ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷರಿಗೆ ಸಚಿವ ಮೆಚ್ಚುಗೆ: ಅದಕ್ಷರಿಗೆ ಎಚ್ಚರಿಕೆ

Last Updated 15 ಜುಲೈ 2017, 6:22 IST
ಅಕ್ಷರ ಗಾತ್ರ

ಹೆಬ್ರಿ: ‘ಜನಪ್ರತಿನಿಧಿಗಳು, ಅಧಿಕಾರಿಗಳು ಇರುವುದು ಜನರ ಸೇವೆ ಮಾಡಲು. ಹಾಗಾಗಿ ಮುಖ್ಯಮಂತ್ರಿಯ ಸೂಚನೆಯಂತೆ ಜನಸ್ಪಂದನ ಸಭೆಯನ್ನು ನಡೆಸುತ್ತಿದ್ದೇನೆ’ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅಜೆಕಾರಿನಲ್ಲಿ ಗುರುವಾರ ನಡೆದ ಅಜೆಕಾರು ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದಲ್ಲಿರುವುದು ನೀವು ತೆರಿಗೆ ಕಟ್ಟಿದ ಹಣ. ಯೋಜನೆಗಳ ಮೂಲಕ ಹಣವನ್ನು ನಮ್ಮ ಮೂಲಕ ನೀವು ಮರಳಿ ಪಡೆಯಬೇಕು’ ಎಂದ ಸಚಿವರು, ಬಿಪಿಎಲ್ ಕಾರ್ಡು ಇರುವ ಎಲ್ಲರಿಗೂ ಉಚಿತ ವಿದ್ಯುತ್ ಸಂಪರ್ಕ ನೀಡುವಂತೆ ಪಿಡಿಒಗಳಿಗೆ  ಸೂಚಿಸಿದರು. ‘ಜಿಲ್ಲೆಯಾದ್ಯಂತ ಶೇ 90 ಬಿಪಿಎಲ್ ಕಾರ್ಡನ್ನು ಅರ್ಹರಿಗೆ ವಿತರಣೆ ಮಾಡಲಾಗಿದೆ’ ಎಂದರು.

ಚಪ್ಪಲಿ ಕೊಡಬೇಡಿ: ‘ಮುಖ್ಯಮಂತ್ರಿ ಶಾಲಾ ಮಕ್ಕಳಿಗೆ ಶೂಭಾಗ್ಯ ಯೋಜನೆ ತಂದಿದ್ದಾರೆ. ಕೆಲವೆಡೆ ಶೂ ಬದಲು ಚಪ್ಪಲಿ ನೀಡಿರುವುದು ಬೆಳಕಿಗೆ ಬಂದಿದೆ. ಎಲ್ಲಿಯೂ ಚಪ್ಪಲಿ ಕೊಡಬೇಡಿ, ಅದು ಶೂಭಾಗ್ಯ ಚಪ್ಪಲಿ ಭಾಗ್ಯ ಅಲ್ಲ’ ಎಂದು ಸಚಿವರು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗೆ ಎಚ್ಚರಿಸಿದರು.

ಜನರ ಸೇವೆ ಮಾಡುತ್ತಿರುವ ಕಾರ್ಕಳ ತಹಶೀಲ್ಧಾರ್ ಟಿ.ಜೆ.ಗುರುಪ್ರಸಾದ್ ಅವರನ್ನು ಅಭಿನಂದಿಸಿದರು.  ಕೆಲಸ ಮಾಡುವ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲಸ ಮಾಡದವಗೆ ಎಚ್ಚರಿಕೆ ನೀಡಿದರು.

ಸಮಸ್ಯೆಗಳಿಗೆ ಸ್ಪಂದನೆ : ಜನಸ್ಪಂದನದಲ್ಲಿ 27 ಮಂದಿ ಸಮಸ್ಯೆಗಳ ಅರ್ಜಿ ಸಲ್ಲಿಸಿದ್ದು ಎಲ್ಲಾ ಅರ್ಜಿದಾರರನ್ನು ಸಚಿವರು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿದರು. ಹೆಚ್ಚಿನ ದೂರುಗಳು ಬಾರ್, ಮದ್ಯದಂಗಡಿ ಸ್ಥಳಾಂತರದ ವಿಚಾರದಲ್ಲಿ ಅಬಕಾರಿ ಇಲಾಖೆ ಮತ್ತು ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ್ದವು.

ಅಬಕಾರಿ ಇಲಾಖೆಗೆ ಸೂಚನೆ: ‘ಬಾರ್, ಮಧ್ಯದಂಗಡಿಯ ಸ್ಥಳಾಂತರ ಮತ್ತು ಹೊಸ ಬಾರ್ ಆರಂಭ ವಿಚಾರದಲ್ಲಿ ಗ್ರಾಮಸ್ಥರ ವಿರೋಧವನ್ನು ಗಮನಕ್ಕೆ ತೆಗೆದುಕೊಂದು ಕಾನೂನನ್ನು ಸರಿಯಾಗಿ ಪಾಲಿಸಿ’ ಎಂದು ಸಚಿವರು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಮೆಸ್ಕಾಂಗೆ ಎಚ್ಚರಿಕೆ : ಜನಸ್ಪಂದನ ಸಭೆಯಲ್ಲಿ ಬಹುತೇಕ ಸಮಸ್ಯೆಗಳು ಮೆಸ್ಕಾಂ ಬಗ್ಗೆ ಗ್ರಾಮಸ್ಥರು ಹೇಳಿದ್ದರಿಂದ ಸಿಟ್ಟಿಗೆದ್ದ ಸಚಿವರು, ‘ಉಡುಪಿ ಜಿಲ್ಲೆಯಲ್ಲಿ 24 ಗಂಟೆಯೂ ವಿದ್ಯುತ್ ಕೊಡಲು ಪ್ರಯತ್ನಿಸುತ್ತಿದ್ದೇನೆ. ನಿಮಗೆ ಜನರೊಂದಿಗೆ ಸ್ಪಂದಿಸಲು ಏನು ದಾಡಿ’ ಎಂದು ಪ್ರಶ್ನಿಸಿದರು.

‘ನಾಡ್ಪಾಲು ಗ್ರಾಮಸ್ಥರ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ’ ಬಗ್ಗೆ ಗ್ರಾಮಸ್ಥ ರಂಗನಾಥ ಪೂಜಾರಿ ಸಚಿವರ ಗಮನಕ್ಕೆ ತಂದಾಗ ‘ನಾಳೆಯೇ ಎಲ್ಲರ ಮನೆಗೂ ಸ್ವಂತ ಹೋಗಿ ವಿದ್ಯುತ್ ಸಂಪರ್ಕ ನೀಡಿ, ನನ್ನ ಕಚೇರಿಗೆ ವರದಿ ನೀಡಬೇಕು’ ಎಂದು ಸೂಚಿಸಿದರು. ಸಭೆಯಲ್ಲಿ 500ಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ಸಹಿತ ವಿವಿಧ ಸವಲತ್ತು ನೀಡಲಾಯಿತು.

ಕಾರ್ಕಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಾಲಿನಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಉದಯ ಕೋಟ್ಯಾನ್, ಜ್ಯೋತಿ ಹರೀಶ ಪೂಜಾರಿ, ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ ಶೆಟ್ಟಿ,ಕಂದಾಯ ನಿರೀಕ್ಷಕ ಮಂಜುನಾಥ್ ನಾಯಕ್,  ಶಿಕ್ಷಕ ಮುನಿಯಾಲು ಮಾತಿಬೆಟ್ಟು ಪ್ರಕಾಶ ಪೂಜಾರಿ, ತಹಶೀಲ್ಧಾರ್ ಟಿ.ಜೆ.ಗುರುಪ್ರಸಾದ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೇಶವ ಶೆಟ್ಟಿಗಾರ್ ಇದ್ದರು.

ಮದ್ಯದಂಗಡಿ ಬೇಡ: ಮನವಿ
‘ಅಜೆಕಾರು ಪರಿಸರದಲ್ಲಿ ಈಗಾಗಲೇ ಎರಡು ಮದ್ಯದಂಗಡಿಗಳು ಇವೆ. ಇನ್ನು ಹೊಸ ಮದ್ಯದಂಗಡಿಗಳಿಗೆ ಅನುಮತಿ ಕೊಡಬೇಡಿ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಜೆಕಾರು ವಲಯದ ಸೇವಾಪ್ರತಿನಿಧಿಗಳಾದ ವಿಜಯಾ ಕಾಮತ್, ಉಷಾ, ಒಕ್ಕೂಟದ ಅಧ್ಯಕ್ಷರಾದ ಮನೋಹರ ಸೋನ್ಸ್, ರಾಘವೇಂದ್ರ ಆಚಾರ್ಯ, ಉಪಾಧ್ಯಕ್ಷ ಪ್ರವೀಣ್ ಮಡಿವಾಳ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಸಲ್ಲಿಸಿದರು. ಮರ್ಣೆ ಗ್ರಾಮಸ್ಥರು ಕೂಡ ಮದ್ಯದಂಗಡಿ ತೆರೆಯದಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT