, ‘ವರ್ಣರಂಜಿತ ಪೋಷಾಕು, ಮುಖವರ್ಣಿಕೆ, ಕಥಾ ಪ್ರಸಂಗಗಳ ಮೂಲಕ ಪ್ರದರ್ಶನಗೊಳ್ಳುವ ಯಕ್ಷಗಾನ, ಬಯಲಾಟ ಪ್ರಸಂಗಗಳ ಉದ್ದೇಶ ಅಧ್ಯಾತ್ಮ ಬೆಳೆಸುವುದೇ ಆಗಿದೆ.

ಹೀಗಾಗಿ ರಾಮಾಯಣ, ಮಹಾಭಾರತ ಕೃತಿಗಳ ಪ್ರಸಂಗಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಯಕ್ಷಗಾನ, ಬಯಲಾಟ ಕಲೆಗಳನ್ನು ಪಠ್ಯದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಕಲಿಸಬೇಕು. ಶಿಕ್ಷಕರಿಗೂ ಇವುಗಳ ತರಬೇತಿ ನೀಡಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿದರು. ಎನ್‌.ಎಸ್‌.ರಾಜು ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಬಿ.ಎಂ. ಗುರುನಾಥ್ ಸ್ವಾಗತಿಸಿದರು. ಎನ್‌.ಎಸ್‌. ರಾಜು ಕಾರ್ಯಕ್ರಮ ನಿರೂಪಿಸಿದರು.

ನಂತರ ‘ಜನಪದ ರಂಗಭೂಮಿ: ಸಾಂಸ್ಕೃತಿಕ ಸಂಬಂಧಗಳು’ ಗೋಷ್ಠಿಯಲ್ಲಿ ‘ಜನಪದ ರಂಗಭೂಮಿ ಮತ್ತು ಸಮುದಾಯಗಳ ಅಂತರ್‌ ಸಂಬಂಧ’ ಕುರಿತು ಡಾ.ಎಸ್‌.ಎಂ. ಮುತ್ತಯ್ಯ, ‘ಜನಪದ ರಂಗ ಕಲಾವಿದರ ಸ್ಥಿತಿಗತಿ’ ಬಗ್ಗೆ ಮಲ್ಲಿಕಾರ್ಜುನ ಕಡಕೋಳ, ‘ಜನಪದ ರಂಗಕಲೆಗಳ ಲೋಕದೃಷ್ಟಿ’ ಕುರಿತು ಆರಡಿ ಮಲ್ಲಯ್ಯ ವಿಷಯ ಮಂಡಿಸಿದರು. ಡಾ.ಎಚ್‌.ಆರ್‌. ತಿಪ್ಪೇಸ್ವಾಮಿ ವಿಷಯ ವಿಸ್ತರಣೆ ಮಾಡಿದರು. ಡಾ.ಎ.ಬಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT