ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ರಕ್ಷಕ ಸೋರೆಕಾಯಿ ಖಾದ್ಯಗಳು

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಸೋರೆಕಾಯಿಯಲ್ಲಿ ಯಾವ ತಿನಿಸನ್ನು ಮಾಡಬಹುದು; ಒಂದು ಸಾರು, ಮತ್ತೊಂದು ಹುಳಿ; ಅಬ್ಬಬ್ಬಾ ಎಂದರೆ ಪಲ್ಯ, ಅಷ್ಟೆ! ಹೀಗೆ ಹೇಳುವವರಿಗೆ ಉತ್ತರವಾಗಿ ಸೋರೆಕಾಯಿಯಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ವಿಧಾನವನ್ನು ಇಲ್ಲಿ ವಿವರಿಸಿದ್ದಾರೆ, ಸರಸ್ವತಿ ಎಸ್‌. ಭಟ್

ಸೋರೆಕಾಯಿ ಸಿಹಿ ಅಪ್ಪ
ಬೇಕಾಗುವ ಸಾಮಗ್ರಿಗಳು: 
ಅಕ್ಕಿ – 1ಕಪ್‌, ಸೋರೆಕಾಯಿ ಹೋಳು – 2ಕಪ್‌, ಅವಲಕ್ಕಿ – ಅರ್ಧ ಕಪ್‌, ಏಲಕ್ಕಿ ಪುಡಿ – ಕಾಲು ಚಮಚ, ಬೆಲ್ಲ – 1ಕಪ್‌, ಉಪ್ಪು – ಚಿಟಿಕೆ, ತುಪ್ಪ – 2 ರಿಂದ ಚಮಚ.

ತಯಾರಿಸುವ ವಿಧಾನ: ಅಕ್ಕಿಯನ್ನು 2 – 3 ಗಂಟೆ ನೆನೆಸಿ. ನಂತರ ತೊಳೆದು, ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಸೋರೆಕಾಯಿ ಮತ್ತು ನೆನೆಸಿಟ್ಟ ಅವಲಕ್ಕಿಯನ್ನು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನೀರು ಹಾಕುವ ಅಗತ್ಯವಿದ್ದರೆ ಮಾತ್ರ ನೀರು ಹಾಕಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ. ನಂತರ ಅಪ್ಪದ ಕಾವಲಿ ಗುಳಿಗೆ ತುಪ್ಪ ಹಾಕಿ, ಬಿಸಿಯಾದಾಗ ಹಿಟ್ಟು ಹಾಕಿ. ಬೆಂದು ತಳ ಬಿಟ್ಟಾಗ ಅಪ್ಪದ ಕಡ್ಡಿಯಿಂದ ಚುಚ್ಚಿ ಕವುಚಿ ಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆದು ಪಾತ್ರೆಗೆ ಹಾಕಿ. ಈ ಅಪ್ಪ ಸವಿಯಲು ಸ್ವಾದಿಷ್ಟವಾಗಿರುತ್ತದೆ.

*


ಸೋರೆಕಾಯಿ ಕಡುಬು
ಬೇಕಾಗುವ ಸಾಮಗ್ರಿಗಳು:
ನೆನೆಸಿದ ಅಕ್ಕಿ – 1ಕಪ್ಸ, ಸಣ್ಣಗೆ ಹೆಚ್ಚಿದ ಸೋರೆಕಾಯಿ – 3ಕಪ್‌, ಉಪ್ಪು – ರುಚಿಗೆ, ಬಾಳೆಎಲೆ ತುಂಡು – 5ರಿಂದ 6

ತಯಾರಿಸುವ ವಿಧಾನ: ನೆನೆಸಿದ ಅಕ್ಕಿಯಲ್ಲಿನ ನೀರಿನ ಪಸೆ ತೆಗೆದು, 1 ಕಪ್ ಸೋರೆಕಾಯಿ ಹೋಳು ಸೇರಿಸಿ ಸ್ವಲ್ಪ ತರಿಯಾಗಿ ರುಬ್ಬಿ. ನಂತರ ಉಳಿದ ಸೋರೆಕಾಯಿ ತುಂಡು ಮತ್ತು ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ಆಮೇಲೆ ಬಾಡಿಸಿದ ಬಾಳೆಎಲೆಯ ಮೇಲೆ ಮೇಲಿನ ಮಿಶ್ರಣವನ್ನು ಒಂದೂವರೆ ಸೌಟು ಹಾಕಿ ತುಸು ಹರಡಿ ಬಾಳೆಎಲೆ ಮಡಚಿ 1 ಗಂಟೆ ಹಬೆಯಲ್ಲಿ ಬೇಯಿಸಿ, ತೆಂಗಿನ ಚಟ್ನಿಯೊಂದಿಗೆ ಸವಿಯಿರಿ.

*


ಸೋರೆಕಾಯಿ ಜೀರಿಗೆ ಬೆಂದಿ
ಬೇಕಾಗುವ ಸಾಮಾಗ್ರಿಗಳು:
ಹೆಚ್ಚಿದ ಸೋರೆಕಾಯಿ – 1ಕಪ್‌, ತೆಂಗಿನತುರಿ – 2 ಕಪ್‌, ಕೆಂಪು ಮೆಣಸಿನಹುಡಿ – ಕಾಲು ಚಮಚ, ಬೆಲ್ಲ – ಚಿಕ್ಕ ಹೋಳು, ಉಪ್ಪು – ರುಚಿಗೆ, ಜೀರಿಗೆ  – ಅರ್ಧ ಚಮಚ, ಸಾಸಿವೆ – ಅರ್ಧ ಚಮಚ, ಎಣ್ಣೆ – ಅರ್ಧ ಚಮಚ

ತಯಾರಿಸುವ ವಿಧಾನ: ಸೋರೆಕಾಯಿ ತುಂಡುಗಳು, ಕೆಂಪುಮೆಣಸಿಪುಡಿ, ಉಪ್ಪು, ಬೆಲ್ಲ ಮತ್ತು ಸ್ವಲ್ಪ ನೀರನ್ನು ಸೇರಿಸಿ ಪಾತ್ರೆಗೆ ಹಾಕಿ ಬೇಯಿಸಿ. ತೆಂಗಿನತುರಿ, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಂದ ಸೋರೆಕಾಯಿಗೆ ಸೇರಿಸಿ ಒಂದು ಕುದಿ ಕುದಿಸಿ. ಆಮೇಲೆ ಸಾಸಿವೆ ಒಗ್ಗರಣೆ ಹಾಕಿ. ಜೀರಿಗೆ ಸೇರಿಸಿದ ಈ ಬೆಂದಿ ಬೇಸಿಗೆ ಕಾಲಕ್ಕೆ ತಿಂದರೆ ಹೊಟ್ಟೆಗೆ ತಂಪು.

*


ಸೋರೆಕಾಯಿ ಮೊಸರು ಬೆಂದಿ
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಸೋರೆಕಾಯಿ – ಅರ್ಧಕಪ್‌, ಮೊಸರು – 1ಕಪ್‌, ಸಾಸಿವೆ – ಕಾಲು ಚಮಚ, ಒಣಮೆಣಸು – 1, ಎಣ್ಣೆ – ಅರ್ಧ ಚಮಚ, ತೆಂಗಿನತುರಿ – ಅರ್ಧ ಕಪ್‌, ಕರಿಬೇವು – 1 ಎಸಳು, ಬೆಲ್ಲ – ಸಣ್ಣ ತುಂಡು

ತಯಾರಿಸುವ ವಿಧಾನ: ಸೋರೆಕಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಹಾಕಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬೇಸಿಗೆಯ ಬಿಸಿಲಿನ ತಾಪಕ್ಕೆ ಈ ಮೊಸರು ಬೆಂದಿ ಸವಿಯಲು ಯೋಗ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT