ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ಸೊಳ್ಳೆ ನಿಯಂತ್ರಣ ರಾಸಾಯನಿಕಕ್ಕೂ ಬರ!

Last Updated 14 ಜುಲೈ 2017, 7:28 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಯಾವ ವರ್ಷವೂ ಕಾಣಿಸದಷ್ಟು ಡೆಂಗಿ ಜ್ವರ ವ್ಯಾಪಕವಾಗಿ ಹಬ್ಬಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳು ತೋರಿದ ಅಸಡ್ಡೆ, ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಡೆಂಗಿ ಸೊಳ್ಳೆಗಳನ್ನು ನಿಯಂತ್ರಿಸಲು ಪೈರೋಥ್ರಮ್‌, ಬಿಟಿಐ, ಮೆಲಾಥಿನ್ ರಾಸಾಯನಿಕಗಳ ಮಿಶ್ರಣವನ್ನು ಸಿಂಪಡಿಸಬೇಕು. ಆದರೆ ಜಿಲ್ಲೆಯಲ್ಲಿ ಈ ರಾಸಾಯನಿಕಗಳ ಕೊರತೆ ತೀವ್ರವಾಗಿದೆ ಎಂದು ತಿಳಿದುಬಂದಿದೆ.

ಡೆಂಗಿ ಸೊಳ್ಳೆಗಳ ನಿಯಂತ್ರಣಕ್ಕೆ ಬೇಕಾಗಿದ್ದ ರಾಸಾಯನಿಕಗಳ ಕೊರತೆ ತೀವ್ರವಾಗಿದೆ. ‘ಆನೆ ಹೊಟ್ಟೆಗೆ ಮಜ್ಜಿಗೆ’ ಎಂಬಂತೆ ಗ್ರಾಮ ಪಂಚಾಯಿತಿಗಳಿಗೆ ಚೂರು, ಚೂರು ರಾಸಾಯನಿಕಗಳನ್ನು ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. (ಬಾಕ್ಸ್‌ಗಳನ್ನು ನೋಡಿ) ಅಗತ್ಯ ಇರುವ ಬ್ಲೀಚಿಂಗ್  ಪುಡಿ ಕೊಂಡುಕೊಳ್ಳುವಂತೆ ಎರಡು ದಿನಗಳ ಹಿಂದೆಯಷ್ಟೆ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ.

‘ಸೊಳ್ಳೆ ನಿಯಂತ್ರಕ ರಾಸಾಯನಿಕಗಳನ್ನು ಆರೋಗ್ಯ ಇಲಾಖೆ ಪೂರೈಕೆ ಮಾಡಬೇಕಾಗಿತ್ತು. ಅಲ್ಲಿಂದ ಪೂರೈಕೆಯಾಗದ ಕಾರಣ ಗ್ರಾಮ ಪಂಚಾಯಿತಿಗಳಲ್ಲೆ ಕೊಂಡುಕೊಳ್ಳುವಂತೆ ಎರಡು ದಿನಗಳ ಹಿಂದೆ ಪತ್ರ ಬರೆಯಲಾಗಿದೆ’ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ನಾಗಣ್ಣ ತಿಳಿಸಿದರು.
ಜಿಲ್ಲೆಯ ಅನೇಕ ಹಳ್ಳಿಗಳು  ಡೆಂಗಿ ಪೀಡಿತವಾಗಿವೆ.

ಇಷ್ಟಾದರೂ ಜಿಲ್ಲಾ ಆರೋಗ್ಯ ಇಲಾಖೆ ಈವರೆಗೂ ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಿಂದ ಡೆಂಗಿ ಪೀಡಿತರ ಅಂಕಿ–ಸಂಖ್ಯೆ ಸಂಗ್ರಹ ಮಾಡುವ ಒಂದು ಸಣ್ಣ ಕೆಲಸ ಮಾಡಲು ಮುಂದಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮ್ಯಾಕ್‌ ಎಲಿಸಾ ಪರೀಕ್ಷೆಯಲ್ಲಿ ಡೆಂಗಿ ಎಂದು ದೃಢಪಟ್ಟ ಪ್ರಕರಣಗಳನ್ನು ಮಾತ್ರ ಡೆಂಗಿ ಪೀಡಿತರ ಸಂಖ್ಯೆ ಎಂದು ಹೇಳುತ್ತಾ ಮೊಂಡುತನ ಪ್ರದರ್ಶನ ಮಾಡುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಆರೋಪಿಸುತ್ತಿದ್ದಾರೆ.

‘ತಾಲ್ಲೂಕುಗಳಿಂದ ಡೆಂಗಿ ರಕ್ತ ಪರೀಕ್ಷೆಯ ಮಾದರಿ ಕಳುಹಿಸಿದರೆ ಅದನ್ನು ದೃಢಪಡಿಸಲು ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ  ಐದು ದಿನ ತೆಗೆದುಕೊಳ್ಳಲಾಗುತ್ತಿದೆ. ಪ್ಲೇಟ್‌ಲೆಟ್‌ ಪರೀಕ್ಷೆ ಗೆ ಬೆಳಿಗ್ಗೆ ರಕ್ತದ ಮಾದರಿ ಕೊಟ್ಟರೆ ಸಂಜೆಯತನಕ ಕಾಯಬೇಕಾದ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಯಾವ ರೋಗಿ ಮ್ಯಾಕ್ ಎಲಿಸಾ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯ’ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.

‘ದಾಖಲೆಯಲ್ಲಿ ಇರಬೇಕೆಂಬ ಕಾರಣಕ್ಕಾಗಿ ಇಲಾಖೆ ಕೆಲಸ ಮಾಡಿದಂತೆ ಕಾಣುತ್ತಿದೆ. ಡೆಂಗಿ ಪೀಡಿತರ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿ ಕೈ ತೊಳೆದುಕೊಂಡಿದೆ. ಕನಿಷ್ಠ ಪಕ್ಷ ನಮ್ಮಿಂದ ವರದಿ ತರಿಸಿಕೊಳ್ಳುವ ಗೋಜಿಗೂ ಹೋಗಿಲ್ಲ’ ಎಂದು ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರೊಬ್ಬರು ತಿಳಿಸಿದರು.

ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ ನಿಯಂತ್ರಣದ ಕೆಲಸಕ್ಕಾಗಿ ಬಂದಿದ್ದ ₹ 37 ಲಕ್ಷ ಹಣವನ್ನೇ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಖಾತೆಗೆ ವರ್ಗಾಯಿಸಿಕೊಂಡು ಲಪಟಾಯಿಸಿದ್ದರು. ಪ್ರಕರಣ ಬೆಳಕಿಗೆ ಬಂದ ಮೇಲೆ ಈ ಹಣವನ್ನು ಅವರಿಂದ ವಾಪಸ್‌ ಪಡೆಯಲಾಗಿದೆ. ಯಾವ ಸಿಬ್ಬಂದಿ, ಅಧಿಕಾರಿಯ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. ಇದೂ ಸಹ ಜಿಲ್ಲೆಯ ಈ ಸ್ಥಿತಿಗೆ ಕಾರಣ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯೇ ಹೇಳುತ್ತಿದ್ದಾರೆ.

‘ತುಮಕೂರು ಮಹಾನಗರದಲ್ಲಿ ಮಳೆಗಾಲಕ್ಕೆ ಮುನ್ನವೆ ಸಭೆ ನಡೆಸಿ ನಿಯಂತ್ರಣ ಕ್ರಮಗಳ ಬಗ್ಗೆ ಸಿದ್ಧತೆ ನಡೆಸಬೇಕಾಗಿತ್ತು. ಆದರೆ ಒಂದೇ ಒಂದು ಸಭೆಯನ್ನೂ  ಶಾಸಕರು, ಮೇಯರ್‌ ನಡೆಸಿಲ್ಲ. ಈಗ ಆರೋಗ್ಯ ಇಲಾಖೆ ಮತ್ತು ಪಾಲಿಕೆ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ’ ಎಂದು ಪಾಲಿಕೆ ಸದಸ್ಯ ಟಿ.ಆರ್‌.ನಾಗರಾಜ್ ತಿಳಿಸಿದರು.  

‘ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು  ಹಾಕಿದರು’ ಎಂಬಂತೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಇಡೀ ನಗರಕ್ಕೆ ನಗರವೇ ಡೆಂಗಿ ಪೀಡಿತವಾದ ಮೇಲೆ ಬಿಟಿಐ ರಾಸಾಯನಿಕ ಪುಡಿಯನ್ನು ಒಮ್ಮೆ ಮಾತ್ರ ಸಿಂಪಡಿಸಿದ್ದಾರೆ. ನಿಯಮದಂತೆ ಇದನ್ನು ನಾಲ್ಕು ಸಲ ಸಿಂಪಡಿಸಲು 500 ಕೆಜಿ ಪುಡಿ ಬೇಕು. ಆದರೆ ಆರೋಗ್ಯ ಇಲಾಖೆ ಕೇವಲ 80 ಕೆಜಿ ಪುಡಿ ನೀಡಿ ಕೈ ತೊಳೆದುಕೊಂಡಿದೆ’ ಎಂದರು.

ಬಿಟಿಐ ಪುಡಿಗಾಗಿ ಪಾಲಿಕೆ ಹರಸಾಸಹ ಪಡುತ್ತಿದೆ. ಚೆನ್ನೈನಿಂದ ಈ ಪುಡಿ ಪೂರೈಕೆಯಾಗುತ್ತಿದ್ದು, ಈ ಪುಡಿ ಬರಲು ಇನ್ನೂ ಒಂದು ವಾರ ಕಾಯಬೇಕಾಗಿದೆ.   ಇನ್ನೂ ಪಟ್ಟಣ, ಹಳ್ಳಿಗಳಿಗೆ ಈ ಪುಡಿಯನ್ನೇ ಪೂರೈಕೆ ಮಾಡಲು ಸಾಧ್ಯವಾಗಿಲ್ಲ.  ಜಿಲ್ಲೆಯಲ್ಲಿ ಮೇ ತಿಂಗಳಿಂದ ಡೆಂಗಿ ಪ್ರಕರಣಗಳು ಹೆಚ್ಚುತ್ತಾ ಸಾಗಿವೆ. ಆಗಲೇ ಡೆಂಗಿ ಸೊಳ್ಳೆ, ಲಾರ್ವಾ ನಿಯಂತ್ರಕ ರಾಸಾಯನಿಕಗಳನ್ನು ತರಿಸಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕೆಲವು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ರಾಸಾಯನಿಕಗಳನ್ನು ಆರೋಗ್ಯ ಇಲಾಖೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡುತ್ತದೆ. ಅಲ್ಲಿಂದ ಗ್ರಾಮ ಪಂಚಾಯಿತಿಗಳು ಪಡೆದು ಗ್ರಾಮಗಳಿಗೆ ಸಿಂಪಡಿಸಬೇಕು. ಆದರೆ ನೂರಾರು ಗ್ರಾಮಗಳಲ್ಲಿ ಇನ್ನೂ ಫಾಗಿಂಗ್‌ ಕೆಲಸವೇ ಆರಂಭಗೊಂಡಿಲ್ಲ ಎನ್ನತ್ತಾರೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು.
ಮೆಲಾಥಿನ್ ದ್ರಾವಣಕ್ಕಾಗಿ ಆಸ್ಪತ್ರೆಗೆ ಮೂರು–ನಾಲ್ಕು ದಿನ ಅಲೆದ ಮೇಲೆ ಈಗ ಅರ್ಧ ಲೀಟರಿನಷ್ಟು  ನೀಡಿದ್ದಾರೆ. ಎಲ್ಲ ಊರುಗಳಿಗೂ ಸಾಕಾಗುವುದಿಲ್ಲ. ಇನ್ನೂ ಫಾಗಿಂಗ್ ಆರಂಭಿಸಿಲ್ಲ ಎಂದು ಸಿ.ಎಸ್‌.ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ರಂಗೇಗೌಡ ತಿಳಿಸಿದರು.

ಎಲ್ಲ ಗ್ರಾಮ ಪಂಚಾಯತಿ ಫಾಗಿಂಗ್ ಯಂತ್ರಗಳನ್ನು ಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರದ ಹಿಂದೆಯೇ ಆದೇಶ ಹೊರಡಿಸಿದ್ದರೂ ಪಾವಗಡದಲ್ಲಿ ಯಾವ ಗ್ರಾಮ ಪಂಚಾಯಿತಿಯಲ್ಲೂ ಯಂತ್ರವೇ ಖರೀದಿಸಿಲ್ಲ ಎಂದು ವೈದ್ಯಾಧಿಕಾರಿ ಸಿದ್ದೇಶ್ವರ್ ಬೇಸರ ವ್ಯಕ್ತಪಡಿಸಿದರು.

ಅಬೆಟ್‌ ದ್ರಾವಣವೂ ಇಲ್ಲ
ಪಾಲಿಕೆಗೆ ಮೊನ್ನೆ ಮೊನ್ನೆಯಷ್ಟೇ 100 ಲೀಟರ್‌ ಅಬೆಟ್‌ ದ್ರಾವಣ ತರಿಸಿಕೊಳ್ಳಲಾಗಿದೆ. ಚರಂಡಿಯಲ್ಲಿ ನಿಂತಿರುವ ನೀರಿಗೆ ಈ ದ್ರಾವಣ ಹೊಡೆಯುವುದರಿಂದ ಸೊಳ್ಳೆ ಲಾರ್ವಾ ನಾಶ ಮಾಡಬಹುದು.

ಫಾಗಿಂಗ್‌ ನಡೆದಿಲ್ಲ!
ಪಾವಗಡ ತಾಲ್ಲೂಕಿಗೆ  25 ಲೀಟರ್ ಪೈರೋಥ್ರಮ್‌ ಬೇಕು. ಆದರೆ 5 ಲೀಟರ್‌ ನೀಡಲಾಗಿದೆ. ಫಾಗಿಂಗ್ ಯಂತ್ರಗಳು ಇಲ್ಲದ ಕಾರಣ  ಇನ್ನೂ ಬಳಸಿಲ್ಲ. ಎಲ್ಲ  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಲೀಟರ್‌ ಅಬೆಟ್‌ ದ್ರಾವಣ ದಾಸ್ತಾನು ಇಡಲಾಗಿದೆ. ಮೆಲಾಥಿನ್‌ ದ್ರಾವಣ, ಬಿಟಿಐ ಪುಡಿ ಪೂರೈಕೆ ಇಲ್ಲ.
ಡಾ. ಸಿದ್ದೇಶ್ವರ, ತಾಲ್ಲೂಕು ವೈದ್ಯಾಧಿಕಾರಿ, ಪಾವಗಡ

ಸಂಗ್ರಹ ಇಲ್ಲ
ನಮ್ಮಲ್ಲಿ ಪೈರೋಥ್ರಮ್‌ ಸಂಗ್ರಹ ಮಾಡಿಟ್ಟುಕೊಂಡಿಲ್ಲ. ತುಮಕೂರಿನಿಂದ ತಂದು 15ರಿಂದ 20 ಲೀಟರ್‌ ಪೈರೋಥ್ರಮ್‌ ಸಿಂಪಡಿಸಲಾಗಿದೆ. ಮೆಲಾಥಿನ್ ಈವರೆಗೂ ಕೊಟ್ಟಿಲ್ಲ. ಅಬೇಟ್‌ ದ್ರಾವಣ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಲೀಟರ್ ಕೊಡಲಾಗಿದೆ. 
ಜಯಣ್ಣ, ಆರೋಗ್ಯ ನಿರೀಕ್ಷಕ, ಗುಬ್ಬಿ

ಹುಲ್ಲು ಕಟಾವು ಯಂತ್ರಗಳು ಎಲ್ಲಿ?
ತುಮಕೂರು ಪಾಲಿಕೆಯಲ್ಲಿ  ಹುಲ್ಲು ಕಟಾವು ಯಂತ್ರಗಳು ಎಷ್ಟಿವೆ ಎಂಬುದು ಅಧಿಕಾರಿಗಳಿಗೆ ಸರಿಯಾಗಿ ಗೊತ್ತಿಲ್ಲ. ಯಂತ್ರಗಳಲ್ಲಿ ಸಾಕಷ್ಟು ಕೆಟ್ಟಿವೆ.   ಆಗೊಮ್ಮೆ, ಈಗೊಮ್ಮೆ ಕಾರ್ಮಿಕರು ಬಳಸುತ್ತಾರಷ್ಟೇ ಎಂದು ಹೆಸರು ಹೇಳಲಿಚ್ಛಿಸದ ಪರಿಸರ ಎಂಜಿನಿಯರ್‌ ಒಬ್ಬರು ಹೇಳಿದರು.

30 ಹಳ್ಳಿಗೆ ಮಾತ್ರ ಸಿಂಪಡಣೆ
ಡೆಂಗಿ ಕಾಣಿಸಿಕೊಂಡಿದ್ದ ತಾಲ್ಲೂಕಿನ 30 ಹಳ್ಳಿಗಳಿಗೆ ಮಾತ್ರ  10 ಲೀಟರ್‌ ಪೈರೋಥ್ರಮ್‌ ದ್ರಾವಣ ಪೂರೈಸಲಾಗಿದೆ. ಬೇರೆ ಹಳ್ಳಿಗಳಿಗೆ ನೀಡಿಲ್ಲ. ಅಬೇಟ್‌, ಮೆಲಾಥಿನ್‌ ದ್ರಾವಣ, ಬಿಟಿಐ ಪುಡಿ ಯಾವುದೂ ಇಲ್ಲ.
 ಡಾ.ಶಾಂತಲಾ, ತಾಲ್ಲೂಕು ವೈದ್ಯಾಧಿಕಾರಿ, ಕುಣಿಗಲ್‌

*  * 

ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ.  ಬೇಡಿಕೆ ಇರುವ ಎಲ್ಲ ರಾಸಾಯನಿಕಗಳನ್ನು ತರಿಸಿಕೊಳ್ಳುತ್ತಿದ್ದೇವೆ. 
ವಿನಯ್‌, ಪರಿಸರ ಎಂಜಿನಿಯರ್‌,  ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT