ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮೂಡಿಸಿದ ನಿರಾಸೆ: ರೈತರಲ್ಲಿ ಆತಂಕ

Last Updated 14 ಜುಲೈ 2017, 10:46 IST
ಅಕ್ಷರ ಗಾತ್ರ

ಶಿರಸಿ: ಮೇ ತಿಂಗಳ ಕೊನೆಯ ವೇಳೆ ಮೋಡಗಟ್ಟಲಾರಂಭಿಸಿದ ಆಗಸ ಜೂನ್ ಮೊದಲ ವಾರದಲ್ಲಿ ಮಳೆ ಸುರಿಸಿ ಕೃಷಿಕ­ರಲ್ಲಿ ಹಸನಾದ ಬೆಳೆಯ ಕನಸು ಬಿತ್ತಿತ್ತು. ಸರಿಯಾದ ಸಮಯಕ್ಕೆ ಮಳೆ ಪ್ರಾರಂಭ­ವಾಗಿದ್ದನ್ನು ಕಂಡು ಸಂಭ್ರಮಿಸಿದ್ದ ರೈತರಲ್ಲಿ ಈಗ ಮತ್ತೆ ನಿರಾಸೆ ಮೂಡಿದೆ. ಜುಲೈ ತಿಂಗಳ ಮಧ್ಯಭಾಗ ತಲುಪಿದರೂ ಮುಂಗಾರು ಚುರುಕುಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಶಿರಸಿ ಉಪವಿಭಾಗದ ನಾಲ್ಕು ತಾಲ್ಲೂಕು­ಗಳಲ್ಲಿ ಈ ಬಾರಿ ಸಹ ವಾಡಿಕೆ­ಗಿಂತ ಕಡಿಮೆ ಮಳೆಯಾಗಿದೆ. ಶಿರಸಿ ತಾಲ್ಲೂಕಿ­ನಲ್ಲಿ ಜುಲೈ ತಿಂಗಳ ಕೊನೆ­ಯವರೆಗಿನ ವಾಡಿಕೆ ಮಳೆ 1600 ಮಿ.ಮೀ ಆಗಿದ್ದರೆ 2103ರ ಜುಲೈನಲ್ಲಿ 2238 ಮಿ.ಮೀ, 2014ರಲ್ಲಿ 1700 ಮಿ.ಮೀ, 2015ರಲ್ಲಿ 1220 ಮಿ.ಮೀ, 2016ರಲ್ಲಿ 1079 ಮಿ.ಮೀ ಮಳೆಯಾ­ಗಿತ್ತು. ಈ ವರ್ಷ ಜುಲೈ 12ರವರೆಗೆ 790 ಮಿ.ಮೀ ಮಳೆ ಮಾತ್ರ ದಾಖಲಾಗಿದೆ.

ಯಲ್ಲಾಪುರ ತಾಲ್ಲೂಕಿನಲ್ಲಿ ಜುಲೈ­ವರೆಗಿನ ವಾಡಿಕೆ ಮಳೆ 1700 ಮಿ.ಮೀ ಆಗಿದ್ದು, 2013ರಲ್ಲಿ ಇದೇ ತಿಂಗಳ ಕೊನೆಯಲ್ಲಿ 1837 ಮಿ.ಮೀ, 2014ರಲ್ಲಿ 1592 ಮಿ.ಮೀ, 2015ರಲ್ಲಿ 902 ಮಿ.ಮೀ, 2015ರಲ್ಲಿ 1021 ಮಿ.ಮೀ ಮಳೆಯಾಗಿತ್ತು. ಈ ವರ್ಷ ಇಲ್ಲಿಯ ತನಕ 742 ಮಿ.ಮೀ ಮಳೆ ಬಿದ್ದಿದೆ.

ಅತಿ ಹೆಚ್ಚು ಮಳೆಯಾಗಿರುವ ಸಿದ್ದಾಪುರ ತಾಲ್ಲೂಕಿನಲ್ಲಿ ವಾಡಿಕೆಯಂತೆ ಮಳೆಗಾಲ ಆರಂಭವಾದ ಮೇಲೆ ಜುಲೈ ಕೊನೆಯವರೆಗೆ 1928 ಮಿ.ಮೀ ಮಳೆಯಾಗುತ್ತದೆ. ಆದರೆ 2013ರಲ್ಲಿ ಇದೇ ತಿಂಗಳಿನಲ್ಲಿ 2477 ಮಿ.ಮೀ, 2014ರಲ್ಲಿ 2217 ಮಿ.ಮೀ, 2015ರಲ್ಲಿ 1520 ಮಿ.ಮೀ, 2016ರಲ್ಲಿ 1280 ಮಿ.ಮೀ ಮಳೆಯಾಗಿದ್ದರೆ ಈ ವರ್ಷ ಈವರೆಗೆ 1020 ಮಿ.ಮೀ ಮಳೆಯಾಗಿದೆ.

ಬಯಲುಸೀಮೆಯ ಛಾಯೆ ಇರುವ ಮುಂಡಗೋಡ ತಾಲ್ಲೂಕಿನ ವಾಡಿಕೆ ಮಳೆ ಜುಲೈವರೆಗೆ 730 ಮಿ.ಮೀ ಮಾತ್ರ. ಕಳೆದ ನಾಲ್ಕು ವರ್ಷಗಳಿಂದ ನಿರಂತರ­ವಾಗಿ ಈ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದೆ. ಇಲ್ಲಿಯವರೆಗೆ 368 ಮಿ.ಮೀ ಮಳೆ ಸುರಿದಿದೆ.

ಜೂನ್‌ನಲ್ಲಿ ಸಹ ನಿರೀಕ್ಷಿತ ಮಳೆ­ಯಾಗಿಲ್ಲ. ಶಿರಸಿ ತಾಲ್ಲೂಕಿನಲ್ಲಿ ಜೂನ್‌­ನಲ್ಲಿ ವಾಡಿಕೆ ಮಳೆ 510 ಮಿ.ಮೀ, ಈ ವರ್ಷ ಆಗಿರುವುದು 450 ಮಿ.ಮೀ, ಯಲ್ಲಾಪುರದಲ್ಲಿ 500 ಮಿ.ಮೀ ವಾಡಿಕೆ ಮಳೆ ಸುರಿದಿದ್ದು 440 ಮಿ.ಮೀ, ಮುಂಡಗೋಡಿನಲ್ಲಿ ವಾಡಿಕೆ ಮಳೆ 190 ಮಿ.ಮೀ ಆಗಿದ್ದರೆ ಕೇವಲ 139 ಮಿ.ಮೀ ಮಳೆ ದಾಖಲಾಗಿದೆ. ಸಿದ್ದಾಪುರದಲ್ಲಿ ಮಾತ್ರ ಜೂನ್ ತಿಂಗಳಲ್ಲಿ ವಾಡಿಕೆ(557 ಮಿ.ಮೀ)ಗಿಂತ ಅಧಿಕ ಮಳೆ (668 ಮಿ.ಮೀ)ಯಾಗಿದೆ.

ಬಿತ್ತನೆ ಮಾಡಿ ಭತ್ತ ಬೆಳೆಯುವ ರೈತರಿಗೆ ಮುಂಗಾರು ಕ್ಷೀಣಗೊಂಡಿರು­ವುದು ನುಂಗಲಾರದ ತುತ್ತಾಗಿ ಪರಿಣ­ಮಿ­ಸಿದೆ. ‘ಭತ್ತವೇ ಪ್ರಮುಖ ಬೆಳೆಯಾಗಿ­ರುವ ಬನವಾಸಿ ಹೋಬಳಿಯಲ್ಲಿ ಶೇ 32ರಷ್ಟು ಮಳೆಯ ಕೊರತೆಯಾಗಿದೆ. ಮೇ ಕೊನೆಯಲ್ಲಿ ಭತ್ತ ಬಿತ್ತನೆ ಮಾಡಿರುವ ರೈತರು ಈಗ ಗದ್ದೆಯಲ್ಲಿ ಕುಂಟೆ ಹೊಡೆಯಲು ಸಾಧ್ಯವಾಗದೇ ಕೈಚೆಲ್ಲಿ ಕುಳಿತಿದ್ದಾರೆ. ಗದ್ದೆಯಲ್ಲಿ ನೀರು ನಿಲ್ಲುವಷ್ಟು ಮಳೆಯೇ ಬಂದಿಲ್ಲ’ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಗೌಡ.

‘ಬನವಾಸಿ ಭಾಗದಲ್ಲಿ ಮಳೆ ನೀರನ್ನೇ ಅವಲಂಬಿಸಿರುವ ರೈತರಿಗೆ ಸ್ವಲ್ಪ ತೊಂದರೆಯಾಗಿದೆ. ನೀರಾವರಿ ವ್ಯವಸ್ಥೆ ಇರುವವರು ನಾಟಿಗೆ ಅಗೆಮಡಿ ಸಿದ್ಧಪಡಿಸುತ್ತಿದ್ದಾರೆ. ಒಟ್ಟು 5250 ಹೆಕ್ಟೇರ್ ಭತ್ತ ಬಿತ್ತನೆ ಪ್ರದೇಶದಲ್ಲಿ 3100 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ವಿ. ಕೂರ್ಸೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT