ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.8ಕ್ಕೆ ಜಿಲ್ಲಾ ಸೌಧ ಉದ್ಘಾಟನೆ: ಜಿಲ್ಲಾಧಿಕಾರಿ

Last Updated 15 ಜುಲೈ 2017, 5:03 IST
ಅಕ್ಷರ ಗಾತ್ರ

ಕೋಲಾರ: ‘ನಗರದ ಹೊರವಲಯದ ಟಮಕ ಬಳಿ ₹ 25 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಿಲ್ಲಾ ಸೌಧದ ಕಾಮಗಾರಿ ಜುಲೈ 30ಕ್ಕೆ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.8ರಂದು ಕಟ್ಟಡವನ್ನು ಲೋಕಾರ್ಪಣೆ ಮಾಡುತ್ತಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.

ಶುಕ್ರವಾರ ಜಿಲ್ಲಾ ಸೌಧದ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಟ್ಟಡಕ್ಕೆ ಬಣ್ಣ ಬಳಿಯುವ, ವಾಹನ ನಿಲುಗಡೆ ಪ್ರದೇಶ ಹಾಗೂ ಉಳಿಕೆ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲಾ ಮಟ್ಟದ 32 ಇಲಾಖೆಗಳ ಕಚೇರಿಗಳಿಗೆ ಜಿಲ್ಲಾ ಸೌಧದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ಈಗಾಗಲೇ ಸ್ವಂತ ಕಟ್ಟಡ ಹೊಂದಿರುವ ಕಚೇರಿಗಳನ್ನು ಹೊರತುಪಡಿಸಿ ಇತರೆ ಕಚೇರಿಗಳನ್ನು ಆದ್ಯತೆ ಮೇರೆಗೆ ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ. ಕೆಲ ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಪಾವತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಹಣ ಉಳಿತಾಯವಾಗಲಿದೆ’ ಎಂದರು.

ಬಸ್‌ ಸೇವೆ: ‘ಜಿಲ್ಲಾ ಸೌಧಕ್ಕೆ ಬರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಬಸ್‌ ಸೇವೆ ಕಲ್ಪಿಸಲಾಗುತ್ತದೆ. ನಗರದ ಬೆಳವಣಿಗೆ ದೃಷ್ಟಿಯಿಂದ ಜಿಲ್ಲಾ ಸೌಧ ಸೂಕ್ತ ಸ್ಥಳದಲ್ಲೇ ನಿರ್ಮಾಣವಾಗಿದ್ದು, ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ’ ಎಂದು ತಿಳಿಸಿದರು.

‘ಜಿಲ್ಲಾ ಸೌಧದ ಮುಂದೆ ರಾಷ್ಟ್ರೀಯ ಹೆದ್ದಾರಿ- 75 ಹಾದು ಹೋಗುವುದರಿಂದ ಸಾರ್ವಜನಿಕರಿಗೆ ರಸ್ತೆ ದಾಟುವುದು ಕಷ್ಟವಾಗುತ್ತದೆ. ಈ ಸಮಸ್ಯೆ ತಪ್ಪಿಸಲು ಸರ್ವಿಸ್‌ ರಸ್ತೆ ನಿರ್ಮಿಸಲಾಗುತ್ತದೆ. ಕಟ್ಟಡ ಉದ್ಘಾಟನೆಯಾದ ಬಳಿಕ ಆಗಸ್ಟ್‌ನಿಂದ ಜಿಲ್ಲಾ ಸೌಧದಲ್ಲೇ ಜಿಲ್ಲಾಡಳಿತದ ಕಾರ್ಯ ಚಟುವಟಿಕೆಗಳು ನಡೆಯಲಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT