ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನ ತ್ಯಜಿಸಲು ಹುಚ್ಚನಲ್ಲ

Last Updated 14 ಜುಲೈ 2017, 7:42 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ.ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ನೀರು ತಂದೇ ತರುತ್ತೇನೆ. ಆ.15ರೊಳಗೆ ನೀರು ಬರಲಿಲ್ಲ ಎಂದು ರಾಜೀನಾಮೆ ಕೊಡುವುದಿಲ್ಲ. ಸಚಿವ ಸ್ಥಾನ ತ್ಯಜಿಸಲು ನಾನು ಹುಚ್ಚನಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್. ರಮೇಶ್‌ಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಸುಗಟೂರು ಮತ್ತು ಹೋಳೂರು ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಕೆಲವರು ನನ್ನ ರಾಜೀನಾಮೆಗೆ ಕಾಯುತ್ತಿದ್ದಾರೆ. ಅದಕ್ಕಾಗಿಯೇ ಅವರು ಕೆ.ಸಿ.ವ್ಯಾಲಿ ಕಾಮಗಾರಿಗೆ ಅಡ್ಡಿಪಡಿಸುತ್ತಿ ದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನೇಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ, ಅವರನ್ನೇ ಮನೆಗೆ ಕಳುಹಿಸುತ್ತೇನೆ’ ಎಂದರು.

‘ನಾನು ಜಿಲ್ಲೆಗೆ ನೀರು ತರುವುದು ರಾಜಕೀಯ ವಿರೋಧಿಗಳಿಗೆ ಇಷ್ಟವಿಲ್ಲ. ಅವರಿಗೆ ನನ್ನ ರಾಜೀನಾಮೆ ಬೇಕಷ್ಟೆ. ನನಗೆ ಜಿಲ್ಲೆ ಮತ್ತು ಜನ ಮುಖ್ಯ. ಈ ಜಿಲ್ಲೆ ಉಳಿಯಬೇಕಾದರೆ ನೀರು ಬೇಕೆಂದು ಗೊತ್ತಿದೆ. ಕೆ.ಸಿ.ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸುವುದು ನಿಶ್ಚಿತ’ ಎಂದು ತಿಳಿಸಿದರು.

ಮತಿಭ್ರಮಣೆ ಆಗಿದೆ: ‘ಕೊಳಚೆ ನೀರಿ ನಿಂದ ಬೆಂಗಳೂರು ಸುಟ್ಟು ಹೋಗು ತ್ತಿದೆ. ಅಂತಹ ನೀರು ಕೋಲಾರಕ್ಕೆ ಬೇಡ ಎಂದು ಕೆಲವರು ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ ನಿಂದ ಸಾಲ ವಿತರಣೆ ಆಗಬಾರದೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಬಾರ್ಡ್‌ಗೆ ಕರೆದುಕೊಂಡು ಹೋಗಿ ದೂರು ಹೇಳುತ್ತಾರೆ. ಅದೇ ವ್ಯಕ್ತಿ ಡಿಸಿಸಿ ಬ್ಯಾಂಕ್‌ನಲ್ಲಿ ಯಾರಿಗೂ ಸಾಲ ಸಿಗುತ್ತಿಲ್ಲ ಎಂದು ಬೊಬ್ಬಿಡುತ್ತಾರೆ. ಆ ವ್ಯಕ್ತಿಗೆ ಮತಿಭ್ರಮಣೆ ಆಗಿದೆ’ ಎಂದು ಪರೋಕ್ಷವಾಗಿ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಜಿಲ್ಲೆಗೆ ಮೂರು ತಿಂಗಳೊಳಗೆ ಕೆ.ಸಿ.ವ್ಯಾಲಿ ನೀರು ಬರುತ್ತದೆ. ಬರಿದಾಗಿರುವ ಜಿಲ್ಲೆಯ ಕೆರೆಗಳನ್ನು ತುಂಬಿಸಿ ಎಲ್ಲೆಡೆ ಹಸಿರು ನಳನಳಿಸುವಂತೆ ಮಾಡುವುದು ನನ್ನ ಕನಸು. ಮುಂದಿನ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆ ಸಮೃದ್ಧವಾಗುತ್ತದೆ. ಈ ನೀರಾವರಿ ಯೋಜನೆಗಳು ಅನುಷ್ಠಾನಗೊಳದಿದ್ದರೆ ಜಿಲ್ಲೆ ನಾಶವಾಗಿ ಜನ ವಿಷ ಕುಡಿದು ಸಾಯಬೇಕಾಗುತ್ತದೆ. ಆದರೆ, ಈ ಯೋಜನೆಗಳನ್ನು ಸಹಿಸದವರು ಅಪ ಪ್ರಚಾರ ಮಾಡುತ್ತಿದ್ದಾರೆ’ ಎಂದರು.

ದೂರು ಬರಬಾರದು: ಸುಗಟೂರು ಮತ್ತು ಹೋಳೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರ ಸಮಸ್ಯೆ ಆಲಿಸಿದ ಸಚಿವರು ಅಧಿಕಾರಿಗಳಿಂದ ಕುಡಿಯುವ ನೀರು, ರಸ್ತೆ ಹಾಗೂ ವಸತಿ ಯೋಜನೆ ಕಾಮಗಾರಿಗಳ ಮಾಹಿತಿ ಪಡೆದುಕೊಂಡರು.

‘ಯಾವುದೇ ಗ್ರಾಮದಲ್ಲಿ ರಸ್ತೆ ಇಲ್ಲವೆಂಬ ದೂರು ಬರಬಾರದು. ಎಲ್ಲಾ ಹಳ್ಳಿಗಳಿಗೂ ರಸ್ತೆ ನಿರ್ಮಿಸಬೇಕು. ಈ ಸಂಬಂಧ ಪಟ್ಟಿ ಸಿದ್ಧಪಡಿಸಿದ್ದು, ಯಾವುದಾದರೂ ಹಳ್ಳಿ ಬಿಟ್ಟು ಹೋಗಿ ದ್ದರೆ ಪಟ್ಟಿಯಲ್ಲಿ ಸೇರಿಸಿ ಕಾಮಗಾರಿ ಆರಂಭಿಸಿ. ಸಮುದಾಯ ಭವನ ಮತ್ತು ಚೆಕ್‌ಡ್ಯಾಂಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಗದ್ದಲ ಮಾಡುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ನಿಮಗೆ ರಾಜಕೀಯ ಪ್ರಜ್ಞೆ ಇಲ್ಲ. ನಿಮ್ಮನ್ನು ಕಟ್ಟಿಕೊಂಡು ಹೋಗುವುದು ನನ್ನ ಗ್ರಹಚಾರ. ನಾವು ಸರಿಯಾಗಿ ಕೆಲಸ ಮಾಡದೆ ಜನರ ಬಳಿ ಹೋಗಿ ಮತ ಕೇಳುವುದಾದರೂ ಹೇಗೆ. ಚುನಾವಣೆ ಮುಗಿದ ಮೇಲೆ ಕೆಲಸ ಮಾಡುತ್ತೀರಾ’ ಎಂದು ಪ್ರಶ್ನಿಸಿದರು.

ಕೊರತೆ ಇಲ್ಲ: ‘ಜಿಲ್ಲೆಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಎಲ್ಲಾ ಯೋಜನೆಗಳಿಗೆ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಆದರೆ, ಆ ಹಣ ಖರ್ಚು ಮಾಡಿಲ್ಲ. ನಾನು ಕಷ್ಟಪಟ್ಟು ಅನುದಾನ ಬಿಡುಗಡೆ ಮಾಡಿಸಿರುವುದು ಬ್ಯಾಂಕ್‌ನಲ್ಲಿ ಠೇವಣಿ ಇಡುವುದಕ್ಕಾ. ಹಣ ಡ್ರಾ ಮಾಡಿಕೊಂಡು ಬಂದು ಮೀಟರ್ ಬಡ್ಡಿಯವರಿಗೆ ಕೊಟ್ಟರೆ ಒಂದಕ್ಕೆ ಎರಡು ಬಡ್ಡಿ ಸಿಗುತ್ತದೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

* * 

ಚುನಾವಣೆಯಲ್ಲಿ ನಾನು ಕಾಸು, ಮದ್ಯ ಕೊಡಲ್ಲ. ಯಾರಾದರೂ ರಿಯಲ್ ಎಸ್ಟೇಟ್ ಆಸಾಮಿ ಬರ್ತಾನೆ, ಆತನ ಹಿಂದೆ ಹೋದರೆ ಕಾಸು ಕೊಡ್ತಾನೆ, ನಂತರ ಸುಲಿಗೆ ಮಾಡ್ತಾನೆ. ಆಗ ನಿಮ್ಮ ಘನತೆ ಗೌರವ ಉಳಿಯಲ್ಲ
ರಮೇಶ್ ಕುಮಾರ್ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT