ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಉಲ್ಬಣಿಸದಂತೆ ಕ್ರಮ ವಹಿಸಿ

Last Updated 15 ಜುಲೈ 2017, 6:40 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಡೆಂಗಿ, ಚಿಕೂನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಉಲ್ಬಣಿಸದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಶ್ವೇತಾ ದೇವರಾಜ್ ಅವರು  ಆರೋಗ್ಯಾಧಿಕಾರಿ ಎಚ್‌.ವೆಂಕಟೇಶ್‌ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ (ಕೆ.ಡಿ.ಪಿ)ಸಭೆಯಲ್ಲಿ ಅವರು ಮಾತನಾಡಿದರು.  ಜಿಲ್ಲೆಯಲ್ಲಿ ಡೆಂಗಿ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿವೆ. ಇದರಿಂದ ಜನರಲ್ಲಿ ಭಯದ ವಾತಾವರಣ ಉಂಟಾಗುತ್ತಿದೆ.

ಹೀಗಾಗಿ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಧೈರ್ಯ ತುಂಬುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡಬೇಕು. ಲಾರ್ವಾ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿ, ಅವುಗಳನ್ನು ನಾಶ ಪಡಿಸಬೇಕು ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ಮಾತನಾಡಿ, ಹಳೇ ಮೈಸೂರು ಪ್ರಾಂತ್ಯದಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತಿದೆ. ಇತರೆ ಜಿಲ್ಲೆಗಳಲ್ಲಿ ಅಷ್ಟಾಗಿ ಈ ಕಾಯಿಲೆಗಳು ಇಲ್ಲ.  ಮೈಸೂರಿನಲ್ಲಿ 300 ಡೆಂಗಿ, ಮಂಡ್ಯ ಹಾಗೂ ಹಾಸನದಲ್ಲಿ ನೂರಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ಹೆಚ್ಚಾಗಲು ಕಾರಣವೇನು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವೆಂಕಟೇಶ್, ಜಿಲ್ಲೆಯಲ್ಲಿ ಡೆಂಗಿ 115 ಡೆಂಗಿ, ಚಿಕೂನ್‌ ಗುನ್ಯಾ 22 ಪ್ರಕರಣ ದಾಖಲಾಗಿದೆ.  ಲಾರ್ವಾ ಸಮೀಕ್ಷೆ  ನಡೆಸಿ ಜನರಲ್ಲಿ ಅರಿವು ಮೂಡಿಸುವ  ಕೆಲಸ ಮಾಡಲಾಗಿದೆ. ಜೋರು ಮಳೆಯಾದರೆ ಈ ಸಮಸ್ಯೆ ಕಂಡು ಬರುವುದಿಲ್ಲ. ಆದರೆ, ಮಳೆ ಇಲ್ಲದ ಕಾರಣ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ ಎಂದು ವಿವರಿಸಿದರು. 

‘ಯಾವುದೇ ಕಾರಣಕ್ಕೂ ನೀರಿಲ್ಲ ಎಂಬ ಕಾರಣಕ್ಕೆ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ  ಶುದ್ಧ ಕುಡಿಯುವ ನೀರಿನ ಘಟಕವನ್ನು ಬಂದ್ ಮಾಡಬಾರದು. ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ  ಕಲ್ಪಿಸಬೇಕು. 14ನೇ ಹಣಕಾಸು ಆಯೋಗದ ಹಣವನ್ನು ಕುಡಿಯುವ ನೀರಿನ ಸಮಸ್ಯೆಗೆ ಬಳಸಿಕೊಳ್ಳಬೇಕು’ ಎಂದು ವೆಂಕಟೇಶ್‌ ಕುಮಾರ್‌  ಅಧಿಕಾರಗಳಿಗೆ ಸೂಚಿಸಿದರು.  

ಶ್ವೇತಾ ದೇವರಾಜ್ ಮಾತನಾಡಿ, ಅರಸೀಕೆರೆ ತಾಲ್ಲೂಕಿನಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಿರುವ ಕುಡಿಯುವ ನೀರಿನ ಬಿಲ್‌  ಇನ್ನೂ ಪಾವತಿ ಮಾಡಿಲ್ಲ. ಹೀಗಾಗಿ ಟ್ಯಾಂಕರ್ ಮಾಲೀಕರು ನೀರು ಸರಬರಾಜು ಮಾಡಲು ಹಿಂದೇಟು ಹಾಕುತ್ತಿದ್ದಾರೆ.   ಬಿಲ್ ಪಾವತಿಗೆ ವಿಳಂಬ ವಹಿಸದೇ ಕ್ರಮವಹಿಸುವಂತೆ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ, ಈ ಬಾರಿ ಒಂದನೇ ತರಗತಿಗೆ ಜಿಲ್ಲೆಯಲ್ಲಿ 19,980 ಮಕ್ಕಳು ದಾಖಲಾಗಿದ್ದಾರೆ. ಶೇ 96 ರಷ್ಟು ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಶೂ ಮತ್ತು ಕಾಲು ಚೀಲಗಳು ಬಂದಿದ್ದು, ಅವುಗಳನ್ನು  ವಿದ್ಯಾರ್ಥಿಗಳಿಗೆ ವಿತರಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.

ಮಲೆನಾಡು ಪ್ರದೇಶಗಳ ಎಸ್ಟೇಟ್‌ನಲ್ಲಿ ಹೆಚ್ಚು  ಅಂಗನವಾಡಿ ಕೇಂದ್ರ  ತೆರೆದು ಮಕ್ಕಳ ಪೋಷಣೆ ಬಗ್ಗೆ ಗಮನ ಹರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಎತ್ತರ ಅಳತೆಗಾಗಿ ಗೋಡೆಯಲ್ಲಿ ಸ್ಕೇಲ್ ನಿರ್ಮಿಸಬೇಕು. ಅವರ ತೂಕದೊಂದಿಗೆ ಎತ್ತರವನ್ನು ಸಹ ಅಳೆದು ಅವರ ಆರೋಗ್ಯದ ಬಗ್ಗೆ ದಾಖಲಾತಿ ಮಾಡುವುದು ಸೂಕ್ತ  ಎಂದು ಸಿಇಒ ಹೇಳಿದರು. ಸಭೆಯಲ್ಲಿ ಕೆ.ಡಿ.ಪಿ ನಾಮ ನಿರ್ದೇಶಕ ಸದಸ್ಯ ದಿನೇಶ್, ಉಪಕಾರ್ಯದರ್ಶಿ ಪರಮೇಶ್ ಹಾಗೂ ನಾಗರಾಜ್, ಲೆಕ್ಕಾಧಿಕಾರಿ ಶ್ರೀನಿವಾಸ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT