ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ಇದ್ದರೂ ತೀರದ ನಿವೇಶನದ ಗೊಂದಲ

Last Updated 15 ಜುಲೈ 2017, 5:23 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ನಮ್ಮ ಬಳಿ ನಿವೇಶನದ ಹಕ್ಕುಪತ್ರ ಇದೆ. ಆದರೆ ಜಾಗ ಯಾವುದು ಎಂಬ ಗೊಂದಲ ಬಗೆಹರಿದಿಲ್ಲ. ಹಕ್ಕು ಪತ್ರದಲ್ಲಿರುವ ಚಕ್ಕು ಬಂದಿ ಹಾಗೂ ಸರ್ವೆ ನಂಬರ್‌ಗಳಲ್ಲಿನ ಜಾಗವನ್ನು ಪ್ರಭಾವಿಗಳು ಅನುಭವಿಸುತ್ತಿದ್ದು. ನಿವೇಶನಗಳಿಗೆ ನಮ್ಮನ್ನು ಬಿಟ್ಟುಕೊಳ್ಳುತ್ತಿಲ್ಲ’ ಇದು ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಯೋಗಮಾಧವ ನಗರದ ನಿವಾಸಿಗಳ ಅಳಲು.

ಇದು ಒಬ್ಬಿಬ್ಬರ ಅಳಲಲ್ಲ. ಬರೋಬ್ಬರಿ 250 ಕುಟುಂಬಗಳ ಅಳಲು. ಈ ಗೊಂದಲ, ತಿಕ್ಕಾಟಕ್ಕೆ 24 ವರ್ಷಗಳ ಇತಿಹಾಸವೇ ಇದೆ. ಅಲೆಮಾರಿ, ಅರೆ ಅಲೆಮಾರಿ ಹಾಗೂ ತಳವರ್ಗಕ್ಕೆ ಸೇರಿದ ಕುಟುಂಬಗಳೇ ಇರುವ ನಮಗೆ ಎಲ್ಲಿ ಹೋದರೂ ನ್ಯಾಯ ದೊರಕುತ್ತಿಲ್ಲ. ಮುಂದೇನು ಎಂದು ದಿಕ್ಕು ತೋಚುತ್ತಿಲ್ಲ ಎಂದು ನಿವಾಸಿಗಳು ಗೋಳು ತೋಡಿಕೊಂಡರು.

‘ನಿವೇಶನ ನೀಡಿ ಎರಡೂವರೆ ದಶಕ ಕಳೆದಿದೆ. ನಮ್ಮ ಪಾಲಿನ ನಿವೇಶನ ಯಾವುದೆಂದು ನಮಗೆ ತಿಳಿಯುತ್ತಿಲ್ಲ. ಹಕ್ಕುಪತ್ರ ನೀಡಿರುವ ಜಾಗ ನಮ್ಮದು ಎಂದು ಹಿಡುವಳಿದಾರರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಹೇಗಾದರೂ ಮಾಡಿ ನಮ್ಮ ಸಮಸ್ಯೆ ಬಗೆಹರಿಸಿ ನಾವೊಂದು ನೆಮ್ಮದಿ ಸೂರು ಹೊಂದಲು ಅನುವು ಮಾಡಿಕೊಡಿ’ ಎಂದು ನಿವಾಸಿಗಳು ಗೋಗರೆಯುತ್ತಿದ್ದಾರೆ.

‘ಗ್ರಾಮ ಪಂಚಾಯಿತಿ ಅಧಿಕಾರಿಗಳು ನಮ್ಮ ಸಮಸ್ಯೆಗೆ ಮುಕ್ತಿ ಕೊಡಿಸಿ ಎಂದು ಜನ’ ಎಂದು ಯೋಗಮಾಧವನಗರದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮಸ್ಥ ಶ್ರೀನಿವಾಸ್ ಮಾತನಾಡಿ, ‘ಹಿಡುವಳಿದಾರರು ನಮಗೆ ತೊಂದರೆ ನೀಡುತ್ತಿದ್ದಾರೆ. 1993ರಲ್ಲೇ ಗ್ರಾಮ ಪಂಚಾಯಿತಿಯಿಂದ ಹಕ್ಕುಪತ್ರ ನೀಡಲಾಗಿದೆ. ನಮಗೆ ನಿಗದಿಯಾಗಿರುವ ನಿವೇಶನದಲ್ಲಿ ಮನೆ ಕಟ್ಟಲು ಮುಂದಾದರೆ ಹಿಡುವಳಿದಾರರು ನಿವೇಶನ ನಮ್ಮದು ಎಂದು ಕಟ್ಟಿರುವ ಕಟ್ಟಡ ಬೀಳಿಸಿರುವ ಉದಾಹರಣೆ ಇವೆ’ ಎಂದು ತಿಳಿಸಿದರು.

‘ನಿವೇಶನ ಮುಂಜೂರಾತಿ ಹಾಗೂ ಅಳತೆ ಬಗ್ಗೆ ಅಧಿಕಾರಿಗಳು ಸ್ವಷ್ಟವಾಗಿ ತಿಳಿಸಬೇಕು ಹಾಗೂ ಶೆಟ್ಟಿಕೆರೆ ಮುಖ್ಯ ರಸ್ತೆಯಿಂದ ಯೋಗಮಾಧವನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ. ರಸ್ತೆಯನ್ನು ವಿಸ್ತರಣೆಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಚಂದ್ರಶೇಖರ್, ಸಣ್ಣರಂಗಣ್ಣ, ರಾಜಯ್ಯ ಮನವಿ ಮಾಡಿದರು.

‘ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾವಿ ಶಾಸಕರಾಗಿದ್ದ 1993ರ ಅವಧಿಯಲ್ಲಿ ಯೋಗಮಾಧವನಗರ ಎಂಬ ಹೊಸ ಬಡಾವಣೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಇಲ್ಲಿನ ನಿವಾಸಿಗಳು ಹಕ್ಕುಪತ್ರ ಹಿಡಿದುಕೊಂಡು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿ ಕಚೇರಿಗೆ ಅಲೆಯುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಸಂಪತಯ್ಯ, ನಂಜುಂಡಪ್ಪ, ಶಿವಯ್ಯ ದೂರಿದರು.

* * 

ಗ್ರಾಮದ ವಿಸ್ತೀರ್ಣದ ಬಗ್ಗೆ ಪಂಚಾಯಿತಿಯಲ್ಲಿ ದಾಖಲೆಗಳಿಲ್ಲ. ಆದರೆ ಹಕ್ಕುಪತ್ರ ನೀಡಿರುವ ಬಗ್ಗೆ ದಾಖಲೆ ಇದೆ. ಇದು ಅನುಮಾನಾಸ್ಪದವಾಗಿದೆ
ಶಶಿಧರ್,
ಗ್ರಾ.ಪಂ.ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT