ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಾವಧಿಯಲ್ಲೇ ನಗರಾಭಿವೃದ್ಧಿಗೆ ಪ್ರಯತ್ನ

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸರ್ದಾರ್ ಭರವಸೆ
Last Updated 15 ಜುಲೈ 2017, 5:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಉಳಿದಿರುವ ಅಲ್ಪ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಚಿತ್ರದುರ್ಗ ನಗರದ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಆರ್.ಕೆ.ಸರ್ದಾರ್ ಭರವಸೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಅಭಿವೃದ್ಧಿ ಕುರಿತು ಸಾಕಷ್ಟು ಕನಸುಗಳಿವೆ. ನಗರದ ರಸ್ತೆ ಸರಿಪಡಿಸಬೇಕು. ಉತ್ತಮ ಪಾದಚಾರಿ ಮಾರ್ಗ, ಉದ್ಯಾನಗಳನ್ನು ನಿರ್ಮಿಸುವ ಕುರಿತು ಯೋಜನೆ ರೂಪಿಸುತ್ತೇವೆ. ಬಹಳಷ್ಟು ಮಂದಿ ನಿವೇಶನ ರಹಿತರಿದ್ದಾರೆ. ಅವರೆಲ್ಲರಿಗೂ ನಿವೇಶನ ದೊರೆಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು

‘28 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ ಫಲವಾಗಿ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ವರಿಷ್ಠರು ನನ್ನನ್ನು ನೇಮಕ ಮಾಡಿದ್ದಾರೆ. ಮುಂದಿನ ಕಾರ್ಯಗಳಿಗೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರ ಅತ್ಯವಶ್ಯಕವಾಗಿ ಬೇಕು’ ಎಂದು ಮನವಿ ಮಾಡಿದರು.

‘ನಿಮ್ಮ ಆಯ್ಕೆ ಬಗ್ಗೆ ನಿಮ್ಮ ಸಮುದಾಯದಲ್ಲೇ ಅಸಮಾಧಾನ ಇತ್ತಂತೆ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಹೆಚ್ಚು ಆಕಾಂಕ್ಷಿಗಳಿದ್ದಾಗ ಇಂಥ ಅಸಮಾಧಾನಗಳು ಸಾಮಾನ್ಯ. ಎಲ್ಲರಿಗೂ ಅಧಿಕಾರ ದೊರೆಯುವುದು ಕಷ್ಟ. ಆದರೆ, ನನಗೆ ದೊರೆತಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು, ದುರ್ಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಸದಸ್ಯ ಬಿ.ಜಿ.ಶ್ರೀನಿವಾಸ್ ಮಾತನಾಡಿ, ‘ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಹಳೆಯ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆದು, ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ’ ಎಂದರು.

ಪ್ರಾಧಿಕಾರದ ಯೋಜನಾ ವಿಭಾಗದ ಅಧಿಕಾರಿ ಶಿವಾನಂದ್, ‘ಹಿಂದಿನ ಅಧ್ಯಕ್ಷರ ಕಾಲದಲ್ಲಿ ಪ್ರಸ್ತಾಪಿಸಲಾಗಿದ್ದ ನಾಮಕಲ್ ಗ್ಯಾರೇಜ್ ಮತ್ತು ಕೋಟೆ ನಡುವಿನ ಬೈಪಾಸ್ ರಸ್ತೆ ಯೋಜನೆಗೆ ಪಿಡಬ್ಲ್ಯುಡಿ ಅನುಮತಿ ನೀಡಬೇಕಿದೆ. ಪ್ರಾಧಿಕಾರದಿಂದ ಎರಡು ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

***

‘ಕುಡಾ’ ಅಧ್ಯಕ್ಷರ ಅಧಿಕಾರ ಸ್ವೀಕಾರ

ಕಾಂಗ್ರೆಸ್ ಮುಖಂಡ ಆರ್‌.ಕೆ.ಸರ್ದಾರ್ ಅವರನ್ನು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ (ಕುಡಾ) ಅಧ್ಯಕ್ಷರಾಗಿ ನೇಮಕ ಮಾಡಿ ಜುಲೈ 17ರಂದು ಸರ್ಕಾರ ಆದೇಶಿಸಿದ್ದು, ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಉಳಿದಂತೆ ಪ್ರಾಧಿಕಾರದ ಸದಸ್ಯರಾಗಿ ಕಾಂಗ್ರೆಸ್ ಮುಖಂಡರಾದ ಬಿ.ಜಿ.ಶ್ರೀನಿವಾಸ, ಯು.ಲಕ್ಷ್ಮಿಕಾಂತ ಮತ್ತು ಮೋಕ್ಷರುದ್ರಸ್ವಾಮಿ ಅವರನ್ನು ಸರ್ಕಾರ ನೇಮಕ ಮಾಡಿದೆ.

ಬುಧವಾರ ಕಾಂಗ್ರೆಸ್‌ ಮುಖಂಡರು, ಅಪಾರ ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದ ಸರ್ದಾರ್ ಅವರು, ನಂತರ ಅಲ್ಲಿಂದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತೆರಳಿ ಪುಸ್ತಕಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.

ಪೌರ ಸೇವಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ‘ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡಬೇಕು ಎಂಬುದು ಬಹುದಿನಗಳ ಕನಸಾಗಿತ್ತು. ಸರ್ದಾರ್ ಅವರಿಗೆ ಆ ಸ್ಥಾನ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕನ್ಯಾಯ ನೀಡಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್,  ‘ಕುಡಾ’ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಕಾಂಗ್ರೆಸ್‌ ಪರಿಶಿಷ್ಟ ವರ್ಗಗಳ ವಿಭಾಗದ ಎಚ್.ಅಂಜಿನಪ್ಪ, ಮುಖಂಡರಾದ ಮುನಿರಾ ಎ.ಮಕಾಂದಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಹಸನ್‌ತಾಹೀರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT