ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆಯೊಳಗೆ 133 ಕೊಳೆಗೇರಿ ಕುಟುಂಬ!

Last Updated 15 ಜುಲೈ 2017, 6:35 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹಾಲಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಳೆಗೇರಿ ನಿವಾಸಿಗಳ ಶಾಶ್ವತ ಮನೆ ನಿರ್ಮಾಣ ಕಾಮಗಾರಿ ಆಮೆ ವೇಗದಲ್ಲಿ ಸಾಗಿದ್ದು ತಾತ್ಕಾಲಿಕ ಶೀಟ್‌ಗಳ ಕೆಳಗೆ ಬದುಕು ಸಾಗಿಸುತ್ತಿರುವ 133 ಕುಟುಂಬಗಳು ಮೂಲಸೌಲಭ್ಯವಿಲ್ಲದೆ ನರಳುತ್ತಿವೆ.

ಕೊಳೆಗೇರಿ ನಿರ್ಮೂಲನೆ ಮಂಡಳಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿ ಐದು ತಿಂಗಳಾಗಿವೆ. ಆದರೂ ಮನೆಗಳು ಅಡಿಪಾಯದಿಂದ ಮೇಲಕ್ಕೆ ಬಂದಿಲ್ಲ. ಹಳೆಯ ಮನೆಗಳನ್ನು ನೆಲಸಮ ಮಾಡಿ ಕಾಮಗಾರಿ ಆರಂಭಿಸಲಾಗಿದೆ. ನಿವಾಸಿಗಳಿಗೆ ಪಕ್ಕದಲ್ಲೇ ತಾತ್ಕಾಲಿಕ ತಗಡಿನ ಶೀಟ್‌ ಮನೆ ನಿರ್ಮಿಸಿಕೊಡಲಾಗಿದೆ. ಈ ತಾತ್ಕಾಲಿಕ ಮನೆಗಳಿಗೆ ಸೌಲಭ್ಯ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ.

ಈ ನಿವಾಸಿಗಳಿಗೆ ಮಳೆ ಬಂದರೆ ಭಯ. ಅರ್ಧಗಂಟೆ ರಭಸವಾಗಿ ಮಳೆ ಸುರಿದರೆ ಈ ಮನೆಗಳು ಮುಳುಗಿ ಹೋಗುತ್ತವೆ. ಇಳಿಜಾರಿನ ಪ್ರದೇಶದಲ್ಲಿ ಮನೆ ನಿರ್ಮಿಸಿರುವ ಕಾರಣ ಸಣ್ಣ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗುತ್ತದೆ.

ಏಪ್ರಿಲ್‌ ತಿಂಗಳಲ್ಲಿ ಭಾರಿ ಮಳೆ ಸುರಿದಾಗ ಇಲ್ಲಿಯ ನಿವಾಸಿಗಳು ನರಕ ಸದೃಶ ಯಾತನೆ ಅನುಭವಿಸಿದ್ದರು. ಮನೆಗಳ ಹಿಂದೆ ಹರಿಯುವ ದೊಡ್ಡ ಚರಂಡಿಯ ನೀರು ಮನೆಯೊಳಗೆ ನುಗ್ಗಿ ಅಪಾರ ಸಮಸ್ಯೆ ಸೃಷ್ಟಿಯಾಗಿತ್ತು. 

‘ಕಾಟಾಚಾರಕ್ಕೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಏಪ್ರಿಲ್‌ ನಂತರ ದೊಡ್ಡ ಮಳೆ ಬಂದಿಲ್ಲ. ಬಂದರೆ ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ಕೊಳೆಗೇರಿ ನಿವಾಸಿ ರಾಜಮ್ಮ ಹೇಳಿದರು. ‘ಮನೆ ನಿರ್ಮಿಸಿಕೊಟ್ಟವರು ಸೌಲಭ್ಯ ಕೊಡಬೇಕಾಗಿತ್ತು.  ಕೇವಲ ಶೆಡ್‌ ನಿರ್ಮಿಸಿ ಕೊಟ್ಟರೆ ನಾವು ವಾಸ ಮಾಡುವುದು ಹೇಗೆ’ ಎಂದು ಸೆಲ್ವಂ ಪ್ರಶ್ನಿಸಿದರು.

ರಾತ್ರಿ ವೇಳೆ ಮಾತ್ರ ವಿದ್ಯುತ್‌: ಈ ತಾತ್ಕಾಲಿಕ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಆದರೆ ಸಂಜೆ 7 ಗಂಟೆಗೆ ವಿದ್ಯುತ್‌ ನೀಡಿದರೆ ಬೆಳಿಗ್ಗೆ 6 ಗಂಟೆಗೆ ಸ್ಥಗಿತಗೊಳಿಸುತ್ತಾರೆ. ‘ರಾತ್ರಿ ಕರೆಂಟ್‌ ಕೊಡುತ್ತಾರೆ, ಅದೂ ನೂರು ಬಾರಿ ಹೋಗಿ ಬರುತ್ತದೆ. ನಾವು  ಸೀಮೆ ಎಣ್ಣೆ ದೀಪದ ಬೆಳಕಿನಲ್ಲೇ ಜೀವನ ಮಾಡುತ್ತಿದ್ದೇವೆ’ ಎಂದು ಶಾರದಾ ಹೇಳಿದರು.

ದುರ್ನಾತ ಶೌಚಾಲಯ: 133 ಮನೆಗಳಿಗೆ ಕೇವಲ ಎರಡು ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಅಲ್ಲಿಗೆ ನೀರಿನ ಸಂಪರ್ಕ ನೀಡಿಲ್ಲ. ನಿವಾಸಿಗಳು ನೀರಿನ ಬಾಟೆಲ್‌ ಹಿಡಿದು ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯದ ವಾತಾವರಣ ಗಬ್ಬೆದ್ದು ನಾರುತ್ತಿದ್ದು ಮೂಗುಮುಚ್ಚಿ ಓಡಾಡಬೇಕಾಗಿದೆ. ಮಹಿಳೆಯರು ಈ ಶೌಚಾಲಯ ಬಳಸದೇ ಹಿಂದಿನ ಖಾಲಿ ಜಾಗಕ್ಕೆ ತೆರಳುತ್ತಾರೆ.

‘ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರಿಗೆ ತಿಳಿಸಿದ್ದೆವು. ಸಚಿವರು ಕಳೆದ ವಾರ ಎಂ.ಕೃಷ್ಣಪ್ಪ ಇಲ್ಲಿಗೆ ಭೇಟಿ ನೀಡಿ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯ ಡಾ.ವಾಸು ತಿಳಿಸಿದರು.

ಫ್ಯಾನ್‌, ಟಿವಿ, ಮಿಕ್ಸಿಗೆ ನಿಷೇಧ!: ರಾತ್ರಿ ವೇಳೆ ಮಾತ್ರ ವಿದ್ಯುತ್‌ ನೀಡುತ್ತಿದ್ದು ನಿವಾಸಿಗಳು ಫ್ಯಾನ್‌, ಟಿವಿ, ಮಿಕ್ಸಿ  ವಿದ್ಯುತ್‌ ಉಪಕರಣ ಬಳಸುವಂತಿಲ್ಲ.
‘ರಾತ್ರಿಯಲ್ಲಿ ವಾಚ್‌ಮ್ಯಾನ್‌ ಬಂದು ಪರಿಶೀಲಿಸುತ್ತಾನೆ. ಟಿವಿ, ಮಿಕ್ಸಿ ಬಳಸಿದರೆ ದಂಡ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದು ನಿವಾಸಿ ಶಿವಮ್ಮ ಹೇಳಿದರು.

ಡೆಂಗಿ, ಚಿಕೂನ್‌ ಗುನ್ಯಾ ಭಯ: ಈಗಾಗಲೇ ಇಬ್ಬರು ಮಕ್ಕಳು ಸೇರಿ ಎಂಟು ಮಂದಿ ಡೆಂಗಿಯಿಂದ ಬಳಲುತ್ತಿದ್ದಾರೆ. ನೂರಾರು ಮಂದಿಗೆ ಜ್ವರ ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬಡಾವಣೆಯಲ್ಲಿರುವ ಟ್ಯಾಂಕ್‌ ನೀರು ಕುಡಿಯಂತೆ ಎಚ್ಚರಿಕೆ ನೀಡಿದ್ದಾರೆ.

* * 

ನೀರಿನ ಟ್ಯಾಂಕ್‌ನಲ್ಲಿ ಸಣ್ಣ ಸಣ್ಣ ಹುಳುಗಳಿವೆ. ಮಕ್ಕಳಿಗೆ ಜ್ವರ ಬರುತ್ತಿದೆ. ಅದಕ್ಕಾಗಿ ನಾವು ಒಂದು ಕಿ.ಮೀ. ದೂರದಿಂದ ಶುದ್ಧ ನೀರು ತಂದು ಕುಡಿಯುತ್ತಿದ್ದೇವೆ.
ಅಬಿದಾ
ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT