ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಒಪ್ಪಿಗೆ ಬಾಕಿ ಇದೆ

Last Updated 15 ಜುಲೈ 2017, 5:28 IST
ಅಕ್ಷರ ಗಾತ್ರ

ತುಮಕೂರು: ಶಿರಾ ತಾಲ್ಲೂಕಿನಲ್ಲಿ ಈಚೆಗೆ ಮಳೆ ಬಿರುಗಾಳಿಯಿಂದ ಹಾನಿಗೀಡಾದ ರೈತರಿಗೆ ವಿಶೇಷ ಪರಿಹಾರ ನೀಡಲು ಸಚಿವ ಸಂಪುಟದ ಒಪ್ಪಿಗೆ ಪಡೆಯುವುದು ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘2659 ತೆಂಗಿನ ಮರಗಳು, 12267 ಅಡಿಕೆ ಮರಗಳು ಹಾಗೂ 1162 ಇನ್ನಿತರ ಮರಗಳು ಉರುಳಿ ಬಿದ್ದಿದ್ದವು. 276 ಮನೆಗಳಿಗೆ ಹಾನಿಯಾಗಿತ್ತು. 

ಒಟ್ಟು ₹ 8 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಅತ್ಯಂತ ಕಡಿಮೆ ಸಿಗಲಿದೆ. ಹೀಗಾಗಿ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚು ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಲಾಗಿದೆ. ಆದಷ್ಟು ಬೇಗ ಸಚಿವ ಸಂಪುಟದ ಒಪ್ಪಿಗೆ ಪಡೆದು ಪರಿಹಾರ ನೀಡಲಾಗುವುದು’ ಎಂದು ಹೇಳಿದರು.

ರೈತರಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಮರಗಳನ್ನು ಆಧರಿಸಿ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ನಿಧಿಯಡಿ ಅವಕಾಶ ಇಲ್ಲ. ಸೊಗಡು ಶಿವಣ್ಣ ಮಂತ್ರಿಯಾಗಿದ್ದವರು. ಅವರಿಗೆ ಇದೆಲ್ಲ ತಿಳಿದಿರಬೇಕಾಗಿತ್ತು ಎಂದು ಗೇಲಿ ಮಾಡಿದರು.

ರೈತರ ಬಗ್ಗೆ ಬಿಜೆಪಿಯವರಿಗೆ ಅನುಕಂಪ ಎಷ್ಟಿದೆ ಎಂಬುದು ಈಗಲೇ ಗೊತ್ತಾಗಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಿಕೊಂಡು ಬರಲಿ. ಸುಮ್ಮನೆ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಸವಾಲು ಹಾಕಿದರು. ‘ನಾನು ಕ್ಷೇತ್ರದಲ್ಲಿ 40 ವರ್ಷಗಳಿಂದ ಇದ್ದೇನೆ. ಬೇರೆಯವರಿಂದ ಪಾಠ ಕಲಿಯಬೇಕಾಗಿಲ್ಲ’ ಎಂದರು.

ಭೇಟಿಯಾದರು: ‘ಧರಣಿ ನಿರತ ಸೊಗಡು ಶಿವಣ್ಣ ಅವರನ್ನು ನಾನು ಏಕೆ ಭೇಟಿ ಮಾಡಬೇಕು. ಅವರ ರಾಜಕೀಯ ಅವರು ಮಾಡಲಿ. ನನ್ನ ರಾಜಕೀಯ ನಾನು ಮಾಡುತ್ತೇನೆ’ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ’ನನಗಿಂತಲೂ ನಿಮಗೇ ಅವರು ಹೆಚ್ಚು ಆತ್ಮೀಯರು. ನನ್ನ ಪರವಾಗಿ ನೀವೇ ಭೇಟಿಯಾಗಿ’ ಎಂದು ಉತ್ತರ ನೀಡಿದ್ದರು. ಆದರೆ  ಸುದ್ದಿಗೋಷ್ಠಿ ಬಳಿಕ ಶಿವಣ್ಣ ಅವರನ್ನು ಭೇಟಿ ಮಾಡಿ ನಗು, ನಗುತ್ತಾ ಚರ್ಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ, ಕೃಷಿಕ ಸಮಾಜದ ನೇತೃತ್ವದಲ್ಲಿ ರೈತರ ಧರಣಿ ಪ್ರಾರಂಭಿಸಲಾಗಿತ್ತು. ಸಚಿವರ ಭರವಸೆ ಬಳಿಕ ಧರಣಿ ವಾಪಸ್‌ ಪಡೆಯಲಾಗಿದೆ. ಈ ವೇಳೆ ಮುಖಂಡರಾದ ಸಿದ್ದಲಿಂಗೇಗೌಡ, ಅರುಣ್‌ಕುಮಾರ್‌, ರೇಣುಕಾ ಪ್ರಸಾದ್‌, ನಂದೀಶ್‌, ಕೆ.ಪಿ.ಮಹೇಶ್‌   ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT