ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವವೇ...ಉತ್ಪ್ರೇಕ್ಷೆಯೇ...?

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಐ.ಟಿ ವಲಯದ ಬಗ್ಗೆ ಬಹು ಚರ್ಚಿತವಾಗುತ್ತಿರುವ ವಿಷಯವೆಂದರೆ ‘ಉದ್ಯೋಗ ನಷ್ಟದ ಭೀತಿ’. ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್  ಅವರು  ಅಂಕಿಅಂಶಗಳನ್ನು ಆಧರಿಸಿ ಹೇಳುತ್ತಿರುವುದೆಂದರೆ ಐ.ಟಿ ವಲಯದಲ್ಲಿ ನಿವ್ವಳ ಉದ್ಯೋಗ ಸೃಷ್ಟಿಯಾಗುತ್ತಲೇ ಇದೆ. ಅಷ್ಟೇ ಅಲ್ಲ, 2025ರ ವರೆಗೆ 25-30 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ ನಾಸ್ಕಾಂ ಒಕ್ಕಣೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.  ಆದರೆ ಪ್ರತಿ ದಿನದ ವೃತ್ತ ಪತ್ರಿಕೆಗಳನ್ನು ನೋಡಿದರೆ ಒಂದಲ್ಲಾ ಒಂದು ಕಂಪೆನಿಯಲ್ಲಿನ ಉದ್ಯೋಗ ಕಡಿತದ ವಿವರಣೆಯೊಂದಿಗೆ, ಇದೊಂದು ಭೀತಿಯೇ ಅಥವಾ ಉತ್ಪ್ರೇಕ್ಷೆಯೇ ಎಂಬ ತಲೆಬರಹ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ.

ಅಂಕಿ ಅಂಶಗಳನ್ನಾಧರಿಸಿ ಹೇಗೂ ತಿರುಚಬಹುದಾದ ಇಂತಹ ವಿಷಯಗಳ  ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ. ಐ.ಟಿ ವಲಯದಲ್ಲಿ ಉದ್ಯೋಗ ನಷ್ಟದಂತಹ ಗಂಭೀರ ಸಂಗತಿಯನ್ನು ಉದ್ದಿಮೆಯ ಮಟ್ಟದಲ್ಲಿ, ಪ್ರತಿಯೊಂದು ಕಂಪೆನಿಯ ಮಟ್ಟದಲ್ಲಿ, ಪ್ರಾದೇಶಿಕ ವಿತರಣೆಯ ವಿವರಗಳೊಂದಿಗೆ ಹಾಗೂ ಉದ್ಯೋಗದ ವರ್ಗಗಳ ಮಟ್ಟದಲ್ಲಿ ವಿಶ್ಲೇಷಿಸಿ ಅರ್ಥೈಸಿಕೊಳ್ಳಬೇಕೇ  ವಿನಾ ಸಾರಾಸಗಟಾಗಿ ಯಾವುದೇ ತೀರ್ಮಾನಕ್ಕೆ ಬರುವುದು ತರವಲ್ಲ.
ಉದ್ದಿಮೆಯ ಮಟ್ಟದಲ್ಲಿ ನಿವ್ವಳ ಉದ್ಯೋಗದ ನಷ್ಟವಾಗಿದೆಯೇ ಎಂದು ಕೇಳಿದರೆ ಸ್ಥಿರವಾದ ‘ಇಲ್ಲ’ ಎಂಬ ಉತ್ತರವೂ, ನಿವ್ವಳ ಹೊಸ ಉದ್ಯೋಗ  ಸೃಷ್ಟಿಯ ದರವು ಕುಸಿಯುತ್ತಿರುವುದು ನಿಜವಲ್ಲವೇ ಎಂದು ನೀವು ಮತ್ತಷ್ಟು ಕೆದಕಿ ಕೇಳಿದರೆ ಸೌಮ್ಯವಾದ ‘ಹೌದು’ ಎಂಬ ಉತ್ತರವೂ ನಿಮಗೆ ದೊರಕುತ್ತದೆ.  ಒಂದು ಪರಿಸ್ಥಿತಿಯ ಕಠೋರತೆಯನ್ನು ಎತ್ತಿ ತೋರಿಸುವ ಕೋಪದಲ್ಲಿ ಇನ್ನೊಂದನ್ನು ಮರೆಮಾಚಿ ಸಾಮಾನ್ಯ ಜನರಲ್ಲಿ ಗುಲ್ಲೆಬ್ಬಿಸುವ ವಿಧಾನ ಇದೊಂದು ವಿಚಾರಕ್ಕೇ ಸೀಮಿತವಾಗಿಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವೇ ಸರಿ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಭಾರತೀಯ ಐ.ಟಿ ಕ್ಷೇತ್ರವು ಸುಮಾರು 40 ಲಕ್ಷ ಜನರನ್ನು ನೇರವಾಗಿ ಮತ್ತು ಸುಮಾರು 1.3 ಕೋಟಿ  ಜನರನ್ನು ಪರೋಕ್ಷವಾಗಿ ಉದ್ಯೋಗಿಗಳನ್ನಾಗಿ ಹೊಂದಿದೆ. ಉದ್ದಿಮೆಯ ಮಟ್ಟದಲ್ಲಿ 40 ಲಕ್ಷದ ಸಂಖ್ಯೆ ಮುಂದಿನ ಮೂರು ವರ್ಷಗಳಲ್ಲಿ 30 ಲಕ್ಷಕ್ಕೆ ಕುಸಿದರೆ, ಅದನ್ನು 25% ನಷ್ಟು  ಉದ್ಯೋಗ ನಷ್ಟ ಎಂದು ಸ್ಪಷ್ಟವಾಗಿ ಅರ್ಥೈಸಬಹುದು. ಹಾಗಾಗುವ ಸಾಧ್ಯತೆ ಸದ್ಯಕ್ಕಂತೂ ಸತ್ಯಕ್ಕೆ ದೂರ.  ಕಡಿಮೆ ದರದಲ್ಲಿಯಾದರೂ ಪ್ರತಿವರ್ಷವೂ ನಿವ್ವಳ ಹೊಸ ಉದ್ಯೋಗ ಸೇರ್ಪಡೆ ಕಾರ್ಯ ನಡೆಯುತ್ತಿದೆ ಎಂಬುದು ವಾಸ್ತವ. ನಾಸ್ಕಾಂ  ಸಂಸ್ಥೆಯ ಮಾಹಿತಿ ಪ್ರಕಾರ, 2015 ರ ಹಣಕಾಸು ವರ್ಷದಲ್ಲಿ, ಐಟಿ ವಲಯವು 2.17 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಡಿತ್ತು. ಇದು 2016ರಲ್ಲಿ 2.05 ಲಕ್ಷಕ್ಕೆ ಇಳಿಯಿತು. 2017ರಲ್ಲಿ ಇದು  1.73 ಲಕ್ಷಕ್ಕೆ ಕುಸಿಯಿತು ಮತ್ತು 2018ರಲ್ಲಿ ನಿವ್ವಳ ನೇಮಕಾತಿ ಸುಮಾರು 1.50 ಲಕ್ಷ ಮಾತ್ರ ಎಂದು ನಾಸ್ಕಾಂ ಸಂಸ್ಥೆಯು ನಂಬುತ್ತದೆ.
ನಿವ್ವಳ ನೇಮಕಾತಿ ಒಂದು ಲಕ್ಷಕ್ಕಿಂತ ಹೆಚ್ಚಿಗೆ ಇರುವವರೆಗೆ, ಐ.ಟಿ ಕ್ಷೇತ್ರದಲ್ಲಿ ಯಾವುದೇ ನಿವ್ವಳ ಉದ್ಯೋಗದ ನಷ್ಟವಿಲ್ಲ ಎಂದು ಅಂಕಿಅಂಶಗಳ ವಿಶ್ಲೇಷಣೆ ಸಾಬೀತುಪಡಿಸುತ್ತಲೇ ಸಾಗುತ್ತದೆ. ಆದರೆ ಯಾವುದೇ ಕಾರಣದಿಂದಾದರೂ ತನ್ನ ಕೆಲಸ ಕಳೆದುಕೊಂಡ ವ್ಯಕ್ತಿಗೆ ಮತ್ತು ಅವರ ಕುಟುಂಬಕ್ಕೆ ಅದು ನೂರಕ್ಕೆ ನೂರರಷ್ಟು ನಿವ್ವಳ ನಷ್ಟ ಎಂಬುದರಲ್ಲಿ  ಎರಡು ಮಾತಿಲ್ಲ. ಅದೇ ವೇಳೆಗೆ ಅಗತ್ಯವಿರುವ ವೃತ್ತಿ ಕೌಶಲಕ್ಕೆ ತರಬೇತಿ ಹೊಂದಿದ್ದರೆ ಅಥವಾ ಮರು-ಪರಿಣತಿಯನ್ನು ಪಡೆದು ಕೌಶಲವನ್ನು ವೃದ್ಧಿಸಿಕೊಂಡಿದ್ದರೆ ಅಂತಹ ವ್ಯಕ್ತಿಗೆ ಇನ್ನೂ ಹೆಚ್ಚಿನ ಅವಕಾಶಗಳು ಮುಂದೆಯೂ ದೊರೆಯುತ್ತಲೇ ಇರುತ್ತವೆ.  ಅಂಕಿ ಅಂಶಗಳನ್ನು ಮೀರಿದ ಕೆಲವು ಒಳನೋಟಗಳನ್ನು ಮನಗಂಡರೆ ಮಾತ್ರ ಈ ವಿಷಯದ ಸತ್ಯಾಸತ್ಯತೆಯ ಅರಿವಾಗುವುದು ಸಾಧ್ಯ.

ಹಳೆಯ ಮಾದರಿಯ ಉದ್ಯೋಗಗಳ ನಷ್ಟ ಮತ್ತು  ಹೊಸ ಹೊಸ ಉದ್ಯೋಗಗಳ ಸೃಷ್ಟಿ ಅನೂಚಾನವಾಗಿ ನಡೆದು ಬಂದಿರುವ ಒಂದು ಪ್ರಕ್ರಿಯೆ. ತಂತ್ರಜ್ಞಾನದ ಪ್ರಗತಿ ಮತ್ತು ವ್ಯವಹಾರ ಮಾದರಿಯಲ್ಲಿನ ಬದಲಾವಣೆಗಳು ಯಾವಾಗಲೂ ಅಸಮರ್ಥ ಉದ್ಯೋಗಗಳನ್ನು ತೆಗೆದುಹಾಕಿ ಹೊಸ ದಕ್ಷತೆಯ ಉದ್ಯೋಗಗಳನ್ನು ಸೃಷ್ಟಿಸಿವೆ. ಇಂತಹ ಹೊಸ ಉದ್ಯೋಗಗಳಿಗೆ ನವೀನ ಮಾದರಿಯ ಕೌಶಲದ ಅವಶ್ಯಕತೆಯಿರುತ್ತದೆ.  ತಂತ್ರಜ್ಞಾನದ ಪ್ರವೇಶವಾದಾಗ ಪ್ರತೀ ಬಾರಿ ಮೊದಲಿರುವ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗಿದೆ, ಆದರೆ  ಮೌಲ್ಯವರ್ಧನೆ ಹೆಚ್ಚಿಗೆಯೇ ಆಗಿದೆ  ಎಂದು ಇತಿಹಾಸ ತೋರಿಸಿದೆ.
ಕೈಗಾರಿಕೀಕರಣ ಯುಗದಲ್ಲಿ ಮತ್ತು ನಂತರದ ಗಣಕೀಕರಣ ಯುಗದಲ್ಲಿ, ಹೊಸ ಕೌಶಲ  ಹಾಗೂ ಯಂತ್ರಗಳ ನೆರವಿನಿಂದ ಆಗಿದ್ದ ಈ ಬದಲಾವಣೆಯನ್ನು ನಾವೆಲ್ಲರೂ ಕಂಡಿದ್ದೇವೆ. ಇದೇ ಪ್ರಕ್ರಿಯೆ ಐ.ಟಿ ವಲಯದಲ್ಲಿ ಮುಂದುವರೆದಿದ್ದು ಇನ್ನೂ ಒಂದು ಹಂತ ಮೇಲಕ್ಕೇರಿದೆ ಎಂದರೆ ತಪ್ಪಾಗಲಾರದು. ಅದೆಂದರೆ  ಮಾಹಿತಿ ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡಿದ್ದ  ನುರಿತ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದು, ಅದು ಹೆಚ್ಚಿನ ಕೌಶಲವನ್ನು ಹೊಂದಿದ ಹೆಚ್ಚು ನುರಿತ ಉದ್ಯೋಗಿಗಳ ಪಾಲಾಗುತ್ತಿದೆ. ಅಥವಾ, ಹೆಚ್ಚು ವರ್ಷಗಳ ಅನುಭವದಿಂದಾಗಿ  ಅಧಿಕ ವೇತನ ಪಡೆಯುತ್ತಿರುವ ವ್ಯಕ್ತಿಯಲ್ಲಿರುವಷ್ಟೇ ಕೌಶಲವನ್ನು ಕಡಿಮೆ ಸಂಬಳ ನೀಡಬಹುದಾದ ಹೊಸಬರಿಂದ ಪಡೆಯಲು ಸಾಧ್ಯವಾಗುವುದಾದರೆ ಅಂತಹವರ ಪಾಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನೂ ಸೇರಿಸಿ  ಎಲ್ಲಾ 3 ಪ್ರಮುಖ ಸೇವಾ ಕ್ಷೇತ್ರಗಳಾದ ಐ.ಟಿ, ಟೆಲಿಕಾಂ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ವಿಷಯದಲ್ಲಿಯೂ ಈ ವಿದ್ಯಮಾನವನ್ನು ಕಾಣಬಹುದು. ವಿಪರ್ಯಾಸವೆಂದರೆ, ಪ್ರಮುಖ ಸೇವಾ ಕ್ಷೇತ್ರಗಳಲ್ಲಾಗುತ್ತಿರುವ ಇಂತಹ ಬಿಳಿ ಕಾಲರ್ ಉದ್ಯೋಗಗಳ ಕಡಿತವನ್ನು ಸರಿದೂಗಿಸುವ ಹೊಸ ಉದ್ಯೋಗಗಳು, ತಯಾರಿಕೆ ಅಥವಾ ವ್ಯಾಪಾರ ವಲಯಗಳಲ್ಲಿ ಸೃಷ್ಟಿಯಾಗಿಲ್ಲ.  ಭಾರತದ ಅರ್ಥಿಕ ಬೆಳವಣಿಗೆ ಏರುಗತಿಯಲ್ಲಿ ಸಾಗುತ್ತದೆ ಎಂಬ ಆಶಯವಿದ್ದರೂ ಉದ್ಯೋಗ ಸೃಷ್ಟಿಸದ ಬೆಳವಣಿಗೆಯಿಂದಾಗಿ (ಜಾಬ್‌ಲೆಸ್ ಗ್ರೋತ್) ಸಾಮಾಜಿಕ ವಲಯದಲ್ಲಿ ಆತಂಕ ಮೂಡಿರುವುದನ್ನು ಕಾಣಬಹುದಾಗಿದೆ.

ಮಾಹಿತಿ ತಂತ್ರಜ್ಞಾನದ ಹೊರಗುತ್ತಿಗೆ ಏರುಗತಿಯಲ್ಲಿದ್ದ ಕಳೆದೆರಡು ದಶಕಗಳಲ್ಲಿ ಹೊಸ ಉದ್ಯೋಗಗಳು ಭಾರತ, ಫಿಲಿಪ್ಪೀನ್ಸ್, ಐರ್ಲೆಂಡ್, ಮೆಕ್ಸಿಕೊ ಮೊದಲಾದ ದೇಶಗಳ ಪಾಲಾಗಿದ್ದವು. ಆಗಿನ ಸಂದರ್ಭದಲ್ಲಿ ಈ ದೇಶಗಳಲ್ಲಿನ  ಕಡಿಮೆ ವೆಚ್ಚದ ಸಮೃದ್ಧ ಮಾನವ ಸಂಪನ್ಮೂಲದ ಲಭ್ಯತೆ ಈ ಪ್ರಕ್ರಿಯೆಗೆ ನಾಂದಿ ಹಾಡಿತ್ತು. ಈಗ, ಉಪಯೋಗಕ್ಕೆ ತಕ್ಕಂತೆ ಪಾವತಿ ಮಾಡಬಹುದಾದ ಕ್ಲೌಡ್ ಆಧಾರಿತ ಸೇವೆಗಳು, ಕೃತಕ ಬುದ್ಧಿಮತ್ತೆಯನ್ನುಪಯೋಗಿಸಿಕೊಂಡು ಸೇವೆ ನೀಡುವ ಸಾಫ್ಟ್‌ವೇರ್ ರೋಬೊಗಳು ಉದ್ಯೋಗ ಕಡಿತ ಪ್ರಕ್ರಿಯೆಯ ಮುಂಚೂಣಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಂತ್ರಜ್ಞಾನ ಪ್ರಗತಿಯಿಂದ ಸಾಂಪ್ರದಾಯಿಕ ಐ.ಟಿ ಸೇವೆಗಳಲ್ಲಿನ ಪ್ರಸ್ತುತ ಉದ್ಯೋಗದ ನಷ್ಟ ಕಂಡುಬರುತ್ತಿದ್ದರೂ ಸುಧಾರಿತ ಕೌಶಲಗಳಲ್ಲಿ ಹೊಸ ಉದ್ಯೋಗ ಸೃಷ್ಟಿ  ಉಂಟಾಗುತ್ತಲೇ ಇದೆ ಎಂಬುದು. ಹೆಚ್ಚು ಪರಿಣಾಮಕಾರಿಯಾದ ಮಾರ್ಗವು ದೊರೆತಾಗ, ಅಷ್ಟು ಫಲಕಾರಿಯಲ್ಲದ ಹಳೆಯ ವಿಧಾನಗಳಿಗೆ ಹೊಡೆತ ಬೀಳುತ್ತದೆ ಎಂಬ ಸತ್ಯವನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಸಂಘಟನೆಯ ಮೂಲಕವೋ ವೈಯಕ್ತಿಕವಾಗಿಯೋ ಅಂತಹ ಪ್ರಕ್ರಿಯೆಗಳ ವಿರುದ್ಧ ಹೋರಾಡುವುದು ವ್ಯರ್ಥ ಪ್ರಯತ್ನ.

ಈಗಿನ ಬಿಕ್ಕಟ್ಟಿಗೆ ಪರಿಹಾರಗಳೇನು? ನಮಗೆಲ್ಲಾ ತಿಳಿದಿರುವಂತೆ ತಂತ್ರಜ್ಞಾನವೆಂಬುದೊಂದು ಒಮ್ಮುಖ ದಾರಿ. ಒಮ್ಮೆ ಅದನ್ನು ಅವಲಂಬಿಸಿದರೆ ಹಿಮ್ಮುಖ ಚಲನೆ ಅಸಾಧ್ಯದ ಮಾತು. ಜೀವನದ ಎಲ್ಲಾ ರಂಗಗಳಲ್ಲಿಯೂ ಶೀಘ್ರಗತಿಯಲ್ಲಿ ವ್ಯಾಪಿಸುತ್ತಿರುವ ತಂತ್ರಜ್ಞಾನ ಕ್ಷೇತ್ರಕ್ಕೆ ಭವಿಷ್ಯವಲ್ಲದೆ ಇನ್ನೇನು ಇರಲು ಸಾಧ್ಯ? ಮಾಹಿತಿ ತಂತ್ರಜ್ಞಾನ  ಕ್ಷೇತ್ರಕ್ಕೇ ಮಬ್ಬು ಹಿಡಿಯುತ್ತಿದೆ ಎಂದು ತುರ್ತಾಗಿ ತೀರ್ಮಾನಿಸದೆ ಈಗಿನ ಬೆಳವಣಿಗೆಗೆ ಅನುಗುಣವಾಗಿ ಸ್ಪಂದಿಸುವ ಜಾಣತನವನ್ನು ಪ್ರದರ್ಶಿಸುವುದೇ ಸರಿಯಾದ ಮಾರ್ಗ. ಈ ನಿಟ್ಟಿನಲ್ಲಿ ಪ್ರತಿಯೊಂದು ಕಂಪೆನಿಯೂ ಅವಶ್ಯವಿರುವ ಮರು ಪರಿಣತಿ ಕಾರ್ಯಾಗಾರಗಳನ್ನು ತುರ್ತಾಗಿ ಹಮ್ಮಿಕೊಳ್ಳಬೇಕು. ಕ್ಲೌಡ್ ಆಧಾರಿತ ಸೇವೆಗಳಿಗೆ ಮತ್ತು ಕೃತಕ ಬುದ್ಧಿಮತ್ತೆಯನ್ನುಪಯೋಗಿಸಿಕೊಂಡು ನಡೆಸಬಹುದಾದ ಆಟೋಮೇಶನ್‌ಗೆ ಸಂಬಂಧಿಸಿದ ಕೌಶಲವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುವರಿ ಶಿಕ್ಷಣವನ್ನು ಇಂತಹ ಕೌಶಲ ವೃದ್ಧಿಗಾಗಿ ಪ್ರಾರಂಭಿಸಬೇಕು. ತಕ್ಷಣಕ್ಕೆ ಹೊರ ದೇಶಗಳ ಕಂಪೆನಿಗಳೊಂದಿಗೆ ತಾಂತ್ರಿಕ ಒಪ್ಪಂದವನ್ನು ಮಾಡಿಕೊಂಡು ಪರಿಸ್ಥಿತಿಯನ್ನು ನಿಭಾಯಿಸುವ ವ್ಯವಸ್ಥೆಯ ದಾರಿಯನ್ನು ಹುಡುಕಿಕೊಳ್ಳುವುದಲ್ಲದೇ ಸಂಶೋಧನೆಗಳಿಗೆ ಒತ್ತು ನೀಡುವ ದೀರ್ಘಕಾಲಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ನಾಸ್ಕಾಂನಂತಹ ಸಂಸ್ಥೆಗಳು ಪ್ರಸ್ತುತದ ಅಂಕಿ ಅಂಶಗಳನ್ನು ನೀಡಿ ಉದ್ಯೋಗ ಕಡಿತದ ಭೀತಿಯೊಂದು ಉತ್ಪ್ರೇಕ್ಷೆ ಎಂದು ಸಾರುವುದರ ಜೊತೆ ಜೊತೆಗೇ ಮುಂದಿನ ದಶಕಗಳಲ್ಲಿ ತಂತ್ರಜ್ಞಾನ ಕ್ಷೇತ್ರದ ಮುಂದಾಳತ್ವವನ್ನು ಹಿಡಿದಿಡುವ ನೀತಿ ಸಂಹಿತೆಯನ್ನು ರೂಪಿಸಿ ಮಾರ್ಗದರ್ಶನ ನೀಡಬೇಕು.

ಪ್ರಗತಿಯು ಏರುಗತಿಯಲ್ಲಿರುವಾಗಲೇ ಮುಂಬರುವ ಸಮಸ್ಯೆಗಳನ್ನು ಪರಿಗಣಿಸಿ ಬದಲಾವಣೆಗಳನ್ನು ಮಾಡುವುದು ಜಾಣತನದ ಲಕ್ಷಣ. ಇದಕ್ಕೊಂದು ಸಣ್ಣ ಉದಾಹರಣೆಯನ್ನು ಇಲ್ಲಿ ಕೊಡಬಯಸುತ್ತೇನೆ. ಭಾರತದಲ್ಲಿ ಜಪಾನ್ ಮೂಲದ ಟೊಯೊಟಾ ಕಂಪೆನಿಯ ಕ್ವಾಲಿಸ್ ವಾಹನವು ಚೆನ್ನಾಗಿಯೇ ಮಾರಾಟವಾಗುತ್ತಿದ್ದ ಕಾಲದಲ್ಲಿಯೇ ಅದನ್ನು ಸ್ಥಗಿತಗೊಳಿಸಿ ‘ಇನ್ನೋವಾ’ ಎಂಬ ಹೊಸ ವಾಹನವನ್ನು ಪರಿಚಯಿಸಿತು. ಕ್ವಾಲಿಸ್ ವಾಹನವು ಕೇವಲ ಬಾಡಿಗೆ ವಾಹನದಂತೆ ಉಪಯೋಗಿಸಲು ಸೂಕ್ತ ಎಂಬ ಅಭಿಪ್ರಾಯವನ್ನು ಹತ್ತಿಕ್ಕಿ ಮೇಲ್ದರ್ಜೆಯವರ ಪ್ರತಿಷ್ಠೆಯ ವಾಹನವೆಂಬಂತೆ ಹೊಸ ಕಾರನ್ನು ರಸ್ತೆಗಿಳಿಸಿದ್ದುದು ಆ ಕಂಪೆನಿಯ ಚಾಕಚಕ್ಯತೆ ಸೂಚಿಸುತ್ತದೆ. ನಿವ್ವಳ ಉದ್ಯೋಗದ ಸೃಷ್ಟಿಯ ಗತಿ ನೆಲಕಚ್ಚುವ ಮೊದಲೇ ಆಟೊಮೇಶನ್‌ನಂತಹ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮೌಲ್ಯವರ್ಧಿತ ಸೇವೆ ನೀಡಲು ಭಾರತ ತಯಾರಾಗಿದೆ ಎಂದು ಜಗತ್ತಿಗೇ ಮನದಟ್ಟಾಗುವಂತೆ ಮಾಡಿದಾಗ ಮಾತ್ರ ಈ ಭೀತಿ ಹೋಗಲಾಡಿಸಲು ಸಾಧ್ಯ. ಅದಿಲ್ಲದೇ ಹೋದರೆ ಅಂಕಿ ಅಂಶಗಳಲ್ಲಿ ಮರೆಮಾಚಿ ಹೋಗುವ ದುಃಸ್ವಪ್ನ ಮತ್ತೆ ಮತ್ತೆ ಬಂದು ಕಾಡುತ್ತಲೇ ಇರುವುದರಲ್ಲಿ ಸಂಶಯವಿಲ್ಲ.

-ಚಂದ್ರಶೇಖರ್ ಕಾಕಾಲ್‌

ಇನ್ಫೊಸಿಸ್ ಹಾಗೂ ಎಲ್ & ಟಿ ಇನ್ಫೊಟೆಕ್ ಸಂಸ್ಥೆಗಳಲ್ಲಿ ಹಿರಿಯ ಅಧಿಕಾರಿಯಾಗಿದ್ದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT