ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ಜ್ವರ ನಿಯಂತ್ರಣ: ವಾರಕ್ಕೊಂದು ಸಭೆ ನಡೆಸಿ

Last Updated 15 ಜುಲೈ 2017, 5:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಡೆಂಗಿ ಜ್ವರ ನಿಯಂತ್ರಿಸಲು ತಹಶೀಲ್ದಾರ್ ನೇತೃತ್ವದಲ್ಲಿ ಪ್ರತಿ ತಾಲ್ಲೂಕಿನಲ್ಲಿ ವಾರಕ್ಕೊಂದು ಸಭೆ ನಡೆಸಬೇಕು. ನಿಯಂತ್ರಣ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು.
ಡೆಂಗಿ, ಚಿಕೂನ್ ಗುನ್ಯಾ ಜ್ವರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದುಕೊಂಡು ಪರಿಸ್ಥಿತಿಯನ್ನು ನಿಭಾಯಿಸಬೇಕು. ಅಧಿಕಾರಿಗಳು ಮನಸ್ಸು ಮಾಡಿದರೆ  ಇದನ್ನು ತಹಬದಿಗೆ ತರಲು ಕಷ್ಟವೇನಲ್ಲ ಎಂದು ಹೇಳಿದರು. ಡೆಂಗಿ ಜ್ವರ ಹೆಚ್ಚಿರುವುದರಿಂದ  ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ವಿರುದ್ಧ ಜನರ ಸಿಟ್ಟು ಹೆಚ್ಚಾಗಿದೆ. ಸೊಳ್ಳೆಗಳನ್ನು ನಿಯಂತ್ರಣ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡಬಾರದು. ನಗರ, ಪಟ್ಟಣಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಆರೋಗ್ಯ  ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ನಡುವೆ ಸಮನ್ವಯತೆ ಇದ್ದಂತೆ ಕಾಣುತ್ತಿಲ್ಲ. ಪರಿಸರ ಎಂಜಿನಿಯರ್‌ಗಳು ಕಚೇರಿ ಬಿಟ್ಟು ಹೊರಗೆ  ಹೋಗುತ್ತಿಲ್ಲ ಎಂದು ಹರಿಹಾಯ್ದರು. ನಗರದಲ್ಲಿ ಖಾಲಿ ನಿವೇಶನಗಳನ್ನು ಜೆಸಿಬಿ ಯಂತ್ರ ಬಳಸಿ ಸ್ವಚ್ಛಗೊಳಿಸಬೇಕು. ಅದರ ವೆಚ್ಚವನ್ನು ನಿವೇಶನಗಳ ಮಾಲೀಕರಿಂದ ವಸೂಲಿ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಅವರ ಕಂದಾಯಕ್ಕೆ ಈ ಖರ್ಚನ್ನು ಸೇರಿಸಬೇಕು. ಇದನ್ನು ಮಾಡಲು ಅಧಿಕಾರಿಗಳಿಗೆ ಏನು ಕಷ್ಟವಾಗಿದೆ ಎಂದು ಕೇಳಿದರು. ಆದರೆ ಇದಕ್ಕೆ ಅಧಿಕಾರಿಗಳಿಂದ ಉತ್ತರ ಬರಲಿಲ್ಲ.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ,‘ ಖಾಲಿ ನಿವೇಶಗಳನ್ನು  ಸ್ವಚ್ಛಗೊಳಿಸಿ ಅದರ ಖರ್ಚನ್ನು ವಸೂಲಿ ಮಾಡಬೇಕು. ಇದರಿಂದ ನಗರವೂ ಸ್ವಚ್ಛಗೊಳ್ಳಲಿದೆ. ಆದಾಯವೂ ಬರಲಿದೆ’ ಎಂದು ಹೇಳಿದರು. ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಅಂಕಿ–ಅಂಶ  ಏಕೆ ಸಂಗ್ರಹಿಸಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ‘ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲೂ ಮ್ಯಾಕ್‌ಎಲಿಸಾ ಪರೀಕ್ಷೆ ಮಾಡುವುದಿಲ್ಲ. ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ಮ್ಯಾಕ್‌ ಎಲಿಸಾ ಪರೀಕ್ಷೆಯಲ್ಲಿ ದೃಢಪಟ್ಟ ಪ್ರಕರಣಗಳನ್ನು ಮಾತ್ರ ಡೆಂಗಿ ಎಂದು ದೃಢಪಡಿಸಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡ ರೋಗಿಗಳ ಸಂಖ್ಯೆ ಮಾತ್ರ  ನಮ್ಮಲ್ಲಿ ಇದೆ. ಆ ಪ್ರಕಾರ ಈವರೆಗೆ  213 ಪ್ರಕರಣಗಳು ದೃಢಪಟ್ಟಿವೆ’ ಎಂದು ಹೇಳಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ಕಾರ್ಡ್ ಪರೀಕ್ಷೆ  ಮಾಡಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಡೆಂಗಿ ದೃಢಪಟ್ಟರೂ ಅದನ್ನು ಸರ್ಕಾರದ ಭಾಷೆಯಲ್ಲಿ ಡೆಂಗಿ ಎಂದು ಕರೆಯಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಅಂಕಿ–ಸಂಖ್ಯೆಗಿಂತ ವಾಸ್ತವದಲ್ಲಿ  ಪ್ರಕರಣಗಳು ಹೆಚ್ಚಿರಬಹುದು’ ಎಂದು ತಿಳಿಸಿದರು.

‘ಎಲ್ಲ ಜ್ವರ ಪೀಡಿತರಿಗೂ ಮ್ಯಾಕ್‌  ಎಲಿಸಾ ಪರೀಕ್ಷೆ ಮಾಡಿಸಬೇಕಾಗಿಲ್ಲ. ನೂರು ಜನರಿಗೆ ಜ್ವರ ಬಂದರೆ ಅವರಲ್ಲಿ ಐವರ ರಕ್ತ ಮಾದರಿ ಪರೀಕ್ಷಿಸಲಾಗುವುದು. ಇದರಲ್ಲಿ ಇಬ್ಬರಿಗೆ ಡೆಂಗಿ ಕಂಡುಬಂದರೆ ಆ ಊರಿನ ಎಲ್ಲ ಜ್ವರಪೀಡಿತರನ್ನು ಡೆಂಗಿ ಜ್ವರ ಪೀಡಿತರೆಂದು ಪರಿಗಣಿಸಬೇಕು. ಎಲ್ಲರಿಗೂ ಡೆಂಗಿ ಜ್ವರದ ಚಿಕಿತ್ಸೆ ನೀಡಬೇಕು’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ  ಪ್ಲೇಟ್‌ಲೆಟ್‌ (ಕಿರು ತಟ್ಟೆಗಳು) ಕೊರತೆ  ಇಲ್ಲ. ಮೂರು ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಲಭ್ಯ ಇದೆ.  ಈವರೆಗೂ 790 ಯೂನಿಟ್ ಪ್ಲೇಟ್‌ಲೆಟ್‌ ನೀಡಲಾಗಿದೆ ಎಂದು ತಿಳಿಸಿದರು. ‘ಒಂದು ಯೂನಿಟ್‌ ಪ್ಲೇಟ್‌ಲೆಟ್‌ಗೆ ಸರ್ಕಾರ ₹ 400 ನಿಗದಿಪಡಿಸಿದೆ. ಆದರೆ  ಖಾಸಗಿ ರಕ್ತ ಕೇಂದ್ರಗಳಲ್ಲಿ ಕೆಲವು ಪರೀಕ್ಷೆ ನಡೆಸುವುದಾಗಿ ಹೇಳಿ ₹ 1000 ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಹೇಳಿದರು.

ಬಾರದ ಶಾಸಕರು, ಸಂಸದರು
ಜಿಲ್ಲೆಯಲ್ಲಿ ಡೆಂಗಿ ಜ್ವರ ಉಲ್ಬಣದ ಕಾರಣ ಶಾಸಕರು, ಸಂಸದರೊಂದಿಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.  ಆದರೆ ರಫೀಕ್ ಅಹಮದ್‌ ಅವರನ್ನು ಬಿಟ್ಟು ಉಳಿದ ಕ್ಷೇತ್ರಗಳ ಶಾಸಕರು ಸಭೆಯ ಕಡೆ ಮುಖ ಹಾಕಲಿಲ್ಲ. ಮೂವರು ಸಂಸದರಲ್ಲಿ ಒಬ್ಬರೂ ಸುಳಿಯಲಿಲ್ಲ.

ಗಪ್ಪಿ ಮೀನು ಇಲ್ಲ
ಸೀಬಿ ನರಸಿಂಹಸ್ವಾಮಿ ದೇವಾಲಯದ ಕಲ್ಯಾಣಿಯಲ್ಲಿ ಗಪ್ಪಿ ಮೀನುಗಳಿವೆ. ಅಲ್ಲಿಂದ ಹಿಡಿದು ತಂದು ಜನರಿಗೆ ನೀಡಲಾಗುತ್ತಿತ್ತು. ಆದರೆ ಈಗ ದೇವಸ್ಥಾನದ ಅರ್ಚಕರು ಮೀನು ಹಿಡಿಯಲು ಬಿಡುತ್ತಿಲ್ಲ. ಸಚಿವರು ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ರಂಗಸ್ವಾಮಿ ಮನವಿ ಮಾಡಿದರು.

ಒಣ ದಿನ ಆಚರಿಸಬೇಕು
ಡೆಂಗಿ ಸೊಳ್ಳೆಗಳು ಮನೆಯ ನೀರು ಶೇಖರಣಾ ತೊಟ್ಟಿಗಳು, ಟ್ಯಾಂಕ್‌ಗಳು, ಬಿಂದಿಗೆಗಳಲ್ಲಿ ಹೆಚ್ಚು ಉತ್ಪತ್ತಿಯಾಗುತ್ತವೆ. ಹೀಗಾಗಿ ವಾರಕ್ಕೊಮ್ಮೆ ಒಣ ದಿನ ಆಚರಿಸಬೇಕು. ಇದೊಂದೇ ಪರಿಹಾರ. ಈ ಬಗ್ಗೆ ಸ್ಥಳೀಯಾಡಳಿತಗಳು  ಜನರ ಮನವೊಲಿಸಬೇಕು. ನೀತಿ ರೂಪಿಸಬೇಕು ಎಂದು ಡಾ.ರಂಗಸ್ವಾಮಿ ತಿಳಿಸಿದರು.
ಫಾಗಿಂಗ್ ಅನ್ನು ಹೊರಗಡೆ ಸಿಂಪಡಿಸಿದರೆ ಸಾಲದು, ಮನೆಯ ಒಳಗೂ ಸಿಂಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಗೆ 6ನೇ ಸ್ಥಾನ
ಡೆಂಗಿ ಜ್ವರದಲ್ಲಿ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ ಎಂದು  ಜಯಚಂದ್ರ ತಿಳಿಸಿದರು. ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಚಿತ್ರದುರ್ಗ, ಮೈಸೂರು ಜಿಲ್ಲೆಗಳಲ್ಲೂ ಡೆಂಗಿ ಹೆಚ್ಚಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಭೆಯಲ್ಲೂ ಪ್ರತಿಧ್ವನಿಸಿದ ಡೆಂಗಿ ಸಮಸ್ಯೆ
ತುಮಕೂರು: ಡೆಂಗಿ ಜ್ವರ ಹರಡಲು ಕಾರಣವಾಗುವ ಸೊಳ್ಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ. ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಂಗಸ್ವಾಮಿ ಹೇಳಿದರು.

ಪದೇ ಪದೇ ಮಳೆ ಬರುತ್ತಿರುವುದರಿಂದ ಮನೆಯ ಒಳಗಡೆ ಮತ್ತು ಹೊರಗಡೆ ಡೆಂಗಿ ಸೊಳ್ಳೆ ಉತ್ಪತ್ತಿಗೆ ಅನುಕೂಲಕರ ವಾತಾವರಣ ರೂಪಿಸಿದಂತಾಗಿದೆ. ಹೀಗಾಗಿ, ಬೇಗ ನಿಯಂತ್ರಣ ಕಷ್ಟವಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಮಾತನಾಡಿ, ಜ್ವರ ಬಂದಾಗ ಭಯ ಪಡಬಾರದು. ರಕ್ತದಲ್ಲಿ ಪ್ಲೇಟ್‌ಲೆಟ್‌(ಕಿರು ತಟ್ಟೆಗಳು) ಸಂಖ್ಯೆ ಕಡಿಮೆಯಾದ ತಕ್ಷಣ ಗಾಬರಿಯಾಗಬಾರದು ಎಂದು ಜಾಗೃತಿ ಮೂಡಿಸಬೇಕು ಎಂದರು.

‘ನಮ್ಮ ಉಪಕಾರ್ಯದರ್ಶಿಯವರೇ ತಮ್ಮ  ಪತ್ನಿಗೆ ಡೆಂಗಿ ಜ್ವರ ಬಂದು ಪ್ಲೇಟ್‌ಲೆಟ್‌ ಸಂಖ್ಯೆ  90 ಸಾವಿರಕ್ಕೆ ತಗ್ಗಿದೆ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 10 ಸಾವಿರದವರೆಗೂ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾದರೂ ಭಯಪಡಬೇಕಿಲ್ಲ ಎಂಬುದರ ಬಗ್ಗೆ ಜನಜಾಗೃತಿ  ಮೂಡಿಸಿ ಎಂದು ಸೂಚಿಸಿದರು.

ಹಾಸನದಲ್ಲಿ ಸಾಧ್ಯವಾಗಿದ್ದು ಇಲ್ಲಿ ಏಕಿಲ್ಲ?
ಹಾಸನ ಜಿಲ್ಲೆಯಲ್ಲಿ ಡೆಂಗಿ ಜ್ವರ  ನಿಯಂತ್ರಿಸುವಲ್ಲಿ ಆರೋಗ್ಯ  ಇಲಾಖೆ ಉತ್ತಮ ಕೆಲಸ ಮಾಡಿದೆ. ಜಿಲ್ಲೆಯ ಎಲ್ಲ ಮನೆಗಳಿಗೂ (ಶೇ ನೂರು) ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಆದರೆ ಇಲ್ಲಿ ಶೇ 20ರಷ್ಟು ಮನೆಗಳಿಗೆ ಭೇಟಿ ನೀಡಲಾಗಿದೆ. ಅಲ್ಲಿ ಸಾಧ್ಯವಾಗಿದ್ದು, ಇಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಎಲ್ಲ ಮನೆಗಳಿಗೂ ಭೇಟಿ ನೀಡಲು ಏನು ಕಷ್ಟ. ಶನಿವಾರ, ಭಾನುವಾರ ಮನೆ ಸಮೀಕ್ಷೆ ನಡೆಸಿದರೆ ಸಾಕೆ? ವಾರದ ಎಲ್ಲ ದಿನಗಳು ಸಮೀಕ್ಷೆ ಏಕೆ ನಡೆಸಿಲ್ಲ ಎಂದು ಕೇಳಿದರು. ಜ್ವರ ನಿಯಂತ್ರಣಕ್ಕೆ ಬೇಕಾದ ಕಾರ್ಯಯೋಜನೆಗಳ ಕ್ರಿಯಾ ಯೋಜನೆಯನ್ನು ಈವರೆಗೂ ರೂಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯ ಬಳಿಕ  ಜಿಲ್ಲಾಧಿಕಾರಿ ಕಚೇರಿಯಲ್ಲೆ ಕುಳಿತು ಕ್ರಿಯಾ ಯೋಜನೆ ಸಿದ್ಧಪಡಿಸಿ  ಆ ವರದಿಯನ್ನು ನೀಡಿಯೇ ತಮ್ಮ ತಾಲ್ಲೂಕುಗಳಿಗೆ ತೆರಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT