ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಸಂಜೀವಿನಿಯಾದ ಹವ್ಯಾಸ

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ನಿಮ್ಮ ಹವ್ಯಾಸ ಏನು? ಹೀಗೆ ಕೇಳಿದಾಗ ತಟ್ಟನೆ ನನ್ನ ಮೆಚ್ಚಿನ ಹವ್ಯಾಸದ ಬಗ್ಗೆ ಅಂತರಂಗದ ಬಿಚ್ಚು ನುಡಿಗಳನ್ನಾಡಲು ವೇದಿಕೆ ಸಿಕ್ಕಿತಲ್ಲಾ ಎಂದು ಖುಷಿಯಾಯಿತು. ಚಿಕ್ಕಂದಿನಿಂದಲೂ ನನ್ನಲ್ಲಿ ಓದಿನ ಬಗ್ಗೆ ನಂಟು ಹೇಗೆ ಬೆಸೆಯಿತೋ ನನಗೆ ಅರಿವಿಲ್ಲ; ಓದಿದ್ದೆಲ್ಲಾ ಅರ್ಥೈಸಿಕೊಳ್ಳಲು ಅಸಮರ್ಥವಾದ ವಯಸ್ಸಿನಲ್ಲಿ, ಎಂದರೆ 6ನೇ ತರಗತಿ ಓದುತ್ತಿರುವಾಗಲೇ ಪಠ್ಯಪುಸ್ತಕಗಳ ಹೊರತಾಗಿ ಕಾದಂಬರಿಗಳ ಬಗ್ಗೆ ಅತಿಯಾದ ಆಕರ್ಷಣೆ ಬಂತು. ಅದರಲ್ಲೂ ತ್ರಿವೇಣಿಯವರ ಕಾದಂಬರಿಗಳೆಂದರೆ ಪ್ರಾಣ. ಪಕ್ಕದ ಮನೆಯವರು ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳನ್ನು ತಂದು ಓದುತ್ತಿದ್ದೆ. ಮನೆಗೆ ತರಿಸುತ್ತಿದ್ದ ‘ಸುಧಾ’ ವಾರಪತ್ರಿಕೆಯಲ್ಲಿನ ಕಥೆಗಳನ್ನೂ ಧಾರಾವಾಹಿಗಳನ್ನೂ ಬಿಡದೆ ಓದುತ್ತಿದ್ದೆ.

ಆರು ಮಕ್ಕಳಿರುವ ತುಂಬು ಸಂಸಾರದಲ್ಲಿ ನಮ್ಮ ಓದಿನ ಬಗ್ಗೆ ಪೂರ್ಣ ಪ್ರಮಾಣದ ಗಮನವನ್ನು ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಕೊಡಲಾಗದ ಪರಿಸ್ಥಿತಿ ಅಪ್ಪ–ಅಮ್ಮನದು.

‘ಓದಿಕೊಳ್ಳಿ’ ಎಂದು ಹೇಳಿ ಓದಲು ಕೂಡಿಸಿದರೆ ಮುಗಿಯಿತು. ನಾವು ಏನು ಓದುತ್ತಿದ್ದೆವೋ ಅದನ್ನು ಪರೀಕ್ಷಿಸದಷ್ಟು ನಂಬಿಕೆ ಮಕ್ಕಳಲ್ಲಿ. ನನ್ನ ಅಕ್ಕ, ಅಣ್ಣಂದಿರು ದೂರ ಕುಳಿತು ಓದುತ್ತಿದ್ದರೂ, ನಾನು ಮಾತ್ರ ಪಠ್ಯಪುಸ್ತಕದಲ್ಲಿ ತ್ರಿವೇಣಿಯವರ ಕಾದಂಬರಿಯನ್ನು ಇಟ್ಟುಕೊಂಡು ಓದುತ್ತಿದ್ದೆ. ಅಮ್ಮ ಅಲ್ಲಿ ಒಮ್ಮೆ ಸುಳಿದಾಡಿ ‘ಮಕ್ಕಳು ಅವರ ಪಾಡಿಗೆ ಅವರು ಚೆನ್ನಾಗಿ ಓದಿಕೊಳ್ತಾ ಇದಾರೆ’ ಎಂದು ಅಂದುಕೊಂಡು ಒಳಗೆ ಹೋಗುತ್ತಿದ್ದಳು.

ನಂತರ ಅಣ್ಣ-ಅಕ್ಕಂದಿರ ಪಿಸುಮಾತು, ನಗು. ನಾನು ಮಾತ್ರ ಕಾದಂಬರಿಯಲ್ಲಿ ಕಳೆದುಹೋಗಿರುತ್ತಿದ್ದೆ. ಅದೆಷ್ಟು ತನ್ಮಯತೆಯಿಂದ ಓದುತ್ತಿದ್ದೆ ಎಂದರೆ ಕಾದಂಬರಿಯ ಯಾವ ಸನ್ನಿವೇಶ, ಸಂಭಾಷಣೆ ಎಷ್ಟನೇ ಪುಟದಲ್ಲಿದೆ ಅನ್ನುವಷ್ಟು ಬಾಯಿಪಾಠವಾಗಿರುತ್ತಿತ್ತು.

ನನ್ನ ಈ ಕಳ್ಳತನ ಒಂದು ದಿನ ಅಣ್ಣನಿಂದ ಬಯಲಾಗಿ ಅಪ್ಪನ ಹತ್ತಿರ ನನ್ನ ಈ ಘನಂಧಾರಿ ಕೆಲಸದ ಬಗ್ಗೆ ಹೇಳಿಬಿಟ್ಟ. ನಾನು ಹೆದರಿದಂತೆ ಅಪ್ಪ ಬೈಯಲಿಲ್ಲ. ಏಕೆಂದರೆ ಅದುವರೆಗೂ ನಡೆದ ಶಾಲಾಪರೀಕ್ಷೆಗಳಲ್ಲಿ 80ರ ಮೇಲೆ ಇದ್ದ ನನ್ನ ಅಂಕಪಟ್ಟಿ ಅವರ ಬೈಗಳನ್ನು ತಡೆದಿತ್ತು. ಆದರೂ ಒಳ್ಳೆಯ ಮಾತಿನಲ್ಲಿ ಬುದ್ಧಿ ಹೇಳಿದರು: ‘ಅಮ್ಮಿ, ಕಥೆ ಪುಸ್ತಕ ರಜ ಬಂದಾಗ ಓದಿಕೋ, ಪಾಠ ಓದುವಾಗ ಬೇಡ’. ಆದರೂ ಶಾಲೆಯಿಂದ ಬಂದ ತಕ್ಷಣ ಆಡಲು ಹೋಗದೆ ಪುಸ್ತಕ ಓದುತ್ತ ಕುಳಿತಿರುತ್ತಿದ್ದೆ; ಅಂಗಡಿಯಲ್ಲಿ ಸಾಮಾನು ಕಟ್ಟಿಕೊಡುತ್ತಿದ್ದ ವಾರಪತ್ರಿಕೆಗಳ ಪೇಪರನ್ನೂ ಬಿಡುತ್ತಿರಲಿಲ್ಲ.

ಮುಂದೆ ಬದುಕಲ್ಲಿ ಅವಘಡಗಳು ಸಂಭವಿಸಿದಾಗ, ಮಾನಸಿಕವಾಗಿ ಕುಗ್ಗಿ ಹೋದಾಗ ನನ್ನಲ್ಲಿ ಧರ್ಯ ತುಂಬಿ ಬದುಕನ್ನು ಸಹನೀಯವಾಗಿಸಿ ಮನದ ಸಮತೋಲನ ಕಾಯ್ದುಕೊಂಡು ಬದುಕಲು ಕಲಿಸಿದ್ದೇ ಪುಸ್ತಕಗಳು, ಸಾಹಿತ್ಯ. ನನ್ನ ಬದುಕಿಗೆ ಆಸರೆಯಾಗುವ ಮಾನಸಿಕ ಧೃಡತೆಯ  ಬಗ್ಗೆ ಬೋಧಿಸುವ ಅನೇಕ ಅಮೂಲ್ಯ ಪುಸ್ತಕಗಳು ನನ್ನ ಜೀವನಕ್ಕೊಂದು ನೆಲೆ ಕಂಡುಕೊಂಡು ಬದುಕುವ ಸ್ಥಿರತೆ ಕಲಿಸಿದವು.

ಚಿಕ್ಕಂದಿನಿಂದ ಬೇರೂರಿದ್ದ ಈ ಓದಿನ ಹವ್ಯಾಸದಿಂದಾಗಿ ಉತ್ತಮ ಅಧ್ಯಾತ್ಮಿಕ ಗ್ರಂಥಗಳ ಅಧ್ಯಯನ ಮಾಡುವಂತಾಯಿತು. ದಾರ್ಶನಿಕರ, ಸಂತರ, ತತ್ವ-ನೀತಿ, ತ್ಯಾಗ–ಆದರ್ಶಗಳ ಚಿಂತನೆಯಿಂದಾಗಿ ನನ್ನ ಜೀವನದ ದೃಷ್ಠಿಕೋನವನ್ನು ಆರೋಗ್ಯಕರ ಸಾರ್ಥಕತೆಯ ಬೆಳಕಿನೆಡೆಗೆ ತಿರುಗಿಸಿದ್ದು ನನ್ನ ಈ ಸಾಹಿತ್ಯಪ್ರೀತಿಯೇ.

ಸಹೃದಯಿ ಸ್ನೇಹಿತೆಯ ಒತ್ತಾಸೆಯಿಂದ ಅಧ್ಯಾತ್ಮಿಕ, ಸಾಮಾಜಿಕ ಲೇಖನ–ಕವನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಗೊಂಡು ನಾನೂ ಬರಹಗಾರ್ತಿಯಾದೆ. ಆಕಾಶವಾಣಿಯಲ್ಲೂ  ಅವುಗಳನ್ನು ಪ್ರಸ್ತುತ ಪಡಿಸುವ ಅವಕಾಶಗಳು ಒದಗಿ ಬಂದಿವೆ. ನನಗೆ ಪ್ರಿಯವಾದ ಹವ್ಯಾಸವೊಂದು ನನಗೆ ಸಾಮಾಜಿಕ ಮನ್ನಣೆಯನ್ನೂ ಸ್ಥಾನಮಾನವನ್ನೂ ನೀಡಿದೆಯಲ್ಲದೆ ಬದುಕಿಗೇ ಸಂಜೀವಿನಿಯಂತೆ ನನ್ನ ಒಂಟಿ ಬದುಕಿಗೆ ಆಧಾರವಾಗಿದೆ. ಇದು ನನ್ನ ಜೀವನದ ಆನಂದಕ್ಕೂ ವಿಸ್ಮಯಕ್ಕೂ ಕಾರಣವಾಗಿದೆ.
–ಮಾಲಾ ರಾಮಚಂದ್ರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT