ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಗೈರು: ದಲಿತರ ಅಸಮಾಧಾನ

Last Updated 14 ಜುಲೈ 2017, 9:49 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಕುಂದು ಕೊರತೆ ಸಭೆ ಜನಪ್ರತಿನಿಧಿಗಳು ನಿರಂತರವಾಗಿ ಗೈರು ಹಾಜರಾಗುತ್ತಿ ದ್ದಾರೆ. ಕೇವಲ ಅಧಿಕಾರಿಗಳ ಎದುರು ಸಮಸ್ಯೆಗಳನ್ನು ಮಂಡಿಸುವುದರಿಂದ ಪರಿಹಾರ ದೊರಕುತ್ತಿಲ್ಲ’ ದಲಿತ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಎಸ್.ಸಿ/ಎಸ್.ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ತಮ್ಮ ಕುಂದುಕೊರತೆಗಳಿಗೆ ಪರಿಹಾರ ದೊರಕುತ್ತಿಲ್ಲ ಎಂದು ದೂರಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಕುಂದು ಕೊರತೆ ಸಭೆಗೆ ಯಾವ ಜನಪ್ರತಿನಿಧಿ, ಎಷ್ಟು ಬಾರಿ ಹಾಜರಾಗಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಇದರಿಂದ ದಲಿತ ಸಮುದಾಯದ ಬಗ್ಗೆ ಅವರಿಗಿರುವ ಕಾಳಜಿ ಎಂಥದು ಎಂಬುದು ವ್ಯಕ್ತವಾಗುತ್ತಿದೆ. ಮುಂದಿನ ಸಭೆಗೆ ಜನಪ್ರತಿನಿಧಿಗಳು ಬಾರದೆ ಹೋದರೆ ಸಭೆಯನ್ನು ಬಹಿಷ್ಕರಿಸುತ್ತೇವೆ’ ದಲಿತ ಮುಖಂಡರಾದ ಸುದರ್ಶನ ತಮ್ಮನ್ನ ವರ, ಬಸವರಾಜ ಢಾಕೆ ಮತ್ತು ಆಶೋಕ ಭಂಡಾರಕರ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಸಮಸ್ಯೆ ಇದೆ. ಅದಕ್ಕಾಗಿ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಮುಂದಾಗುವಂತೆ ಒತ್ತಾಯಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ ಮಾತನಾಡಿ, ‘ತಾಲ್ಲೂಕಿನ ಕೆಲವು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಸಮಸ್ಯೆ ಬಗೆ ಹರಿಸಲು ಕ್ರಮ ಜರಗಿಸಲಾಗುವುದು’ ಎಂದರು.

‘ಕಳೆದ 20 ವರ್ಷದಿಂದ ಕಸಾಯಿ ಖಾನೆ ಸ್ಥಳಾಂತರ ಮಾಡುವಂತೆ ಮನವಿ ಮಾಡುತ್ತ ಬಂದಿದ್ದೇವೆ. ಆದರೆ, ಇದುವರೆಗೆ ಸ್ಥಳಾಂತರ ಮಾಡುತ್ತಿಲ್ಲ’ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ ಮಾತನಾಡಿ, ‘ಕಸಾಯಿಖಾನೆ ಸ್ಥಳಾಂತರಕ್ಕೆ ಈಗಾಗಲೇ ಸ್ಥಳ ನಿಗದಿ ಮಾಡಲಾಗಿದೆ. ಪರಿಸರ ಮಾಲಿನ್ಯ ಇಲಾಖೆಯಿಂದ ಒಪ್ಪಿಗೆ ಮಾತ್ರ ಬಾಕಿಯಿದೆ’ ಎಂದರು.

ತಾಲ್ಲೂಕಿನ ಶಿರಗಾಂವಿ ಮತ್ತು ಧುಳಗನವಾಡಿ ದಲಿತರಿಗೆ ಸ್ಮಶಾನ ಅಭಿವೃದ್ದಿಗಾಗಿ ಜಾಗವಿಲ್ಲ ಎಂದು ಸಭೆ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಚಿಕ್ಕೋಡಿ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ, ‘ಕೂಡಲೇ ಹಣ ಬಿಡುಗಡೆ ಮಾಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಿಇಓ ಬಿ.ಎ.ಮೇಕನಮರಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸದಾಶಿವ ಬಡಿಗೇರ, ವೀರಣ್ಣ ವಾಲಿ, ಆನಂದ ಬಣಕಾರ ಉಪಸ್ಥಿತರಿದ್ದರು. ದಲಿತ ಮುಖಂಡರಾದ ಅಪ್ಪಸಾಬ ತಡಾಕೆ, ಮಂಜುನಾಥ ಮಾಳಗೆ, ಸುಜಾತ ಕಾಂಬಳೆ, ರಾವಸಾಬ ಫಕೀರೆ, ಮೋಟನ್ನವರ ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT