ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗೆ ಕೊಡುವ ಸ್ವಾತಂತ್ರ್ಯ ಮಗಳಿಗೇಕಿಲ್ಲ

Last Updated 14 ಜುಲೈ 2017, 7:15 IST
ಅಕ್ಷರ ಗಾತ್ರ

ತುಮಕೂರು: ‘ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣನ್ನು ನಡೆಸಿಕೊಳ್ಳುವ ರೀತಿ ಕುರಿತು ಗಂಡಸರು ಸ್ವ ವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಲೇಖಕ ಎಸ್.ಗಂಗಾಧರಯ್ಯ ಅಭಿಪ್ರಾಯಪಟ್ಟರು. ನಗರದ ತುಮಕೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ‘ಅನಲ’ ಕಿರುಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ರೈತಾಪಿ ಕುಟುಂಬಗಳಲ್ಲಿ ಗಂಡಿನಷ್ಟೇ ಸಮಾನವಾಗಿ ಮನೆಯ ಹೊರಗೆ ಮತ್ತು ಒಳಗೆ ಮಹಿಳೆಯರು ದುಡಿಯುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯನ್ನು ಕೃಷಿಯಿಂದ ಹೊರಗಿಡಲು ಸಾಧ್ಯವೇ ಇಲ್ಲ. ಆದರೆ ಯಜಮಾನಿಕೆ ಮಾತ್ರ ಗಂಡಿನದ್ದೇ. ಮಗನಿಗೆ ಕೊಡುವ ಸ್ವಾತಂತ್ರ್ಯವನ್ನು ಮಗಳಿಗೆ ನೀಡುವುದಿಲ್ಲ’ ಎಂದು ಹೇಳಿದರು.

‘ಜಗತ್ತಿನ ಮೊಟ್ಟ ಮೊದಲ ಸ್ತ್ರೀವಾದಿ ಅಕ್ಕಮಹಾದೇವಿ. ಆಕೆ ಪುರುಷ ವ್ಯವಸ್ಥೆ ವಿರುದ್ಧ ತನ್ನದೇ ಆದ ರೀತಿ ಪ್ರತಿಭಟನೆಯನ್ನು ದಾಖಲಿಸಿದಳು’ ಎಂದರು. ‘ಟಿವಿ ಹಾಗೂ ಸಿನಿಮಾ ಮಾಧ್ಯಮಗಳಲ್ಲಿ ಆರೋಗ್ಯಕರವಾದ ಚರ್ಚೆಗಳು ಕಡಿಮೆ ಆಗಿವೆ. ಇಂತಹ ವೇಳೆಯಲ್ಲಿ ಅನಲ ಕಿರುಚಿತ್ರ ಸಮಾಜಕ್ಕೆ ಅವಶ್ಯ. ಮಕ್ಕಳಿಗೆ ನಾಟಕ, ಸಿನಿಮಾ ನೋಡುವ ಓದುವ ಕ್ರಮವನ್ನು ಕಲಿಸಬೇಕು’ ಎಂದು ಸಲಹೆ ನೀಡಿದರು.

‘ಹೆಣ್ಣಿನ ಶೋಷಣೆಯ ಮಾರ್ಗಗಳು ಈಗ ಬದಲಾಗಿವೆ. ಮಾನಸಿಕ ಸೇರಿದಂತೆ ನಾನಾ ರೀತಿ ಒತ್ತಡಗಳನ್ನು ಮಹಿಳೆಯರ ಮೇಲೆ ಹೇರಲಾಗುತ್ತಿದೆ’ ಎಂದರು.
‘ಪುರುಷರಿಗೆ ಅಧಿಕಾರ ಚಲಾಯಿಸಿ ಗೊತ್ತು. ಆ ಅಧಿಕಾರವನ್ನು ಬಿಟ್ಟು ಕೊಡಲು ಅವರು ಒಪ್ಪುವುದಿಲ್ಲ. ಆದರೆ ಈ ಅಧಿಕಾರದ ಕೇಡನ್ನು ಅನಲ ಕಿರುಚಿತ್ರ ನಮಗೆ (ಪುರುಷರಿಗೆ) ಗೊತ್ತಾಗುವಂತೆ ಮಾಡುತ್ತದೆ. ಇದೇ ಈ ಚಿತ್ರದ ಹೆಚ್ಚುಗಾರಿಕೆ’ ಎಂದು ಅಭಿಪ್ರಾಯಪಟ್ಟರು.

ಕಿರುಚಿತ್ರದ ನಿರ್ದೇಶಕಿ ಸಂಜ್ಯೋತಿ, ವಿದ್ಯಾರ್ಥಿಗಳು ಹಾಗೂ ಸಭಿಕರ ಜೊತೆ ಸಂವಾದ ನಡೆಸಿದರು. ಕೆಲವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಚಿತ್ರದಲ್ಲಿ ಅನಲ ಸೋಲು ಒಪ್ಪಿಕೊಂಡಿದ್ದು ಏಕೆ, ಪ್ರತಿಭಟನೆ ನಡೆಸಬಹುದಿತ್ತಲ್ಲವೇ?, ಇಲ್ಲಿ ಗಂಡ ಹೆಂಡತಿಯ ನಡುವೆ ಪರಸ್ಪರ ಸೌಹಾರ್ದ ಸಂವಾಹನಕ್ಕೆ ಅವಕಾಶ ಮಾಡಿಕೊಡಬಹುದಿತ್ತು?, ಇದೇ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು.

‘ನಮ್ಮಲ್ಲಿ ಲಿಂಗಾಧಾರಿತ ವ್ಯವಸ್ಥೆ ಆಳವಾಗಿ ಬೇರೂರಿದೆ. ಈ ಕೆಲಸ ಮಹಿಳೆಯರೇ ಮಾಡಬೇಕು, ಇದನ್ನು ಪುರುಷರು ಮಾತ್ರ ಮಾಡಬೇಕು ಎನ್ನುವ ನಿಯಮಗಳನ್ನು ಹಾಕಿಕೊಂಡಿದ್ದೇವೆ. ಹೆಂಡತಿ ಹೀಗೆಯೇ ಇರಬೇಕು. ಆಕೆ ಸ್ವತಂತ್ರವಾಗಿ ಇರಬಾರದು ಎನ್ನುವ ಮನೋಭಾವಗಳು ಹೆಚ್ಚಿವೆ’ ಎಂದು ನಿರ್ದೇಶಕಿ ತಿಳಿಸಿದರು.

‘ಹೆಣ್ಣು ಯಾವುದನ್ನೇ ಆದರೂ ಪ್ರತಿಭಟಿಸಬೇಕು ಇಲ್ಲವೆ ಒಪ್ಪಿಕೊಳ್ಳಬೇಕು ಎನ್ನುವ ವಾದವೇ ಕ್ರೌರ್ಯವಾದುದು ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ. ಮಹಿಳೆಯ ಬಗ್ಗೆ ಸಮಾಜ ಹೊಂದಿರುವ ವಾಸ್ತವವನ್ನು ತಿಳಿಸಿದ್ದೇನೆ’ ಎಂದರು. ಕಿರುಚಿತ್ರದ ನಿರ್ದೇಶಕ ಕಿರಣ್, ಮಲ್ಲಿಕಾ ಬಸವರಾಜು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT