ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ 3 ತಿಂಗಳಿಂದ ವೇತನವಿಲ್ಲ!

Last Updated 14 ಜುಲೈ 2017, 10:15 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ಪಂಚಾಯ್ತಿ ವಾರ್ಷಿಕ ಬಜೆಟ್ ಅನ್ವಯ ಇಲಾಖಾ ವಾರು ಹಣಕಾಸು ಹಂಚಿಕೆಯಲ್ಲಿ ವಿಳಂಬವಾದ ಕಾರಣ ಬಾಗಲಕೋಟೆ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಉಳಿದಂತೆ ಜಮಖಂಡಿ, ಬಾದಾಮಿ, ಹುನಗುಂದ ತಾಲ್ಲೂಕುಗಳ ಶಿಕ್ಷಕರಿಗೆ 13 ದಿನ ಕಳೆದರೂ ಜೂನ್‌ ತಿಂಗಳ ವೇತನ ಸಿಕ್ಕಿಲ್ಲ. ಇದರಿಂದ ಶಿಕ್ಷಕರು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿರುವ 200 ಸರ್ಕಾರಿ ಶಾಲೆಗಳ 900 ಶಿಕ್ಷಕರು ಹಾಗೂ ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ಅಡಿ ತೆರೆಯಲಾಗಿರುವ ಶಾಲೆಗಳ 400 ಶಿಕ್ಷಕರಿಗೆ ಈ ಬಾರಿ ಏಪ್ರಿಲ್‌, ಮೇ ಹಾಗೂ ಜೂನ್ ತಿಂಗಳ ವೇತನ ವಿಳಂಬವಾಗಿದೆ.

ಜೂನ್‌ ತಿಂಗಳಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಶುಲ್ಕ, ಡೊನೇಶನ್ ನೀಡಲು, ಸಮವಸ್ತ್ರ, ಪುಸ್ತಕ ಕೊಳ್ಳಲು ಹಣ ಹೊಂದಿಸಲು, ತಿಂಗಳ ಮನೆಬಾಡಿಗೆ, ರೇಷನ್ ಖರ್ಚು,ದೈನಂದಿನ ವೆಚ್ಚ ನೀಗಲು ಪಡಿಪಾಟಲು ಪಟ್ಟಿದ್ದಾರೆ. ‘ಬಹುತೇಕ ಶಿಕ್ಷಕರು ತಿಂಗಳ ಸಂಬಳವನ್ನೇ ನೆಚ್ಚಿಕೊಂಡಿದ್ದಾರೆ.

ದೈನಂದಿನ ಖರ್ಚಿಗೆ ಪರಿಚಯದವರ ಬಳಿ ಸಾಲ ಪಡೆಯಬಹುದು. ಇಲ್ಲವೇ ಉಳಿತಾಯ ಖಾತೆಯಲ್ಲಿನ ಹಣ ಬಳಕೆ ಮಾಡಬಹುದು. ಆದರೆ ಮಾಸಿಕ ಕಂತುಗಳ ಆಧಾರದ ಮೇಲೆ ವಾಹನ ಗಳನ್ನು ಖರೀದಿಸಿದವರು ಇಲ್ಲವೇ ಬ್ಯಾಂಕ್‌ಗಲ್ಲಿ  ಸಾಲ ಮಾಡಿ ಮನೆ ಕಟ್ಟಿದವರು ಇಎಂಐ ತುಂಬಲು ಆಗುತ್ತಿಲ್ಲ. ಕಂತು ಪಾವತಿ ತಡವಾದ ಕಾರಣ ಹೆಚ್ಚಿನ ಬಡ್ಡಿ ತೆರಬೇಕಾಗಿದೆ’ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ಹಣ ಬಿಡುಗಡೆ ಆಗಿದೆ: ‘ಶಿಕ್ಷಕರ ವೇತನ ಪಾವತಿಗೆ ಜಿಲ್ಲಾ ಪಂಚಾಯ್ತಿಯಿಂದ ಈಗಾಗಲೇ ತಾಲ್ಲೂಕು ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ಹಂಚಿಕೆಯಾಗಿಲ್ಲ’ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ ಹೇಳುತ್ತಾರೆ.

‘ತಾಲ್ಲೂಕು ಪಂಚಾಯ್ತಿಯಿಂದ ಹಣ ಹಂಚಿಕೆ ಮಾಡಲು ಆಯಾ ಬಿಇಒ ಕಚೇರಿಗಳಿಂದ ತುರ್ತಾಗಿ ಪ್ರಕ್ರಿಯೆ ನಡೆಯಬೇಕಿದೆ. ಅಲ್ಲಿ ಹಂಚಿಕೆಯಾದ ಹಣಕ್ಕೆ ಬಿಇಒ ಮೇಲು ಸಹಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಿ 2018ರವರೆಗೆ ಬೇಡಿಕೆ ಪಟ್ಟಿ ಪಡೆಯಲಾಗಿದೆ’ ಎಂದು ನಾಗರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT