ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣರೇಖೆ ಮೀರುವ ಪ್ರಯತ್ನ ‘ವೇರ್‌ ದಿ ಶ್ಯಾಡೊ ಎಂಡ್ಸ್‌’

ರಂಗಭೂಮಿ
Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಕನ್ನಡ ಮತ್ತು ಇಂಗ್ಲಿಷ್‌ ರಂಗಭೂಮಿಯಲ್ಲಿ ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ತಂಡ ಕ್ರಿಯೇಟಿವ್‌ ಥಿಯೇಟರ್‌. ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್‌ ಮುಂದಾಳುತ್ವದ ತಂಡವಿದು. ತಂಡದ ಹೊಸ ಪ್ರಯೋಗ ರಾಮಾಯಣದ ಎಳೆ ಇರುವ ‘ವೇರ್‌ ದಿ ಶ್ಯಾಡೋ ಎಂಡ್ಸ್‌’. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಸಂಭಾಷಣೆಯನ್ನು ಹೊಂದಿರುವ ನಾಟಕ 2016ರ ಜೂನ್‌ನಲ್ಲಿ ರಂಗಶಂಕರದಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಇತ್ತೀಚೆಗೆ ಸರ್ಬಿಯಾದಲ್ಲಿ ಇತ್ತೀಚೆಗೆ ನಡೆದ ‘ಇನ್‌ಫಾಂಟ್‌’ ಅಂತರರಾಷ್ಟ್ರೀಯ ಪರ್ಯಾಯ ಮತ್ತು ಆಧುನಿಕ ರಂಗೋತ್ಸವ’ದಲ್ಲಿ ಐದು ಪ್ರದರ್ಶನ ಕಂಡಿದೆ.

‘ಹೆಣ್ಣಿನ ಸಮಸ್ಯೆಗಳು ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ ಒಂದೇ ತೆರನಾಗಿದೆ. ಹಿಂದೂಗಳಲ್ಲಿ ಮದುವೆಯಾದ ಹೆಣ್ಣನ್ನು ಬೇರೆ ಗಂಡಸು ನೋಡಬಾರದು ಎಂದು ಮಾಂಗಲ್ಯ ಕಟ್ಟಲಾಗುತ್ತದೆ. ಕ್ರೈಸ್ತರಲ್ಲಿ ‘ಚಾಸ್ಟಿಟಿ ಬೆಲ್ಟ್‌’ ಕಟ್ಟುವ ಪದ್ಧತಿಯಿದೆ. ಹೀಗೆ ಈಗಲೂ ಲಕ್ಷ್ಮಣ ರೇಖೆಯ ಹೆಸರಿನಲ್ಲಿ ಹೆಣ್ಣನ್ನು ಕಟ್ಟಿ ಹಾಕಲಾಗುತ್ತಿದೆ. ಗಂಡನನ್ನು ಬಿಟ್ಟು ಬೇರೆ ಗಂಡಸನ್ನು ಆಸೆ ಪಡದೇ ಇರುವುದು ಮೌಲ್ಯ ಎಂದುಕೊಳ್ಳಲಾಗಿದೆ.

ಮದುವೆಯಿಂದ ಆಚೆಗೆ ಹೆಣ್ಣು ಗೆಳೆತನ ಬೆಳೆಸುವುದು ಆಕೆಯ ಆಯ್ಕೆಯಾಗಬೇಕು. ಆದರೆ ಈಗಲೂ ಹೆಣ್ಣಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇದೆಯೇ? ಮದುವೆಯ ವ್ಯವಸ್ಥೆ ಹೆಣ್ಣಿಗೆ ಯಾವುದೇ ಸಂತೋಷ ನೀಡದೇ ಇದ್ದರೂ ಅದರಿಂದ ಹೊರಬರುವುದು ಕಷ್ಟವಿದೆ.

ರಾಜನ ಮನೆಯಲ್ಲಿ ಬೆಳೆದವಳಾದ ಕಾರಣ ಸೀತೆಗೆ ಕಟ್ಟುಪಾಡುಗಳನ್ನು ಮೀರುವುದು ಸಾಧ್ಯವಾಗಿಲ್ಲ. ಆದರೆ ಈ ನಾಟಕದಲ್ಲಿ ಸಾಮಾನ್ಯ ಹೆಣ್ಣು ಲಕ್ಷ್ಮಣ ರೇಖೆಯನ್ನು ಮೀರಿ ತನಗೆ ಬೇಕಿರುವುದನ್ನು ಪಡೆಯುತ್ತಾಳೆ. ಹೆಣ್ಣಿನ ಲೈಂಗಿಕತೆಯ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಪ್ರಶ್ನಿಸುವ ರೀತಿಯಲ್ಲಿ ನಾಟಕ ಯಶಸ್ವಿಯಾಗಿದೆ’ ಎನ್ನುತ್ತಾರೆ ಲಕ್ಷ್ಮೀ ಚಂದ್ರಶೇಖರ್‌.

ಕತೆಯ ಹೂರಣ: ನಾಟಕದಲ್ಲಿ ಎರಡು ಕತೆಗಳು ಒಟ್ಟಾಗಿ ಸಾಗುತ್ತವೆ. ಒಂದು ಕತೆ ರಾಮಾಯಣದ ಸೀತೆಯದು. ಮತ್ತೊಂದು, ನಾಟಕ ಕಂಪೆನಿಯಲ್ಲಿ ಸೀತೆಯ ಪಾತ್ರ ಮಾಡುವ ನಟಿ ಭೂಮಿಯದು. ಸೀತೆಯ ಪಾತ್ರದಲ್ಲಿ ಅಭಿನಯಿಸುವ ಭೂಮಿಯ ಬದುಕಿನಲ್ಲಿ ನಡೆಯುವ ಘಟನೆಗಳು ಪೂರ್ವಾಭ್ಯಾಸದ ಭೂಮಿಕೆಯಲ್ಲಿ ಸಾಗುತ್ತದೆ.

ಪುರಾಣದಲ್ಲಿ ಚಿತ್ರಿತವಾಗಿರುವ ಸ್ತ್ರೀ ಮತ್ತು ಈ ಕಾಲದ ಸ್ತ್ರೀಯ ತೊಳಲಾಟಗಳು ಒಂದೇ ಆಗಿವೆ. ಆದರೆ, ಲಕ್ಷ್ಮಣ ರೇಖೆಯನ್ನು ಮೀರುವ ಹೆಣ್ಣಿನ ರೂಪಕವಾಗಿ ಭೂಮಿ ಕಾಣಿಸಿಕೊಳ್ಳುತ್ತಾಳೆ. ಇಲ್ಲಿ ಭೂಮಿಯ  ಜೀವನಕ್ಕೂ, ಸೀತೆಯ ಜೀವನಕ್ಕೂ ಅನೇಕ ಸಾಮ್ಯತೆಗಳಿವೆ. ಇಬ್ಬರೂ ದತ್ತು ಮಕ್ಕಳಾಗಿ ಬೆಳೆದವರು. ಸಾಕು ತಂದೆ ತಾಯಿಗಳ ಪ್ರೀತಿಗೆ ಪಾತ್ರರಾದವರು. ಇಬ್ಬರೂ ತಮ್ಮ ತಂದೆಯಂದಿರು ಆಯ್ಕೆ ಮಾಡಿದ ಹುಡುಗರನ್ನು ಮದುವೆಯಾದವರು. ಇತ್ತ ರಾಮ ರಾಜ್ಯಭಾರದಲ್ಲಿ ತಲ್ಲೀನನಾಗಿರುತ್ತಾನೆ.

ಭೂಮಿಯ ಪತಿ ರಾಘು ಪತ್ನಿಯ ಬೇಕುಬೇಡಗಳ ಕಡೆಗೆ ಗಮನವನ್ನೇ ನೀಡದೇ, ತನ್ನದೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ. ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುತ್ತಾನೆ. ಭೂಮಿಗೆ ಸರ್ಬಿಯಾದ ನಟ ಕ್ರಿಸ್ತಿಯನ್‌ ನನ್ನು ಭೇಟಿಯಾಗುತ್ತಾಳೆ. ಆತ ರಾವಣನ ಪಾತ್ರ ಮಾಡುತ್ತಾನೆ. ವಿದೇಶಿ ಕಲಾವಿದ ಕ್ರಿಸ್ತಿಯನ್‌ ನಾಟಕದ ಅಭ್ಯಾಸದ ಸಂದರ್ಭದಲ್ಲಿ ಪುರಾಣದ ಕತೆಗೆ ಭಿನ್ನ ದೃಷ್ಟಿಕೋನವನ್ನು ತಂದುಕೊಡುತ್ತಾನೆ.

ನಾಟಕದ ಅಭ್ಯಾಸದ ಸಂದರ್ಭದಲ್ಲಿ ಭೂಮಿ ಮತ್ತು ಕ್ರಿಸ್ತಿಯನ್‌ ಗೆಳೆಯರಾಗುತ್ತಾರೆ. ವೈವಾಹಿಕ ಬದುಕಿನಾಚೆಗೂ ಬೇರೆ ಪರ್ಯಾಯ ಇದೆ ಎಂಬುದನ್ನು ಆತ ಮನವರಿಕೆ ಮಾಡಿಕೊಡುತ್ತಾನೆ. ವೇದಿಕೆಯ ಮೇಲೆ ರಾವಣನಾಗಿ ಖಳನ ಪಾತ್ರದಲ್ಲಿರುವ ಗೆಳೆಯ ನಿಜ ಜೀವನದಲ್ಲಿ ಸೂಕ್ಷ್ಮ ಮನಸಿನ ಸಂಗಾತಿಯಾಗಿರುತ್ತಾನೆ.

ಸೀತೆ ಜೀವನದುದ್ದಕ್ಕೂ ಪತಿವೃತೆಯಾಗಿಯೇ ಇರುತ್ತಾಳೆ. ಪತಿ ತನ್ನ ಕರ್ತವ್ಯವನ್ನು ಮಾಡದೇ ಇದ್ದರೂ ಆತನಿಗೆ ನಿಷ್ಠಳಾಗಿಯೇ ಇರುತ್ತಾಳೆ. ಆದರೆ, ಭೂಮಿ ಬದುಕಿನ ನಿರ್ಣಾಯಕ ಘಟ್ಟಕ್ಕೆ ತಲುಪುತ್ತಾಳೆ, ಗಂಡನಿಂದ ವಿಚ್ಛೇದನೆ ಪಡೆಯುತ್ತಾಳೆ. ಇದರಿಂದ ಮಾನಸಿಕವಾಗಿ ಗೊಂದಲಕ್ಕೊಳಗಾಗುತ್ತಾಳೆ. ಒಮ್ಮೆ ಸೀತೆಯ ಪಾತ್ರ ನಿರ್ವಹಿಸುವಾಗ ತಾನು ಹೇಳಬೇಕಿರುವ ಮಾತುಗಳನ್ನು ಮರೆತು ತನ್ನ ನಿಜಜೀವನದ ಬಗ್ಗೆ ಮಾತನಾಡುತ್ತಾಳೆ.

ನಾಟಕದಲ್ಲಿ ಸರ್ಬಿಯಾದ ಜಾನಪದ ಕತೆ ‘ಬಸ್ಕೆಲಿಕ್‌’ ಅನ್ನು ಕ್ರಿಸ್ತಿಯನ್‌ ಪರಿಚಯಿಸುತ್ತಾನೆ. ಬಸ್ಕೆಲಿನ್‌ ಮತ್ತು ರಾಮಾಯಣ ನಡುವೆ ಸಾಮ್ಯತೆ ಇದೆ. ಭಾರತೀಯ ಸಂಸ್ಕೃತಿಗೂ ಸರ್ಬಿಯಾದ ಸಂಸ್ಕೃತಿಗೂ ಹತ್ತಿರದ ನಂಟಿದೆ’ ಎಂದು ನಾಟಕದ ಮುಖ್ಯಪಾತ್ರಧಾರಿ ಲಕ್ಷ್ಮೀ ಚಂದ್ರಶೇಖರ್‌ ಹೇಳುತ್ತಾರೆ.

‘ನಮ್ಮ ನಾಟಕದಲ್ಲಿ ಕೇವಲ ನಾಲ್ವರು ಪಾತ್ರಧಾರಿಗಳಿದ್ದಾರೆ. ನಾಲ್ಕು ಕೋಲುಗಳು ಮತ್ತು ನಾಲ್ಕೈದು ದುಪಟ್ಟಾಗಳು ಇಷ್ಟೇ ರಂಗ ಪರಿಕರಗಳು. ನಾಲ್ಕು ಕೋಲುಗಳು ರಥವೂ ಆಗಿದೆ, ಆಯುಧವೂ ಆಗಿದೆ. ಇಷ್ಟರಲ್ಲೇ ಜಗತ್ತನ್ನೇ ತೋರಿಸಿದ್ದೇವೆ. ಮೊದಲ ಪ್ರದರ್ಶನದಿಂದ 12ನೇ ಪ್ರದರ್ಶನದವರೆಗೂ ಕತೆ ತುಂಬಾ ಬೆಳೆದಿದೆ. ಮುಂದಿನ ಪ್ರದರ್ಶನಗಳಲ್ಲಿ ಇನ್ನಷ್ಟು ಬದಲಾವಣೆಗಳಾಗಲಿವೆ. ಹಾಡುಗಳೂ ಬದಲಾಗಲಿವೆ’ ಎಂದು ನಾಟಕದ ನಿರ್ದೇಶಕಿ ವೀಣಾ ಬಸವರಾಜಯ್ಯ ಹೇಳುತ್ತಾರೆ.

ಸರ್ಬಿಯಾದ ನಟ ಕ್ರಿಸ್ತಿಯನ್‌ ಸದ್ಯ ಸರ್ಬಿಯಾದಲ್ಲಿಯೇ ಇದ್ದಾರೆ. ಅವರು ಬಂದ ನಂತರ ಸೆಪ್ಟೆಂಬರ್‌ನಲ್ಲಿ ಈ ನಾಟಕ ಮತ್ತೆ ಪ್ರದರ್ಶನ ಕಾಣಲಿದೆ.

ರಚನೆ: ಶ್ರೀಕಾಂತ, ನಿರ್ದೇಶನ: ವೀಣಾ ಬಸವರಾಜಯ್ಯ

ಸಂಗೀತ: ಮಹೇಶ್‌ ಸ್ವಾಮಿ, ತೇಜಸ್‌ ಶಂಕರ್‌

ಕಲಾವಿದರು: ಲಕ್ಷ್ಮೀ ಚಂದ್ರಶೇಖರ್‌, ವಿನಯ್‌ಚಂದ್ರ, ಪ್ರೀತಿ ಭಾರದ್ವಾಜ್‌, ಕ್ರಿಸ್ತಿಯನ್‌ ಅಲ್‌ ದ್ರೊಬಿ

*


–ಲಕ್ಷ್ಮೀ ಚಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT