ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಜವಳಿ ಉದ್ಯಮ ಸ್ಥಗಿತ

Last Updated 14 ಜುಲೈ 2017, 10:13 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಜುಲೈ 1ರಿಂದ ದೇಶದಲ್ಲಿ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತಂದಿದ್ದು, ಪರಿಣಾಮವಾಗಿ ಈ ಭಾಗದಲ್ಲಿ ಜವಳಿ ಉದ್ಯಮ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಾವಿರಾರು ನೇಕಾರರು ಮತ್ತು ನೇಕಾರ ವೃತ್ತಿಗೆ ಪೂರಕವಾಗಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ.

ರಬಕವಿ ಬನಹಟ್ಟಿ ನಗರದಲ್ಲಿ ಜಿಎಸ್‌ಟಿಯಿಂದಾಗಿ ಶೇ 99ರಷ್ಟು ಸೀರೆಗಳ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೀರೆಗಳನ್ನು ಯಾರೂ ಕೇಳುತ್ತಿಲ್ಲ. ಅದರಲ್ಲೂ ಒಂದೆರಡು ಮಗ್ಗಗಳ ಮಾಲೀಕರ ಪರಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ನೇಕಾರ ಮಾಲೀಕರ ಮನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೀರೆಗಳು ಸಂಗ್ರಹವಾಗಿವೆ.

ಇದರಿಂದಾಗಿ ಮಾಲೀಕರು ತಮ್ಮ ನೇಕಾರರಿಗೆ ದಿನಕ್ಕೆ ಒಂದೇ ಒಂದು ಸೀರೆಯನ್ನು ನೇಯ್ಗೆ ಮಾಡುವಂತೆ ಹೇಳಿದ್ದಾರೆ. ಇನ್ನೂ ಕೆಲವರು ವಾರಕ್ಕೆ ಕೇವಲ ಹತ್ತು ಸೀರೆಗಳನ್ನು ನೇಯ್ಗೆ ಮಾಡುವಂತೆ ತಿಳಿಸಿದ್ದಾರೆ. ಕೆಲವು ಮಾಲೀಕರಂತೂ ಇನ್ನೂ ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ತಮ್ಮ ಕಾರ್ಖಾನೆಗಳನ್ನು ಬಂದ್‌ ಮಾಡುವ ಸ್ಥಿತಿಯಲ್ಲಿದ್ದಾರೆ.

‘ದಿನಕ್ಕೆ ಒಂದು ಸೀರೆ ನೇಯ್ಗೆ ಮಾಡುವುದರಿಂದ ಒಬ್ಬ ನೇಕಾರನಿಗೆ ಕೇವಲ ₹ 75ರಿಂದ 80 ಮಜೂರಿ ದೊರೆಯುತ್ತದೆ. ವಾರಕ್ಕೆ ಅಂದಾಜು 560 ರಷ್ಟು ಮಜೂರಿ ದೊರೆಯುತ್ತದೆ. ಆದರೆ, ಇದರಿಂದ ಕುಟುಂಬದ ನಿರ್ವಹಣೆ ಬಹಳಷ್ಟು ಕಷ್ಟವಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ಪ್ರಕಾಶ ಅರಳಿಕಟ್ಟಿ.

ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಭಾಗದ ಸೀರೆಗಳ ಪ್ರಮುಖ ಮಾರುಕಟ್ಟೆಯಾಗಿವೆ. ಆಂಧ್ರ ಪ್ರದೇಶದ ಖರೀದಿದಾರರು ಜಿಎಸ್‌ಟಿಯಿಂದಾಗಿ ಸೀರೆಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸಿದ್ದಾರೆ. ಅವರ ಬಳಿ ಜಿಎಸ್‌ಟಿ ನಂಬರ್‌ಗಳು ಇಲ್ಲ.

ಇನ್ನೂ ಕಚ್ಚಾ ಸರಕುಗಳ ಖರೀದಿ, ಸೀರೆಗಳಿಗೆ ಹಾಕುವ ಬಣ್ಣ, ಸೈಜಿಂಗ್‌ ಮಾಡುವುದು, ಡೈಯಿಂಗ್‌ ಮಾಡುವುದಕ್ಕೆ, ನೇಕಾರರಿಗೆ ಕೊಡುವ ಕೂಲಿಯ ಬಗ್ಗೆಯೂ ಕೂಡಾ ಲೆಕ್ಕಪತ್ರಗಳನ್ನು ಇಡಬೇಕು. ಜಾಬ್‌ ವರ್ಕ್‌ ಮೇಲೆ ಶೇ 18ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ವ್ಯಾಪಾರವಾಗದ ಮತ್ತು ಕೆಟ್ಟ ಸೀರೆಗಳು ಮಾಲೀಕರಿಗೆ ಹಾನಿಯನ್ನುಂಟು ಮಾಡಲಿವೆ. ಇದು ಕೂಡಾ ನೇಕಾರರಿಗೆ ಬಹಳಷ್ಟು ಹೊರೆಯಾಗಿದೆ. ಈ ಭಾಗದ ಬಹಳಷ್ಟು ನೇಕಾರರು ಅನಕ್ಷರಸ್ಥರು, ಅಶಿಕ್ಷಿತರು. ಇದರಿಂದಾಗಿ ಅವರಿಗೆ ಜಿಎಸ್‌ಟಿ ಎಂಬುದು ಭೂತವಾಗಿ ಕಾಡುತ್ತಿದೆ.

‘ನಾವು ಸರ್ಕಾರಕ್ಕೆ ತೆರಿಗೆಯನ್ನು ತುಂಬಲು ಸಿದ್ಧರಿದ್ದೇವೆ. ಆದರೆ ಇದು ಇನ್ನಷ್ಟು ಸರಳೀಕರಣವಾಗಬೇಕು. ಪ್ರತಿ ವರ್ಷ ತೆರಿಗೆಯನ್ನು ಕೊಡುತ್ತೇವೆ. ಆದರೆ ಜಿಎಸ್‌ಟಿ ಮಾತ್ರ ಜವಳಿ ಉದ್ಯಮವನ್ನೇ ಮಲಗಿಸಿಬಿಟ್ಟಿದೆ’ ಎನ್ನುತ್ತಾರೆ ಸ್ಥಳೀಯ ವಿದ್ಯುತ್‌ ಮಗ್ಗಗಳ ಮಾಲೀಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ.

ಉದ್ದಿಮೆ ಬಂದಾಗಿರುವುದರಿಂದ ಪ್ರತಿಯೊಂದು ರೀತಿಯ ವ್ಯಾಪಾರಕ್ಕೆ ಭಾರಿ ಪೆಟ್ಟು ಬಿದ್ದಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡುವವರೆ ಇಲ್ಲದಂತಾಗಿದೆ. ಜಿಎಸ್‌ಟಿಯಿಂದಾಗಿ ಈ ಭಾಗದ ನೇಕಾರರು ಎರಡು ಹೊತ್ತಿನ ಊಟ ಮಾಡುವ ಪರಿಸ್ಥಿತಿಗೂ ತೊಂದರೆ ಉಂಟಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಕುರಿತು ಸೂಕ್ತ ಕ್ರಮ ತೆಗೆದುಕೊಂಡು ನೇಕಾರರನ್ನು ಬದುಕುವಂತೆ ಮಾಡ ಬೇಕು ಎಂದು ಈ ಭಾಗದ ನೇಕಾರರು ಆಗ್ರಹಿಸಿದ್ದಾರೆ.

* * 

ಮೊದಲು ಯಾವುದೇ ತೆರಿಗೆ ಇರಲಿಲ್ಲ. ಈಗ ಕೇಂದ್ರ ಸರ್ಕಾರ ಶೇ 5ರಷ್ಟು ತೆರಿಗೆಯನ್ನು ವಿಧಿಸಿದೆ. ಜವಳಿ ಉದ್ಯಮದ ಮೇಲಿನ ಜಿಎಸ್‌ಟಿ ಬಗ್ಗೆ ನಿಖರವಾಗಿ ಮಾಹಿತಿ ಇಲ್ಲ
ಗೋಕುಲ ಕಾಬಾರಾ
ಕೈಮಗ್ಗ ಮಾಲೀಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT