ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಪಹಣಿಗಾಗಿ ಬೀದಿಗಿಳಿದ ರೈತರು

Last Updated 15 ಜುಲೈ 2017, 6:42 IST
ಅಕ್ಷರ ಗಾತ್ರ

ಹಾಸನ: ಪಹಣಿ ಪಡೆಯಲು ಶನಿವಾರ ಕೊನೆ ದಿನವಾಗಿದ್ದರೂ ತಹಶೀಲ್ದಾರ್ ಕಚೇರಿಯಲ್ಲಿ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ಶುಕ್ರವಾರ ಸಂಜೆ ರಸ್ತೆತಡೆ ನಡೆಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಒಂದು ಕಡೆ ಮಾತ್ರ ಪಹಣಿ ಕೊಡುತ್ತಿದ್ದಾರೆ.

ಮಧ್ಯಾಹ್ನ ಊಟಕ್ಕೆಂದು 12 ಗಂಟೆಗೆ ಬಂದ್ ಮಾಡಿ 3 ಗಂಟೆಯಾದರೂ ಪಹಣಿ ನೀಡಲು ಮುಂದಾಗುತ್ತಿಲ್ಲ ಎಂದು  ರೈತರು ಆರೋಪಿಸಿ ರಸ್ತೆತಡೆ ನಡೆಸಿದರು. ಇದರಿಂದಾಗಿ ಬಿ.ಎಂ ರಸ್ತೆಯಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.

ಸ್ಥಳಕ್ಕೆ ಬಂದ ವೃತ್ತ ನಿರೀಕ್ಷಿಕ ಸತ್ಯನಾರಾಯಣ್, ಬಡಾವಣೆ ಪೊಲೀಸ್ ಸಬ್ಇನ್‌ಸ್ಪೆಕ್ಟರ್‌ ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿ ರೈತರ ಮನವೊಲಿಸಲು ಪ್ರಯತ್ನಿಸಿದರು.  ಇಬ್ಬರ ನಡುವೆ ಮಾತಿನಚಕಮಕಿ ನಡೆಯಿತು. ಪ್ರತಿಭಟನಾಕಾರರನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಡಬೇಕಾಯಿತು. 

ಇಷ್ಟಕ್ಕೆ ಸುಮ್ಮನಾಗದ ರೈತರು ಎಚ್‌ಡಿಸಿಸಿ ಬ್ಯಾಂಕಿನಲ್ಲಿ ಇದ್ದ ಶಾಸಕ  ಎಚ್.ಡಿ. ರೇವಣ್ಣ ಬಳಿ ಸಮಸ್ಯೆ ಹೇಳಿದರು. ನಂತರ ಪಹಣಿ ಕೊಡಲು ಮತ್ತೊಂದು ಕೌಂಟರ್ ತೆರೆಯುವ ಅವಕಾಶವನ್ನು ಕಲ್ಪಿಸುವುದಾಗಿ ಶಾಸಕರು ಸಮಾಧಾನ ಪಡಿಸಿ ಕಳುಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರೈತರು, ‘ಕೇವಲ ಮೂರು ದಿನ ಇರುವಂತೆ ಪಹಣಿ ವಿತರಿಸಲಾಗುತ್ತಿದೆ. ತಹಶೀಲ್ದಾರ್ ಕಚೇರಿಯಲ್ಲಿ ಒಂದು ಕಡೆ ಮಾತ್ರ ಕೊಡುತ್ತಿದ್ದು, ಇನ್ನು ಹೋಬಳಿ ಮಟ್ಟದಲ್ಲಿ ಕೇಳಲು ಹೋದರೇ ಸರ್ವರ್ ತೊಂದರೆ ಕೊಡಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಊಟಕ್ಕೆಂದು ಮಧ್ಯಾಹ್ನ 12ಕ್ಕೆ  ಬಂದ್‌ ಮಾಡಿ  3 ಗಂಟೆಯಾದರೂ ಪಹಣಿ ಕೊಡಲು ಮುಂದಾಗಲಿಲ್ಲ’ ಎಂದು ದೂರಿದರು.

‘ದೂರದ ಸ್ಥಳಗಳಿಂದ ಕೆಲಸ ಬಿಟ್ಟು ಪಹಣಿಗಾಗಿ ಸಾಲಿನಲ್ಲಿ ಮುಂಜಾನೆ 5 ಗಂಟೆಯಿಂದಲೇ ನಿಂತರೂ ಸಿಗುತ್ತಿಲ್ಲ.  ಸಮಸ್ಯೆಯನ್ನು ಯಾರು ಕೇಳಲು ಬರುವುದಿಲ್ಲ. ರಸ್ತೆ ಮಧ್ಯೆ ನಿಂತು ಪ್ರತಿಭಟಿಸಿದರೇ ಪೊಲೀಸರು ಹಾಗೂ ಅಧಿಕಾರಿಗಳು ಬರುತ್ತಾರೆ. ಪಹಣಿ ಪಡೆಯಲು ಶನಿವಾರ ಕೊನೆ ದಿನ. ದಿನಾಂಕ ಮುಂದೂಡಿ, ಕೌಂಟರ್‌  ಹೆಚ್ಚಿಸಬೇಕು’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT