ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯದ ಮಾರಾಟಕ್ಕೆ ಖಾಕಿ ಪೋಷಾಕು

Last Updated 14 ಜುಲೈ 2017, 11:47 IST
ಅಕ್ಷರ ಗಾತ್ರ

ಸಿನಿಮಾ: 'ದಂಡುಪಾಳ್ಯ- 2'
ನಿರ್ಮಾಪಕ: ವೆಂಕಟ್‌
ನಿರ್ದೇಶಕ: ಶ್ರೀನಿವಾಸ ರಾಜು
ತಾರಾಗಣ: ರವಿಶಂಕರ್‌, ಶ್ರುತಿ, ಪೂಜಾ ಗಾಂಧಿ, ಮಕರಂದ ದೇಶಪಾಂಡೆ

ಸಿನಿಮಾ ಸಂತೆಯಲ್ಲಿ ಕ್ರೌರ್ಯವೆಂಬುದು ಸೇಂದಿ ಅಂಗಡಿಯ ಹಾಗೆ. ಹೂವಿನ ಅಂಗಡಿಗೆ ಗಿರಾಕಿಗಳು ಬರದಿರಬಹುದು. ಆದರೆ ಸೇಂದಿಯಂಗಡಿಯ ವ್ಯಾಪಾರ ಯಾವಾಗಲೂ ಜೋರಾಗಿಯೇ ಇರುತ್ತದೆ. ಹಾಗೆಯೇ ಸದಭಿರುಚಿಯ ಸಿನಿಮಾಗಳಿಗಿಂತ ಹಿಂಸೆಯನ್ನು ಉಣಿಸುವ ಸಿನಿಮಾಗಳು ಜನರನ್ನು ವೇಗವಾಗಿ ಆಕರ್ಷಿಸುತ್ತವೆ. ಈ ಲೆಕ್ಕಾಚಾರ ಶ್ರೀನಿವಾಸ ರಾಜು ಅವರಿಗೆ ಚೆನ್ನಾಗಿಯೇ ಗೊತ್ತು. ಇದು ಅವರದೇ ನಿರ್ದೇಶನದ ‘ದಂಡುಪಾಳ್ಯ’ ಸಿನಿಮಾದಲ್ಲಿ ಚೆನ್ನಾಗಿ ಫಲ ನೀಡಿತ್ತು.

‘ದಂಡುಪಾಳ್ಯ’ ಸಿನಿಮಾದ ಮುಂದುವರಿದ ಭಾಗವಾದ ’2’ದಲ್ಲಿಯೂ ಕ್ರೌರ್ಯವನ್ನು ಮಾರುವ ಕೆಲಸವನ್ನೇ ನಿರ್ದೇಶಕರು ಮುಂದುವರಿಸಿದ್ದಾರೆ. ಹಿಂದೆ ಪಾತಕಿಗಳ ವಿಕೃತಿಗಳನ್ನು ತೋರಿಸಿದ್ದರೆ ಈ ಸಲ ಅದಕ್ಕೆ ಪೊಲೀಸರ ಪೋಷಾಕು ತೊಡಿಸಿದ್ದಾರೆ. ಇದೊಂದು ರೀತಿಯಲ್ಲಿ ಅದೇ ಮದ್ಯವನ್ನು ಔಷಧ ಬಾಟಲಿಯಲ್ಲಿಟ್ಟು ಮಾರಾಟ ಮಾಡಿದ ಹಾಗೆ!

ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಜನ ಅಪರಾಧಿಗಳು ಅಮಾಯಕರಿರಬಹುದು ಎಂದು ಅಪರಾಧ ವರದಿಗಾರ್ತಿ ಅಭಿವ್ಯಕ್ತಿಯ ಒಳಮನಸ್ಸಿಗೆ ಅನಿಸಿಬಿಡುತ್ತದೆ. ಅವರ ಮೇಲಿನ ಕಳಂಕವನ್ನು ತೊಡೆದುಹಾಕಬೇಕು ಎಂದು ಹೊರಡುತ್ತಾಳೆ. ಆಗ ಅವಳಿಗೆ ಹೆಜ್ಜೆ ಹೆಜ್ಜೆಗೂ ಆ ಅಪರಾಧಿಗಳು ಎಂಥ ಅಮಾಯಕರು ಎಂಬುದು ಮನದಟ್ಟಾಗುತ್ತ ಹೋಗುತ್ತದೆ!

‘ಅವರ ಮೇಲೆ ಎಂಬತ್ತು ಪ್ರಕರಣಗಳಿವೆ. ಆದರೆ ಅವರು ಎಷ್ಟು ಕ್ರೂರಿಗಳು ಎಂದು ಬಿಂಬಿಸಲ್ಪಿಟ್ಟಿದೆಯೋ ಅಷ್ಟೊಂದು ಕ್ರೂರಿಗಳಾಗಿರಲಿಕ್ಕಿಲ್ಲ’ ಎಂಬ ವಾದವೇ ವಿಚಿತ್ರವಾಗಿ ಕಾಣುತ್ತದೆ.

ಮೊದಲರ್ಧ ಪಾತಕಿಗಳ ಅಮಾಯಕತನವನ್ನು ಬಿಂಬಿಸಲು ಮೀಸಲಾದರೆ, ಎಲ್ಲಿಂದಲೋ ವಲಸೆ ಬಂದವರನ್ನು ಪೊಲೀಸರು ಹೇಗೆಲ್ಲ ಹಿಂಸಿಸಿ ಅವರು ಮಾಡದ ಅಪರಾಧ ಕೃತ್ಯಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾರೆ ಎನ್ನುವುದನ್ನು ದ್ವಿತೀಯಾರ್ಧದಲ್ಲಿ ತೋರಿಸಿದ್ದಾರೆ.

ಪೊಲೀಸರೇ ಇಲ್ಲಿ ಖಳರು. ಕ್ರೂರ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ರವಿಶಂಕರ್‌ ಸಣ್ಣ ಧ್ವನಿಯಲ್ಲಿಯೇ ನಡುಕ ಹುಟ್ಟಿಸುತ್ತಾರೆ. ಪೂಜಾ ಗಾಂಧಿ, ಮಕರಂದ ದೇಶಪಾಂಡೆ, ರವಿ ಕಾಳೆ, ಕರಿಸುಬ್ಬು, ಸಂಜನಾ ಸೇರಿದಂತೆ ಅಪರಾಧಿಗಳ ಪಾತ್ರಧಾರಿಗಳೆಲ್ಲರೂ ಕಣ್ಣಿನಲ್ಲೇ ದೈನ್ಯತೆ ಮತ್ತು ಕ್ರೌರ್ಯ ಎರಡನ್ನೂ ಹೊಮ್ಮಿಸುತ್ತಾರೆ.

ಅರ್ಜುನ್‌ ಜನ್ಯ ಸಂಗೀತ, ಕಥೆಯ ಕರಾಳತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವೆಂಕಟ್‌ ಪ್ರಸಾದ್‌ ಕ್ಯಾಮೆರಾ ಕ್ಲೋಸ್‌ಅಪ್‌, ಎಕ್ಸ್ಟ್ರಾ ಕ್ಲೋಸ್‌ಅಪ್‌ ಶಾಟ್‌ಗಳಲ್ಲಿಯೇ ಆಟವಾಡಿದ್ದಾರೆ. ಸಿ. ರವಿಚಂದ್ರನ್‌ ಸಂಕಲನವೂ ಅಚ್ಚುಕಟ್ಟಾಗಿದೆ.

ಒಂದು ಸ್ವತಂತ್ರ ಸಿನಿಮಾ ಆಗಿ ನೋಡಿದವರಿಗೆ ‘2’ ಟ್ರೇಲರ್‌ನಂತೆ ಕಾಣಿಸಿದರೆ ಅಚ್ಚರಿಯಿಲ್ಲ. ‘ದಂಡುಪಾಳ್ಯ’ ನೋಡಿದವರಿಗೆ ನಿರ್ದೇಶಕರ ವ್ಯಾಪಾರದ ಲೆಕ್ಕಾಚಾರ ಅರ್ಥವಾಗುತ್ತದೆ. ಮೊದಲನೇ ಭಾಗದಲ್ಲಿ ಮಹಾಪಾತಕಿಗಳನ್ನಾಗಿ ಚಿತ್ರಿಸಿದವರನ್ನೇ ಈ ಭಾಗದಲ್ಲಿ ಅಮಾಯಕರನ್ನಾಗಿ ಬಿಂಬಿಸಿರುವುದು ನಿರ್ದೇಶಕರ ಅನುಕೂಲಸಿಂಧು ಮನಸ್ಥಿತಿಗೆ ನಿದರ್ಶನ.

ಅನುಕೂಲಸಿಂಧು ಕಾರಣಗಳಿಗಾಗಿ ಪಾತಕಿಗಳನ್ನು ಅಮಾಯಕರನ್ನಾಗಿಸಿ, ವ್ಯವಸ್ಥೆಯನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಗಳ ಬಗ್ಗೆಯೂ ನಿರ್ದೇಶಕರಿಗೆ ಎಚ್ಚರ ಇದ್ದಂತಿಲ್ಲ.

ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ‘3’ ಸಿನಿಮಾದ ಮೂಲಕ ಈ ಸರಣಿ ಕೊನೆಯಾಗುತ್ತದೆ ಎಂಬ ಸೂಚನೆಯೊಂದಿಗೆ ‘2’ ಮುಗಿಯುತ್ತದೆ. ಆ ಭಾಗದಲ್ಲಿ ಏನಿರಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ.

ಅಷ್ಟಕ್ಕೂ ಹಿಂಸೆಯ ದಾಹ ಕಜ್ಜಿಯ ಹಾಗೆ. ಕೆರೆದುಕೊಂಡಷ್ಟೂ ತುರಿಕೆ ಹೆಚ್ಚುತ್ತದೆ. ಆದರೆ ಆ ಕ್ಷಣದಲ್ಲಿ ಸುಖದ ಭ್ರಮೆ ಹುಟ್ಟಿಸುವ ತುರಿಕೆ ಗಾಯವನ್ನು ಉಲ್ಬಣಿಸುತ್ತದಷ್ಟೆ. ಈ ಸಿನಿಮಾ ಕೂಡ ಇಂಥದ್ದೇ ಸುಖದ ಭ್ರಮೆಯನ್ನು ಬಂಡವಾಳವಾಗಿಸಿಕೊಂಡಿರುವ ಸಿನಿಮಾ.  ಕ್ರೌರ್ಯವನ್ನು ನೋಡಿ ‘ಕಿಕ್’ ಹೊಂದುವವರಿಗೆ ಇಂಥ ಸಿನಿಮಾಗಳು ಕಜ್ಜಿ ತುರಿಕೆಯ ಸುಖ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT