ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯರಿಗೆ ಆದರ್ಶ ಸಿಸ್ಟರ್‌ ನಿವೇದಿತಾ

Last Updated 14 ಜುಲೈ 2017, 9:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರ ಪಟ್ಟದ ಶಿಷ್ಯೆ ಸಿಸ್ಟರ್‌ ನಿವೇದಿತಾ ಇಂದಿನ ಯುವತಿಯರಿಗೆ ಆದರ್ಶಪ್ರಾಯರಾಗಿದ್ದು, ಅವರು ಹಾಕಿಕೊಟ್ಟ ತತ್ವಾದರ್ಶಗಳ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಶ್ರೀ ಮಾತಾ ಆಶ್ರಮದ ಅಧ್ಯಕ್ಷೆ ಮಾತಾಜಿ ತೇಜೋಮಯಿ ಹೇಳಿದರು.

ಇಲ್ಲಿನ ಎಸ್‌.ಜೆ.ಎಂ.ವಿ. ಸಂಘದ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ‘ಸೋದರಿ ನಿವೇದಿತಾ ಪ್ರತಿಷ್ಠಾನ’ ಗುರುವಾರ ಹಮ್ಮಿಕೊಂಡಿದ್ದ ‘ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

ಐರ್ಲೆಂಡ್‌ನಿಂದ ಭಾರತಕ್ಕೆ ಬಂದ ನಿವೇದಿತಾ ಅವರು ಭಾರತೀಯ ಸಂಸ್ಕೃತಿ, ಸಂಸ್ಕಾರದ ಪ್ರತಿರೂಪವಾಗಿದ್ದರು. ವಿವೇಕಾನಂದರ ಮಾರ್ಗದರ್ಶನದಲ್ಲಿ ಸಮಾಜಸೇವೆಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡರು ಎಂದು ಅವರು ಹೇಳಿದರು.

ಭಾರತೀಯ ಸಂಸ್ಕೃತಿ, ಸಂಸ್ಕಾರ, ರಾಷ್ಟ್ರೀಯತೆ, ರಾಮಕೃಷ್ಣ ಪರಮಹಂಸ, ಶಾರದಾಮಾತೆ ಅವರ ಕುರಿತು ತಿಳಿಯಬೇಕು ಎಂದಾದರೆ ಸ್ವಾಮಿ ವಿವೇಕಾನಂದರನ್ನು ಓದಿದರೆ ಸಾಕು ಎಂದರು.

‘ಹಿಂದಿನ ನಾಗರಿಕತೆಗಳನ್ನು ಕಟ್ಟಿದವರು ಪುರುಷರಾದರೆ ಭವಿಷ್ಯದ ನಾಗರಿಕತೆಯನ್ನು ಕಟ್ಟುವವರು ಮಹಿಳೆಯರಾಗಬೇಕು’ ಎಂದು ಸ್ವಾಮಿ ವಿವೇಕಾನಂದರು ಕನಸು ಕಂಡಿದ್ದರು ಎಂದು ಅವರು ಹೇಳಿದರು.

‘ಮಹಿಳೆಯರು ಪುರುಷರಿಗೆ ಎಂದಿಗೂ ಸಮಾನರಾಗಲು ಸಾಧ್ಯವಿಲ್ಲ. ಆದರೆ, ಮಹಿಳೆಯರು ಪುರುಷರಿಗಿಂತ ಯಾವಾಗಲು ಒಂದು ಹೆಜ್ಜೆ ಮುಂದೆ ಇರಬಲ್ಲರು’ ಎಂದು ಹೇಳುವ ಮೂಲಕ ಮಹಿಳೆಯರ ಮೇಲೆ ವಿವೇಕಾನಂದರು ಅಪಾರ ವಿಶ್ವಾಸ ಹೊಂದಿದ್ದರು ಎಂದರು.

ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನಿವೇದಿತಾ ಅವರು ತಮ್ಮ ದೇಶ, ಭಾಷೆ, ಸಂಸ್ಕೃತಿ, ಸಂಸ್ಕಾರ, ಬಂಧು, ಬಳಗ ಸೇರಿದಂತೆ ಸರ್ವಸ್ವವನ್ನು ತ್ಯಾಗ ಮಾಡಿ ಐರ್ಲೆಂಡ್‌ನಿಂದ ಭಾರತಕ್ಕೆ ವಿವೇಕಾನಂದರ ಶಿಷ್ಯೆಯಾಗಿ ಬರುವ ಮೂಲಕ ಈ ದೇಶದ ಪ್ರತಿಯೊಬ್ಬರ ತಾಯಿಯಾದಳು ಎಂದು ಮೆಚ್ಚುಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಜನರು ತಮ್ಮ ಹೃದಯದಲ್ಲಿ ಸಿನಿಮಾ ನಟ, ನಟಿಯರು, ಕ್ರಿಕೆಟ್‌ ಪಟುಗಳು ಸೇರಿದಂತೆ ಯಾರಾರನ್ನೋ ಆದರ್ಶವಾಗಿ ಇಟ್ಟುಕೊಳ್ಳುವ ಬದಲು ಸಿಸ್ಟರ್‌ ನಿವೇದಿತಾ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿಸ್ಟರ್‌ ನಿವೇದಿತಾ ಈ ದೇಶಕ್ಕೆ ಮಾಡಿದ ಸೇವೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.  ನಿವೇದಿತಾ ಅವರಂತಹ ಸಂತರ ಸಂಖ್ಯೆ ಹೆಚ್ಚಾಗಬೇಕು ಎಂದರು. ಪ್ರಿಯಾ ಶಿವಮೊಗ್ಗ ಮಾತನಾಡಿ, ಭಾರತದಲ್ಲಿ ಗುರು–ಶಿಷ್ಯ ಪರಂಪರೆ ಅತ್ಯಂತ ಶ್ರೇಷ್ಠವಾಗಿದೆ. ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್‌ ನಿವೇದಿತಾ ಗುರು–ಶಿಷ್ಯ ಪರಂಪರೆಗೆ ಅತ್ಯುತ್ತಮ ಉದಾಹರಣೆ ಆಗಿದ್ದಾರೆ ಎಂದರು.

ನಿವೇದಿತಾ ಅವರು ಐರ್ಲೆಂಡ್‌ ದೇಶದವರಾದರೂ ಸಂಪೂರ್ಣ ಭಾರತೀಯಳಾಗಿ ಬದಲಾಗಿ, ಈ ದೇಶದ ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು ಎಂದರು.
ಸ್ವಾತಿ ಮಂಗಳೂರು ಮಾತನಾಡಿ, ಭಾರತೀಯ ಹೆಣ್ಣುಮಕ್ಕಳ ಶಿಕ್ಷಣ, ಸಾಕ್ಷರತೆಗೆ ಸಿಸ್ಟರ್‌ ನಿವೇದಿತಾ ಶ್ರಮಿಸಿದರು.

ಪಾಶ್ಚಿಮಾತ್ಯ ಜ್ಞಾನ ಎಷ್ಟೇ ಸ್ವೀಕರಿಸಿದರೂ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಎಂದೂ ಬಿಡಬಾರದು ಎಂದು ಅವರು ಪ್ರತಿಪಾದಿಸಿದ್ದರು ಎಂದರು. ಮಾತಾಜಿ ಅಮೂಲ್ಯಮಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಕಾಲೇಜಿನ ಪ್ರಾಚಾರ್ಯರಾದ ಡಾ.ಅಕ್ಕಮಹಾದೇವಿ ನಾಡಗೌಡ, ಉಪನ್ಯಾಸಕ ಪ್ರೊ.ಜಿ.ಎಸ್‌.ಗುಡಾರದ,  ಉಪನ್ಯಾಸಕಿ ಜ್ಯೋತಿ ಲಕ್ಷ್ಮಿ ಹಾಗೂ ರಮ್ಯಾ ದೇಶಪಾಂಡೆ, ಸಾವಿತ್ರಿ ಚೆನ್ನೋಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT