ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಸ್ಯಾಪ್‌ ಅನುಷ್ಠಾನಕ್ಕೆ ಸಿದ್ಧತೆ

Last Updated 15 ಜುಲೈ 2017, 4:59 IST
ಅಕ್ಷರ ಗಾತ್ರ

ಕೋಲಾರ: ತೋಟಗಾರಿಕಾ ಇಲಾಖೆಯು ರೈತರಿಗೆ ಮಾರುಕಟ್ಟೆಯ ಆಗುಹೋಗುಗಳು, ಬೆಳೆ ವಿಧಾನ, ಕೀಟಬಾಧೆ ಹತೋಟಿಗೆ ಕೈಗೊಳ್ಳಬೇಕಾದ ಕ್ರಮ, ಹವಾಮಾನ ಸೇರಿದಂತೆ ಒಟ್ಟಾರೆ ಕೃಷಿ ನಿರ್ವಹಣೆ ಕುರಿತು ಬೆರಳ ತುದಿಯಲ್ಲೇ ಸಮಗ್ರ ಮಾಹಿತಿ ಒದಗಿಸುವ ಮೊಬೈಲ್‌ ಇ–ಸ್ಯಾಪ್‌ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ.

ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನೆಯಾಗಲಿದ್ದು, ಈ ಯೋಜನೆ ಆಗಸ್ಟ್‌ನಿಂದ ಜಾರಿಯಾಗಲಿದೆ. ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ನೊಂದಣಿ ಮಾಡಿಕೊಂಡಿರುವ ರೈತರಿಗೆ ಉಚಿತವಾಗಿ ಯೋಜನೆಯ ಪ್ರಯೋಜನ ಸಿಗಲಿದೆ.

ಜಿಲ್ಲೆಯಲ್ಲಿ ಕೃಷಿಯು ರೈತರ ಬೆನ್ನೆಲುಬಾಗಿದ್ದು, ಇಲ್ಲಿ ಬೆಳೆಯುವ ತರಕಾರಿ ಮತ್ತು ಹಣ್ಣುಗಳು ರಾಜ್ಯ, ರಾಷ್ಟ್ರದ ಗಡಿ ದಾಟಿ ವಿದೇಶಕ್ಕೂ ರಫ್ತಾಗುತ್ತವೆ. ಜಿಲ್ಲೆಯ ಒಟ್ಟಾರೆ ಭೂಪ್ರದೇಶದಲ್ಲಿ ಸುಮಾರು 1.10 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆಗಳಿವೆ. 1.30 ಲಕ್ಷ ರೈತರು ತರಕಾರಿ, ಹಣ್ಣು, ತೆಂಗು, ಅಡಿಕೆ, ಗೋಡಂಬಿಯಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಯಾವಾಗ ಬಿತ್ತನೆ ಮಾಡಬೇಕು, ಗೊಬ್ಬರ ಯಾವಾಗ ಹಾಕಬೇಕು, ಬೆಳೆಗೆ ಬರುವ ರೋಗಗಳು ಹಾಗೂ ಹತೋಟಿ ಕ್ರಮಗಳು, ಔಷಧೋಪಚಾರ, ಕೃಷಿ ಯೋಜನೆಗಳು, ಸರ್ಕಾರದಿಂದ ಸಿಗುವ ಸಹಾಯಧನ ಮತ್ತು ಸವಲತ್ತುಗಳು, ಬೇಸಾಯ ಕ್ರಮ, ಬೆಳೆ ವಿಮೆ, ಹವಾಮಾನ ವಿವರ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಆವಕ ಮತ್ತು ಬೆಲೆಗಳ ಮಾಹಿತಿಯು ರೈತರಿಗೆ ಅತ್ಯಗತ್ಯ.

ಈ ಎಲ್ಲಾ ಮಾಹಿತಿಯನ್ನು ರೈತರಿಗೆ ಕುಳಿತ ಕಡೆಯೇ ತಲುಪಿಸಿ ಉತ್ತಮ ಬೆಳೆ ಬೆಳೆದು ಹೆಚ್ಚಿನ ಇಳುವರಿ ಪಡೆಯುವಂತೆ ಮಾಡುವ ಉದ್ದೇಶದಿಂದ ಇಲಾಖೆಯು ಈ ಯೋಜನೆ ಕೈಗೆತ್ತಿಕೊಂಡಿದೆ. ಜಿಲ್ಲಾ ತೋಟಗಾರಿಕಾ ಕೇಂದ್ರದಲ್ಲಿ ಸ್ಥಾಪಿಸಿರುವ ಹಾರ್ಟಿ ಕ್ಲಿನಿಕ್‌ನಿಂದ ರೈತರ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಮೂಲಕ ಪ್ರತಿನಿತ್ಯ ಸಂದೇಶ ರವಾನೆಯಾಗಲಿದೆ. ಈ ಸಂದೇಶ ಕನ್ನಡ ಭಾಷೆಯಲ್ಲಿ ಇರುತ್ತದೆ.

ತಂತ್ರಾಂಶಕ್ಕೆ ಜೋಡಣೆ: ಸರ್ಕಾರದ ವಿವಿಧ ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿರುವ ರೈತರ ವೈಯಕ್ತಿಕ ವಿವರ, ಜಮೀನಿನ ವಿಸ್ತೀರ್ಣ, ಬೆಳೆ, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಯನ್ನು ಹಾರ್ಟಿ ಕ್ಲಿನಿಕ್‌ನಲ್ಲಿ ಇ–ಸ್ಯಾಪ್‌ ತಂತ್ರಾಂಶಕ್ಕೆ ಜೋಡಣೆ ಮಾಡಲಾಗುತ್ತದೆ. ನಂತರ ನಿಯಮಿತವಾಗಿ ರೈತರ ಮೊಬೈಲ್‌ಗಳಿಗೆ ಸಂದೇಶ ರವಾನೆಯಾಗಲಿದೆ. ಇದಕ್ಕೆ ರೈತರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಈ ಇಡೀ ಪ್ರಕ್ರಿಯೆಯ ನಿರ್ವಹಣೆ ಜವಾಬ್ದಾರಿಯನ್ನು ಇಲಾಖೆಯ ಜಂಟಿ ನಿರ್ದೇಶಕರಿಗೆ ವಹಿಸಲಾಗಿದೆ. ಯೋಜನೆಯ ವೆಚ್ಚಕ್ಕಾಗಿ ಸರ್ಕಾರ ಒಟ್ಟಾರೆ ರಾಜ್ಯಕ್ಕೆ ₹ 26.25 ಲಕ್ಷ ಮೀಸಲಿಟ್ಟಿದ್ದು, ಜಿಲ್ಲೆಗೆ ₹ 45 ಸಾವಿರ ನಿಗದಿಪಡಿಸಿದೆ. ಜತೆಗೆ ಜಂಟಿ ನಿರ್ದೇಶಕರಿಗೆ ಟ್ಯಾಬ್‌ ವಿತರಣೆ ಮಾಡಿದೆ.

* * 

ಬೆಳೆಗಾರರ ಮೊಬೈಲ್‌ ಸಂಖ್ಯೆಗಳನ್ನು ಇ–ಸ್ಯಾಪ್‌ ತಂತ್ರಾಂಶಕ್ಕೆ ಜೋಡಣೆ ಮಾಡಿದ್ದು, ಆಗಸ್ಟ್‌ನಿಂದ ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನಿಸಲಾಗುತ್ತದೆ
ಎಂ.ಎಸ್‌. ರಾಜು
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT