ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿ ಸಾರುತ್ತಿರುವ ಸಂತ

Last Updated 14 ಜುಲೈ 2017, 9:51 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ದೇವಗಾಂವ–ಹೊನ್ನಾಪುರ ಬಳಿಯ ಕಾಡಿನಲ್ಲಿ ಚಾತುರ್ಮಾಸದ ಕಠೋರ ವ್ರತಾಚರಣೆ ಕೈಗೊಂಡಿರುವ ಜಂಗಲ್‌ ವಾಲೆ ಬಾಬಾ ಖ್ಯಾತಿಯ ಮುನಿಶ್ರೀ ಚಿನ್ಮಯಸಾಗರ ಮಹಾರಾಜ್ ಅವರು 5 ದಿನಗಳಲ್ಲಿ 10 ಸಾವಿರ ಸಮೀಪ ಗಿಡಗಳನ್ನು ವಿತರಣೆ ಮಾಡುವ ಮೂಲಕ ಪರಿಸರ ಪ್ರಜ್ಞೆಯ ಸಂತನೆಂಬುದನ್ನೂ ಸಾಬೀತು ಪಡಿಸಿದ್ದಾರೆ.

ಸ್ವಚ್ಛತೆ, ಉತ್ತಮ ಪರಿಸರ, ಗಿಡ ನೆಡುವುದು.. ಇತ್ಯಾದಿಗಳು ಬರೀ ಘೋಷಣಾ ವಾಕ್ಯವಾಗಿ ಅನೇಕರಿಂದ ಸಾಗಿರುವ ಇಂದಿನ ಸಂದರ್ಭದಲ್ಲಿ ಸಂತನೊಬ್ಬ ತಮ್ಮ ವಿಚಾರಗಳನ್ನು ಅಕ್ಷರಶಃ ಆಚರಣೆಗೆ ತರುವ ಮೂಲಕ ಆಧ್ಯಾತ್ಮದ ಜೊತೆಗೆ ಉತ್ತಮ ಪರಿಸರ ನಿರ್ಮಾಣದ ಕಾಯಕ ಮಾಡುತ್ತಿರು ವುದು ಗಮನಾರ್ಹವಾಗಿದೆ.

ಸನ್ನಡತೆಯುಳ್ಳ ಯುವಪಡೆ ನಿರ್ಮಾಣ, ತಂದೆ–ತಾಯಿಗೆ ಗೌರವ ನೀಡುವುದು, ಗುಟಕಾ, ಮದ್ಯಮುಕ್ತ ಉತ್ತಮ ಸಮಾಜ ನಿರ್ಮಾಣದ ಕನಸು ಹೊತ್ತು ಸಾಗಿರುವ ಜಂಗಲ್‌ವಾಲೆ ಬಾಬಾ, ದುಶ್ಚಟಗಳನ್ನು ಬಿಡುವಂತೆ ತಮ್ಮ ಎದುರು ಪ್ರತಿಜ್ಞೆ ಮಾಡಿಸಿ ಕೊಳ್ಳುತ್ತಾರೆ. ನಿತ್ಯ ಚಿಕ್ಕ ಜಾತ್ರೆಯೇ ಇಲ್ಲಿ ನೆರೆಯುತ್ತಿದ್ದು, ಪ್ರತಿ ಭಾನುವಾರ ಸಾವಿರಾರು ಭಕ್ತರು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಬರುತ್ತಿದ್ದಾರೆ.

ಗುರುವಾರ ನಡೆದ ಕಾರ್ಯಕ್ರಮದಲ್ಲೂ ಬಾಬಾ ನೂರಾರು ಗಿಡಗಳನ್ನು ವಿತರಣೆ ಮಾಡಿದರು. ಹತ್ತಾರು ಯುವಕರಿಂದ ‘ದುಶ್ಚಟಗಳನ್ನು ತೊರೆಯುತ್ತೇನೆ’ ಎಂಬ ಲಿಖಿತ ಪ್ರಮಾಣವನ್ನೂ ಪಡೆದರು. ಅನಂತರ ಮಾತನಾಡಿದ ಅವರು ‘ಸಂತನಾಗಿರುವವನು ಪಂಥದಿಂದ ಮುಕ್ತನಾಗಿರುತ್ತಾನೆ. ಸಂತ ಅನಂತ ವಾಗಿರುತ್ತೇನೆ. ಯಾರು ಪಂಥದೊಗಳಗೆ ಇರುತ್ತಾರೋ ಅವರು ಸಂತರೇ ಅಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಮನುಷ್ಯ ಸತ್ಯವಂತನಾಗಿರಬೇಕು. ಇದರಿಂದ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯವಿದೆ. ಅಂತರಾತ್ಮದಲ್ಲಿ ಸತ್ಯವಂತನಾಗಿರದಿದ್ದರೆ ಆತನಿಗೆ ನಿದ್ರೆಯೇ ಬರುವುದಿಲ್ಲ, ಅದಕ್ಕಾಗಿ ಆತ ಮಾತ್ರೆ ನುಂಗುವ ಸ್ಥಿತಿಯಿಂದ ಹೊರ ಬರಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಬದುಕಿನಲ್ಲಿ ಹಿಂದೂ,ಮುಸ್ಲಿಮ್, ಮೇಲು,ಕೀಳು ಭಾವನೆ ಇಲ್ಲ.  ಎಲ್ಲರೂ ಒಂದೇ, ಸತ್ಯ ಎಲ್ಲರಿಗೂ ಒಂದೇ. ಪಂಥಕ್ಕೆ ಸೀಮಿತವಾದರೆ ಅದು ಪೀಡೆ’ ಎಂದು ನುಡಿದರು.
ಮಧ್ಯಪ್ರದೇಶದಿಂದ ಆಗಮಿಸಿದ್ದ  ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಜನೀಶ್ ಮಾತನಾಡಿ ‘ರಾಷ್ಟ್ರದ ಉತ್ಥಾನಕ್ಕಾಗಿ ಸಂತರ ಜನನವಾಗುತ್ತದೆ. ಅವರ ಆಶೀರ್ವಾದವೇ ನಮಗೆ ದೊರೆವ ದೊಡ್ಡ ಪುರಸ್ಕಾರ’ ಎಂದರು.

ಚಿನ್ಮಯಸಾಗರ ಚಾರಿಟಟೆಬಲ್ ಟ್ರಸ್ಟ್‌ನ ಸುಮನ್‌ಲತಾ ಮೋದಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯೆ ಸರಸ್ವತಿ ಹೈಬತ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT