ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತರ್ಗಾ ಶಾಲೆಯಲ್ಲಿ ಶಿಕ್ಷಕರ ಕೊರತೆ

Last Updated 14 ಜುಲೈ 2017, 6:20 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಹತ್ತರ್ಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇವಲ ಇಬ್ಬರೇ ಶಿಕ್ಷಕರಿದ್ದು, 6 ಸ್ಥಾನಗಳು ಖಾಲಿ ಇರುವುದರಿಂದ ಪಾಠ ಬೋಧನೆ ನಡೆಯದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಈ ಗಡಿ ಗ್ರಾಮದಲ್ಲಿ ಕಳೆದ ಐದು ವರ್ಷಗಳಿಂದ ಶಿಕ್ಷಕರು ಸ್ಥಾನಗಳು ಖಾಲಿ ಇದ್ದು, ಈ ಬಗ್ಗೆ ಸಂಬಂಧಿತರಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಪ್ರಸಕ್ತ ಸಾಲಿನಲ್ಲಿ ಇಲ್ಲಿ 165 ವಿದ್ಯಾರ್ಥಿಗಳಿದ್ದಾರೆ. ಕೇವಲ ಇಬ್ಬರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಒಬ್ಬರು ಕಚೇರಿ ಕೆಲಸ ಹಾಗೂ ಸಭೆ ಮತ್ತಿತ್ತರ ಕೆಲಸಕ್ಕೆ ನಿಯೋಜಿತರಾದರೆ ಮತ್ತೊಬ್ಬರು ಎಲ್ಲ ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ.

‘ಶಿಕ್ಷಕರಿಗೆ ಮಕ್ಕಳನ್ನು ಸಂಭಾಳಿಸುವುದರಲ್ಲಿಯೇ ಸಮಯ ಕಳೆಯುತ್ತದೆ. ಆದ್ದರಿಂದ ಪಾಠ ಬೋಧನೆ ಸಾಧ್ಯ ಆಗುತ್ತಿಲ್ಲ. ಹೀಗಾಗಿ 7ನೇ ತರಗತಿಯ ವಿದ್ಯಾರ್ಥಿಗಳಿಗೂ ಮೂಲಾಕ್ಷರ ಮತ್ತು ಇತರೆ ವಿಷಯಗಳ ಬಗ್ಗೆ ಜ್ಞಾನ ಇಲ್ಲದಂತಾಗಿದೆ. ಹೀಗೆ ದಡ್ಡರಾಗುವ ಮಕ್ಕಳು ಪ್ರಾಥಮಿಕ ಶಿಕ್ಷಣ ಪೊರೈಸಿ ಮುಂದೆ ಶಿಕ್ಷಣ ಪಡೆಯದೆ ಮನೆ ಕೆಲಸದಲ್ಲಿ ತೊಡಗುತ್ತಿದ್ದಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಬಳಬಟ್ಟೆ ಹೇಳಿದ್ದಾರೆ.

`ಇಂತಹ ಗಡಿಗ್ರಾಮದ ಶಾಲೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಆದರೆ ಈ ಕಡೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಲಕ್ಷ್ಯ ನೀಡುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ದತ್ತು ಪಾಟೀಲ, ರಾಜೇಂದ್ರ ಹಂದ್ರಾಳೆ ಆರೋಪಿಸಿದ್ದಾರೆ.

‘ಶಾಲೆ ಆರಂಭವಾಗಿ ತಿಂಗಳಾದರೂ ಅತಿಥಿ ಶಿಕ್ಷಕರ ಕೂಡ ನೇಮಿಸಿಲ್ಲ. ತಕ್ಷಣವೇ ಅಗತ್ಯ ಶಿಕ್ಷಕರ ನೇಮಕಾತಿ ಮಾಡಬೇಕು. ಇನ್ನು ಮುಂದೆ ಕಾಯಂ ಶಿಕ್ಷಕರನ್ನು ಒದಗಿಸಬೇಕು. ಇಲ್ಲದಿದ್ದರೆ ತರಗತಿಗಳಿಗೆ ಬೀಗ ಹಾಕಿ ಪ್ರತಿಭನೆ ವ್ಯಕ್ತಪಡಿಸಲಾಗುವುದು’ ಎಂದು ಅಶೋಕ ಪಾರಣೆ, ಮಲ್ಲಿನಾಥ ಬೇಡಜುರ್ಗೆ, ಅಂಬಾಜಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT