ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗ ಒತ್ತುವರಿ ತೆರವು

Last Updated 14 ಜುಲೈ 2017, 6:23 IST
ಅಕ್ಷರ ಗಾತ್ರ

ಹುಮನಾಬಾದ್: ಕಳೆದ ದಶಕದಿಂದ ವ್ಯಾಪಾರಿಗಳಿಂದ ಅತಿಕ್ರಮಣಮಾಡಿಕೊಂಡಿದ್ದ ಪಾದಚಾರಿ ಮಾರ್ಗವನ್ನು ಪೊಲೀಸ್‌ ಮತ್ತು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು. ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರ ಅವಧಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಅಂಬೇಡ್ಕರ್‌ ವೃತ್ತ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಬಾಲಾಜಿ ಹಾಗೂ ಬಸವೇಶ್ವರ ವೃತ್ತದಿಂದ ಶಿವಚಂದ್ರ ನೆಲ್ಲೊಗಿ ಮಾರ್ಗದಲ್ಲಿ ಸುಗಮ ಸಂಚಾರದ ಉದ್ದೇಶದಿಂದ ಪಾದಚಾರಿ ರಸ್ತೆ ನಿರ್ಮಿಸಲಾಗಿತ್ತು.

ರಸ್ತೆ ವಿಸ್ತರಣೆ ನಂತರವೂ ತಳ್ಳುಗಾಡಿ, ಬೀದಿ ಬದಿ ವ್ಯಾಪಾರಿಗಳು 2008ರಿಂದ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದಲ್ಲದೇ ಮುಖ್ಯ ರಸ್ತೆಯಲ್ಲೂ ವ್ಯಾಪಾರ ನಡೆಸುತ್ತಿದ್ದರು. ಈ ಸಂಬಂಧ ಕಳೆದ ತಿಂಗಳು ಹುಮನಾಬಾದ್‌ ಇನ್‌ಸ್ಪೆಕ್ಟರ್‌ ಜಿ.ಎಸ್‌.ನ್ಯಾಮಗೌಡ್ ಅವರು ಬೀದಿ ಬದಿ ವ್ಯಾಪಾರಿಗಳ ಸಭೆ ಕರೆದು ಅತಿಕ್ರಮಿತ ಪಾದಚಾರಿ ಮಾರ್ಗ ತೆರವುಗೊಳಿಸಲು ಸೂಚಿಸಿದ್ದರು.

ರಂಜಾನ್‌ ನಂತರ ತೆರವು ಮಾಡುವುದಾಗಿ ವ್ಯಾಪಾರಿಗಳು ಭರವಸೆ ನೀಡಿದ್ದರು. ಆದರೆ ರಂಜಾನ್‌ ಮುಗಿದು ಎರಡು ವಾರ ಕಳೆದರೂ ವ್ಯಾಪಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಪ್ರವಾಸಿ ಮಂದಿರದಿಂದ – ಶಿವಚಂದ್ರ ನೆಲ್ಲೊಗಿ ಮಾರ್ಗದವರೆಗಿನ ಪಾದಚಾರಿ ರಸ್ತೆ ಮೇಲೆ ನಿಲ್ಲಿಸಲಾದ ಬಂಡಿ, ತಗಡಿನ ಶೆಡ್‌್‌, ವಿವಿಧ ಸಾಮಗ್ರಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು.

ವ್ಯಾಪಾರಿಗಳ ವಿರೋಧ: ‘ಬೀದಿ ವ್ಯಾಪಾರದಿಂದಲೇ ಜೀವನ ಸಾಗಿಸುವ ಬಡ ವ್ಯಾಪಾರಿಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಉಳ್ಳವರ ಅತಿಕ್ರಮಣ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಕಣ್ಣಿಗೆ ಕಾಣುವುದೇ ಇಲ್ಲ. ಆದರೆ ಬೀದಿ ವ್ಯಾಪಾರದಿಂದಲೇ ಬದುಕು ಸಾಗಿಸುತ್ತಿರುವ ಕುಟುಂಬಗಳಿಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿಕೊಡಿ’ ಎಂದು ತೆರವು ಕಾರ್ಯಾಚರಣೆಯಿಂದ ನೊಂದ  ಕೆಲ ವ್ಯಾಪಾರಿಗಳು ಅಳಲು ತೋಡಿಕೊಂಡರು.  

ತೆರವಿಗೆ ತೆರೆ ಎಳೆಯಿರಿ: ‘ಡಾ.ಅಂಬೇಡ್ಕರ್‌ ರಸ್ತೆಯಿಂದ ಸರ್ಕಾರ್‌ ವಲ್ಲಭಭಾಯಿ ರಸ್ತೆವರೆಗೆ ಮಾತ್ರ ಜನಸಂದಣಿ ಇದೆ. ಅಲ್ಲಿ ತೆರವುಗೊಳಿಸಬೇಕು. ಬೇರೆಡೆ ಬೆಳಿಗ್ಗೆಯಿಂದ ರಾತ್ರಿವರೆಗೆ ಕುಳಿತರೂ ₹4–5ಸಾವಿರ ವ್ಯಾಪಾರ ಆಗುವುದು ದುರ್ಲಭ. ಈ ಮಾರ್ಗದಲ್ಲಿ ತೆರವು ಅಗತ್ಯ ಇಲ್ಲ’ ಎಂದು ವ್ಯಾಪಾರಿಗಳಾದ ಎಸ್‌.ಎಸ್‌.ಪಾಟೀಲ, ಛೋಟುಮಿಯ್ಯ ಹೇಳಿದರು.

‘ತೆರವು ಕಾರ್ಯಾಚರಣೆ ಕೇವಲ ಒಂದು ನಾಟಕ.  ಈ ಹಿಂದೆಯೂ ಎಷ್ಟೋ ಬಾರಿ ನಡೆದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ತೆರವಿನ ನೆಪದಲ್ಲಿ ಪದೇಪದೇ ವ್ಯಾಪಾರಿಗಳಿಗೆ ತೊಂದರೆ ನೀಡುವುದು ಯಾವ ನ್ಯಾಯ?’ ಎಂದು ವ್ಯಾಪಾರಿ ಬಾಬುರಾವ ಪರಮಶೆಟ್ಟಿ ಪ್ರಶ್ನಿಸಿದರು.  ತೆರವಿಗೆ ಇಂದು ಶಾಶ್ವತ ತೆರೆ ಎಳೆಯಬೇಕು ಎಂದು ಅವರು ಆಗ್ರಹಿಸಿದರು.

‘ಅತಿಕ್ರಮಣಕಾರರ ಅಂಗಡಿಗಳ ತೆರವಿಗೆ ಭಾನುವಾರದವರೆಗೆ ಗಡುವು ನೀಡಲಾಗಿದೆ. ಹುಮಾನಾಬಾದ್‌ನಲ್ಲಿ ಹಿಂದೆ ಏನು ನಡೆದಿದೆ ಎಂಬುದು ಗೊತ್ತಿಲ್ಲ. ವ್ಯಾಪಾರಿಗಳು ಈಗ ಅನ್ಯರ ತೆರವು ವಿಷಯ ಪ್ರಸ್ತಾಪಿಸದೇ ಸ್ವಇಚ್ಛೆಯಿಂದ ಸಹಕರಿಸಬೇಕು ’ ಎಂದು ಇನ್‌ಸ್ಪೆಕ್ಟರ್‌ ಜಿ.ಎಸ್‌.ನ್ಯಾಮಗೌಡ್‌ ವ್ಯಾಪಾರಿಗಳಲ್ಲಿ ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ ಬಬಲಾದ್, ನೈರ್ಮಲ್ಯ ನಿರೀಕ್ಷಕ ಈಶ್ವರ ತೆಲಂಗ್ ಹಾಗೂ ಪುರಸಭೆ ಸದಸ್ಯ ಮಹೇಶ ಅಗಡಿ, ವ್ಯಾಪಾರಿಗಳಾದ ಎಲ್‌.ಸಿ.ಚವಾಣ್‌, ಬಸವರಾಜ ಭಮಶೆಟ್ಟಿ, ಜಗದೀಶ ಅಗಡಿ, ಮಹಾಂತೇಶ ಪೂಜಾರಿ ಇದ್ದರು.

* * 

ಸುಗಮ ಸಂಚಾರದ ದೃಷ್ಟಿಯಿಂದ ಪಾದಚಾರಿ ರಸ್ತೆ ತೆರವುಗೊಳಿಸುವುದು ಸ್ವಾಗತಾರ್ಹ. ತೆರವು ನೆಪದಲ್ಲಿ ಪದೇ ಪದೇ ತೊಂದರೆ ನೀಡದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಬಾಬುರಾವ ಪರಮಶೆಟ್ಟಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT