ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಹಳ್ಳಿ ಪಂಚಾಯ್ತಿ ಅಧ್ಯಕ್ಷರ ಸದಸ್ಯತ್ವ ರದ್ದತಿ ಆದೇಶ ಹೈಕೋರ್ಟ್‌ನಿಂದ ರದ್ದು ಇಲಾಖೆ–ಅಧ್ಯಕ್ಷರ ಹಗ್ಗ ಜಗ್ಗಾಟ ಶುರು!

Last Updated 14 ಜುಲೈ 2017, 10:25 IST
ಅಕ್ಷರ ಗಾತ್ರ

ಬಳ್ಳಾರಿ: ಅವ್ಯವಹಾರ ಆರೋಪದ ಮೇರೆಗೆ, ಜಿಲ್ಲೆಯ ಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕಂಠಿ ವೀರೇಶ ಅವರ ಸದಸ್ಯತ್ವವನ್ನು ರದ್ದುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಹೊರಡಿಸಿದ್ದ ಆದೇಶವನ್ನು ಧಾರವಾಡದ ಹೈಕೋರ್ಟ್‌ ಪೀಠ ರದ್ದುಪಡಿಸಿದೆ. ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಗಳಿಗೆ ತಡೆಯಾಜ್ಞೆ ನೀಡಿದೆ.

ಈ ಮೂಲಕ, ಇಡೀ ಜಿಲ್ಲೆಯ ಗಮನ ಸೆಳೆದಿದ್ದ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದ್ದು, ವೀರೇಶ ಮತ್ತು ಇಲಾಖೆಯ ನಡುವೆ ಅಧಿಕಾರಕ್ಕಾಗಿ ಹಗ್ಗ–ಜಗ್ಗಾಟ ಆರಂಭವಾಗಿದೆ.

ಆರೋಪಿ ಸದಸ್ಯರಿಗೆ ತಮ್ಮ ಅಭಿಪ್ರಾಯವನ್ನು ಹೇಳಲು ಅವಕಾಶವನ್ನೇ ನೀಡದೇ ಏಕಪಕ್ಷೀಯವಾಗಿ ಇಲಾಖೆಯು ಆದೇಶ ಹೊರಡಿಸಿರುವುದು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಜುಲೈ 1ರ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿರುವುದು ಇಲಾಖೆಯ ಕಾರ್ಯವೈಖರಿಯ ಕಡೆಗೂ ಬೆರಳು ಮಾಡಿದೆ.

ಹಿನ್ನೆಲೆ: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಂದಿಹಳ್ಳಿ, ಮುದೇನೂರು, ಹುಗಲೂರು ಗ್ರಾಮಗಳಲ್ಲಿ ನರೇಗಾ ಯೋಜನೆ ಅಡಿ 45 ದನದ ಕೊಟ್ಟಿಗೆಗಳಿಗೆ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ಹಣ ಲಪಟಾಯಿಸಲಾಗಿದೆ. ಮೃತಪಟ್ಟಿರುವ ವ್ಯಕ್ತಿಗಳ ಹೆಸರಿಗೂ ಕೂಲಿ ಪಾವತಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿ ಆಮ್‌ ಆದ್ಮಿ ಪಾರ್ಟಿ ಸಂಚಾಲಕರಾಗಿದ್ದ ನಂದಿಹಳ್ಳಿ ಮಹೇಂದ್ರ ಜಿಲ್ಲಾ ಪಂಚಾಯ್ತಿಗೆ ದಾಖಲೆಗಳೊಂದಿಗೆ ದೂರು ನೀಡಿದ್ದರು.

ಬಳಿಕ ವಿಶೇಷ ಆಂತರಿಕ ತನಿಖಾ ವರದಿಗಳು ಅವ್ಯವಹಾರ ನಡೆದಿರುವುದನ್ನು ಸಾಬೀತುಪಡಿಸಿದ್ದವು. ಅದೇ ಹಿನ್ನೆಲೆಯಲ್ಲಿ ವೀರೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಜನಪ್ರತಿನಿಧಿ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿರುವ ಕಾರಣ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 (ಎ) ಅಡಿಯಲ್ಲಿ ಸದಸ್ಯತ್ವ ರದ್ದುಗೊಳಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಲಾಖೆಗೆ ಶಿಫಾರಸು ಮಾಡಿದ್ದರು. ಅದರ ಅನ್ವಯ ಇಲಾಖೆಯು ಜೂನ್‌ ತಿಂಗಳಲ್ಲಿ ಸದಸ್ಯತ್ವವನ್ನು ರದ್ದುಪಡಿಸಿ ಆದೇಶಿಸಿತ್ತು.

ಮುಂದೇನು? ಸದಸ್ಯತ್ವ ರದ್ದತಿ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್ ಪೀಠ, ತನ್ನ ತೀರ್ಪಿನ ಪ್ರತಿ ದೊರೆತ ಮೂವತ್ತು ದಿನಗಳ ಒಳಗೆ ಅರ್ಜಿದಾರರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಕೊಡಬೇಕು. ಆರೋಪಗಳ ಕುರಿತ ದಾಖಲೆಗಳನ್ನು ಪರಿಶೀಲಿಸಿ, ಕಾನೂನು ಪ್ರಕಾರ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ಸೂಚಿಸಿದೆ.

ಈ ಹಿನ್ನೆಲೆಯಲ್ಲಿ, ವೀರೇಶ ಅವರಿಗೆ ಮತ್ತೆ ಅಧಿಕಾರ ಸ್ವೀಕರಿಸಲು ಅವಕಾಶ ಕೊಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಲಹೆ ಕೇಳಿ ಇಲಾಖೆಗೆ ಪತ್ರ ಬರೆದಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT