ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ಬೇಕಿರುವುದು ಹಣವಷ್ಟೆ ಅಲ್ಲ!

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಸದಾ ಚರ್ಚೆಯಲ್ಲಿರುವ ವಿಷಯ ಎಂದರೆ, ಸರ್ಕಾರ ಜಿಡಿಪಿಯ ಕೇವಲ ಶೇ. 1.25ರಷ್ಟನ್ನು ಮಾತ್ರ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅದು ಶೇ.5ರಷ್ಟು ಇರಬೇಕು. ನಮ್ಮ ಸರ್ಕಾರ ಕೆ2025ಕ್ಕೆ ಈ ಪ್ರಮಾಣವನ್ನು ಶೇ.2.5ರಷ್ಟು ಮುಟ್ಟಿಸುವ ಯೋಜನೆಯನ್ನಷ್ಟೇ ಹಾಕಿಕೊಂಡಿದೆ.

ಆರೋಗ್ಯಕ್ಕೆ ಬೇಕಿರುವುದು ಹಣವಷ್ಟೆ ಅಲ್ಲ! ವೈದ್ಯಕೀಯ ನಿಯತಕಾಲಿಕ ’ಲ್ಯಾನ್ಸೆಟ್’ ವರದಿಯ ಪ್ರಕಾರ ಭಾರತ ‘ಅನಾರೊಗ್ಯದ ಆಗರ’. ಆರೋಗ್ಯವಂತ ದೇಶಗಳ ಪಟ್ಟಿಯಲ್ಲಿ ನಮ್ಮ ದೇಶದ ಸ್ಥಾನ 154. ಎಂದರೆ ಒಟ್ಟು 195 ದೇಶಗಳಲ್ಲಿ ನಾವು 154ನೆಯವರು. ನಮಗಿಂತ ಉತ್ತಮವಾಗಿರುವ ದೇಶಗಳು 153. ನಮಗಿಂತ ಕಳಪೆ ಸ್ಥಿತಿಯಲ್ಲಿರುವ ದೇಶಗಳು ಕೇವಲ 41. ಚೀನಾದೇಶ 82ನೇ ಸ್ಥಾನದಲ್ಲಿದ್ದು, ಶ್ರಿಲಂಕಾ 73ನೇ ಸ್ಥಾನದಲ್ಲಿದೆ.  20 ವರ್ಷಗಳ ಹಿಂದಿನ ಚೀನಾದ ಪರಿಸ್ಥಿತಿಯಲ್ಲಿ ಈಗ ನಮ್ಮ ದೇಶವಿದೆ. ಇದು ‘ಗ್ಲೊಬಲ್ ಬರ್ಡನ್ ಆಫ್‌ ಡಿಸೀಸ್’ ಎಂಬ ವರದಿ.

ನಮ್ಮ ದೇಶದಲ್ಲಿ ಸುಮಾರು ಮೂರು ಕೋಟಿ ಜನರು ಕ್ಷಯರೋಗಕ್ಕೆ ತುತ್ತಾಗಿದ್ದಾರೆ; ವರ್ಷಕ್ಕೆ ಸುಮಾರು ಐದು ಲಕ್ಷ ಜನರು ಈ ಕಾಯಿಲೆಯಿಂದಲೇ ಸಾವಿಗೀಡಾಗುತ್ತಿದ್ದಾರೆ. ತಡೆಗಟ್ಟಬಹುದಾದ 30 ವಿವಿಧ ಕಾಯಿಲೆಗಳಿಗೆ ತುತ್ತಾಗುವ ಜನರೂ ಅಕಾಲಿಕವಾಗಿ ಮರಣವನ್ನು ಹೊಂದುತ್ತಿದ್ದಾರೆ. ವಾಂತಿ–ಭೇದಿ ಕಾಯಿಲೆ ಇನ್ನೂ ಜೀವಂತವಾಗಿದೆ.

ವರ್ಷಕ್ಕೆ ಸಾವಿಗೀಡಾಗುವ ಏಳು ಲಕ್ಷ ಶಿಶುಮರಣದಲ್ಲಿ ಸುಮಾರು ನಾಲ್ಕು ಲಕ್ಷ ಶಿಶುಮರಣಕ್ಕೆ ವಾಂತಿ–ಭೇದಿ ಕಾಯಿಲೆಯೇ ಕಾರಣವಾಗಿದೆ. ನಮ್ಮ ಆರೋಗ್ಯದ ಸ್ತಿತಿ–ಗತಿಗಳು ಹೀಗಿರುವಾಗ, ನಾವು ತಲೆ ಎತ್ತಿ ‘ಸೂಪರ್ ಪವರ್ ಆಗುತ್ತಿದ್ದೇವೆ’ ಎನ್ನಲು ಆಗುವುದಿಲ್ಲ.

2002ರಲ್ಲಿ ಮಧುಮೇಹದ ಪ್ರಮಾಣ ಶೇ.1ರಷ್ಟಿತ್ತು; 2015ರಲ್ಲಿ ಈ ಪ್ರಮಾಣ ಶೇ.17ರಷ್ಟು ಆಗಿರುವುದು ದುರಂತವೇ ಸರಿ. ಮಾತ್ರವಲ್ಲ, ಬಡವರಲ್ಲೂ ಇದು ಹೆಚ್ಚಾಗಿರುವುದು ಗಮನಾರ್ಹ. ಹೀಗಿದ್ದರೂ, ಹಿಂದಿನ ಲೆಕ್ಕಾಚಾರಗಳನ್ನು ಗಮನಿಸಿದರೆ ಆರೋಗ್ಯಕ್ಷೇತ್ರದಲ್ಲಿ ದೇಶ ಸಾಕಷ್ಟು ಪ್ರಗತಿಯನ್ನು ಕಂಡಿದೆ; ಹೌದು. ಆದರೆ ಅದು ಸಾಲದು. ಆಗಿರುವುದಕ್ಕೆ ತೃಪ್ತಿ ಪಟ್ಟರೆ ಕೆಟ್ಟೇವು!

ಆರೋಗ್ಯಸಮಾಜಕ್ಕೆ ಪೂರಕವಾಗಿರುವ ಶುದ್ಧ ನೀರು, ಆಹಾರ, ಲಸಿಕೆ, ಆರೋಗ್ಯಕರ ವಾತವರಣ ಇನ್ನೂ ಹದಗೆಟ್ಟಿರುವುದು ಆರೋಗ್ಯಕ್ಷೇತ್ರದ ಆಮೆಗತಿಯ ಪ್ರಗತಿಗೆ ಕಾರಣಗಳಾಗಿವೆ. ಸದಾ ಚರ್ಚೆಯಲ್ಲಿರುವ ವಿಷಯ ಎಂದರೆ, ಸರ್ಕಾರ ಜಿಡಿಪಿಯ ಕೇವಲ ಶೇ. 1.25ರಷ್ಟನ್ನು ಮಾತ್ರ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅದು ಶೇ.5ರಷ್ಟು ಇರಬೇಕು.

ನಮ್ಮ ಸರ್ಕಾರ ಕೆ2025ಕ್ಕೆ ಈ ಪ್ರಮಾಣವನ್ನು ಶೇ.2.5ರಷ್ಟು ಮುಟ್ಟಿಸುವ ಯೋಜನೆಯನ್ನಷ್ಟೇ ಹಾಕಿಕೊಂಡಿದೆ. ಇದು ಹೀಗಿರುವಾಗ ಈಗ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಕೊಡುವ ಹಣವನ್ನು ಖರ್ಚು ಮಾಡದೆಯೆ ಕೇಂದ್ರಕ್ಕೇ ವಾಪಾಸು ಕಳಿಸುತ್ತಿರುವ ಪ್ರಮಾಣ ಶೇ.20ರಷ್ಟಾಗಿರುವುದು ವಿಪರ್ಯಾಸ.

ಹೀಗೆ ಅತಿ ಹೆಚ್ಚು ಹಣ ಉಪಯೋಗಿಸದೇ ವಾಪಾಸಾಗುವುದು ದಲಿತರ ಅಭಿವೃದ್ಧಿಗೆಂದು ಬರುವ ಹಣ! ಒಂದೇ ದಶಕದಲ್ಲಿ ಒಂದು ಲಕ್ಷ ಕೋಟಿ ಹಣವನ್ನು ಖರ್ಚು ಮಾಡದೇ ವಾಪಸ್ಸಾಗಿದೆ – ಎನ್ನುತ್ತದೆ ‘ಇಂಡಿಯಾಸ್ಪೆನ್ಡ್’ ಹಾಗೂ ‘ಅರ್‌ಬಿಐ’ ವರದಿ. ಬುಡಕಟ್ಟು ಜನಾಂಗ ಹೆಚ್ಚು ಇರುವ ಜಾರ್ಖಂಡ್‌ನಂಥ ರಾಜ್ಯಗಳಿಂದ ಇಂಥ ಹಣ ವಾಪಸ್ಸಾಗುವುದು ಹೆಚ್ಚಾಗಿದೆ. ಇತ್ತೀಚಿಗೆ ಕೂಡ ಇಂಥದ್ದೇ ಇನ್ನೊಂದು ಅಘಾತಕಾರಿ ವರದಿಯಾಗಿತ್ತು.

ಸಂಗ್ರಹಿಸಿದ್ದ ಏಳು ಲಕ್ಷ ಎಂಬತ್ತೇಳು ಸಾವಿರದ ಮನ್ನೂರ ಮೂವತ್ತು ಯೂನಿಟ್ಸ್ ರಕ್ತದಲ್ಲಿ ೬೪೯೧೩ ಅರವತ್ತನಾಲ್ಕು ಸಾವಿರದ ಪಂಬೈನೂರ ಹದಿಮೂರು ಯೂನಿಟ್ಸ್ ರಕ್ತ ಪೋಲಾಗಿರುವುದು ದುರಂತವೇ ಸರಿ. ಅತಿ ಸಂಕಷ್ಟದಲ್ಲಿರುವವರಿಗೆ ಬರುವ ಹಣ, ಅತಿ ಕಷ್ಟದಿಂದ ಸಂಗ್ರಹಿಸಿದ ರಕ್ತವನ್ನು ಉಪಯೋಗಿಸದೇ ಪೋಲಾಗುತ್ತಿರುವುದು ನಮ್ಮ ಬೇಜಾವ್ದಾರಿಯನ್ನೇ ತಿಳಿಸುತ್ತದೆ.

ಹೀಗೆಯೇ ಹತ್ತು ವರ್ಷದಿಂದ ಉಪಯೋಗಿಸದೇ ಅವಧಿ ಕಳೆದುಕೊಂಡ ಟನ್‌ಗಟ್ಟಲೇ ಔಷಧಗಳನ್ನು ಕರ್ನಾಟಕ ಸರ್ಕಾರ ಇತ್ತೀಚೆಗಷ್ಟೆ ನಾಶ ಮಾಡಿತು. ಹಣವನ್ನು ಒದಗಿಸುವುದಕ್ಕಿಂತ, ಅದರ ಬಳಕೆಯ ಬಗ್ಗೆ ಗೊತ್ತಿಲ್ಲದಿರುವುದೇ ದೊಡ್ಡ ವಿಷಯವಾಗಿದೆ. ನಮ್ಮ ದಲಿತ ಹಾಸ್ಟೆಲ್‌ಗಳಿಗೆ ಬಿಡುಗಡೆಯಾದ ಹಣ ಖರ್ಚಾಗದೆ ವಾಪಸ್ಸಾಗುವುದನ್ನು ಕೇಳಿದ್ದೇವೆ. ಹೀಗಾಗಿ ತೆರಿಗೆಯನ್ನು ಸಂಗ್ರಹಿಸಿದರಷ್ಟೆ ಸಾಲದು, ಹಣ ಒದಗಿಸಿದರಷ್ಟೆ ಸಾಲದು; ಅದು ಸದ್ಬಳಕೆಯಾಗಬೇಕು. ಆದರೆ ಈಗ ಅದು ಬಳಕೆಯೇ ಆಗುತ್ತಿಲ್ಲ! if you have ends, means will follow – ಎನ್ನುವುದುಂಟು.

ಇಲ್ಲಿ ಜ್ವಲಂತ ಸಮಸ್ಯೆಗಳು ಕಣ್ಣೆದುರಿಗಿದ್ದೂ ಪರಿಹಾರಕ್ಕೆ ಬರುವ ಹಣವನ್ನು ಸರಿಯಾಗಿ ಬಳಸಿಕೊಳ್ಳದೆ, ಅದನ್ನು ಬೇಜವಾಬ್ದಾರಿಯಿಂದ ವಾಪಸ್ಸು ಕಳಿಸುವುದು ಮಾನವ ಅಭಿವೃದ್ಧಿಯ ಮಾಪನದಲ್ಲಿ ನಾವು ಕೆಳಗಿರುವುದಕ್ಕೆ ಒಂದು ಪ್ರಧಾನ ಕಾರಣ ಎಂದರೆ ತಪ್ಪಾಗದು. ಹಣ ಪಡೆಯುವ ಮುನ್ನ ಸರಿಯಾದ ಯೋಜನೆ ಮತ್ತು ಅದರ ಅನುಷ್ಠಾನಕ್ಕೆ ತಕ್ಕ ತಯಾರಿ ಇಲ್ಲದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ.

ಆರೊಗ್ಯದ ವಿಷಯದಲ್ಲಿ ಹಣ ತುಂಬ ಮುಖ್ಯ. ಆದರೆ ಅದಕ್ಕೆ ತಕ್ಕ ಯೋಜನೆಗಳಿದ್ದಲ್ಲಿ ಮಾತ್ರ ಅದರ ವಿನಿಯೋಗ ಸರಿಯಾದೀತು. ಈ ದೃಷ್ಟಿಯಿಂದ ಅತಿ ಹೆಚ್ಚು ಖರ್ಚು ಮಾಡುವ ಅಮೆರಿಕದ ಆರೋಗ್ಯಸಾಧನೆ ಇತರೆ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಕಳಪೆಯೇ. ಅತಿ ಕಡಿಮೆ ಖರ್ಚು ಮಾಡಿ ಸಾಧಿಸಿರುವ ಪಟ್ಟಿಯಲ್ಲಿ ನಮ್ಮ ಕೇರಳ ರಾಜ್ಯ ಮತ್ತು ಶ್ರೀಲಂಕಾದೇಶ ಮಾದರಿಯಾಗಿವೆ.

ಶ್ರೀಲಂಕಾ ಮಲೇರಿಯಾ ಮುಕ್ತದೇಶ ಎಂದು ಘೋಷಣೆಯಾಗಿದೆ. ನಮ್ಮಲ್ಲಿ ಮಲೇರಿಯಾ, ಡೆಂಗಿ, ಚಿಕನ್ ಗುನ್ಯಾ ಸದಾ ಸುದ್ದಿಯಲ್ಲಿರುವ ಕಾಯಿಲೆಗಳಾಗಿವೆ. ನಾವೀಗ ನಿಜವಾಗಿ ಸಾರಬೇಕಾಗಿರುವ ಯುದ್ಧ ಇವುಗಳ ವಿರುದ್ಧವೇ ಹೌದು. ಇದಕ್ಕೆ ಮುಖ್ಯವಾಗಿ ಬೇಕಿರುವುದು ಹಣವಷ್ಟೆ ಅಲ್ಲ; ಅದರ ಜೊತೆಗೆ ಅಥವಾ ಅದಕ್ಕೂ ಮುಖ್ಯವಾಗಿ ಸರಿಯಾದ ಯೋಜನೆ ಮತ್ತು ಕಾರ್ಯಚಟುವಟಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು.

ಕೇವಲ ರೊಬೊಟಿಕ್ ಅಪರೇಶನ್‌ನತ್ತ ಮುಖ ಮಾಡದೇ ಪ್ರಾಥಮಿಕ ಆರೋಗ್ಯ, ಆರೋಗ್ಯಕ್ಕೆ ಪೂರಕ ವಾತಾವರಣ ಮತ್ತು ಕೈಗೆಟುಕುವ ಸರ್ಕಾರಿ ಆರೋಗ್ಯ ಕೇಂದ್ರ – ಇಂಥ ಮೂಲಭೂತ ಅಂಶಗಳಿಗೆ ನಮ್ಮ ಸರ್ಕಾರಗಳು ಹೆಚ್ಚಿನ ಆದ್ಯತೆಯನ್ನು ಕೊಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT