ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಹಿಂದೂ ಸಂಸ್ಕೃತಿ ವಿರೋಧಿ: ಉಗ್ರಪ್ಪ

Last Updated 15 ಜುಲೈ 2017, 9:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿಯವರು ಹಿಂದೂಗಳ ನಿಜವಾದ ವಾರಸುದಾರರಲ್ಲ. ದೇಶದಲ್ಲಿ ಹಿಂದೂ ಸಂಸ್ಕೃತಿ ವಿರೋಧಿಗಳು ಯಾರಾದರೂ ಇದ್ದಾರೆ ಎಂದಾದರೆ ಅವರೇ ಬಿಜೆಪಿಯವರು’ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಆರೋಪಿಸಿದರು.

‘ನಿಜವಾದ ಹಿಂದುತ್ವದಲ್ಲಿ ವಿಶ್ವಾಸವಿಟ್ಟಿರುವ ಪಕ್ಷ ಕಾಂಗ್ರೆಸ್‌. ಸಂಘಪರಿವಾರ, ಬಿಜೆಪಿ  ಹಿಂದುತ್ವದ ವಾರಸುದಾರರಾಗಲು ಸಾಧ್ಯವಿಲ್ಲ’ ಎಂದು  ಇಲ್ಲಿ ಶುಕ್ರವಾರ ಹೇಳಿದರು.‘ಬಿಜೆಪಿಯವರು ಸಮಾಜವನ್ನು ಒಡೆದುಹಾಕುವ ನೀತಿಯನ್ನು ಸದಾ ಮೈಗೂಡಿಸಿಕೊಂಡಿದ್ದಾರೆ. ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಅವರು ಯಾರ ಪರವಾಗಿಯೂ ಇಲ್ಲ’ ಎಂದು ಆರೋಪಿಸಿದರು.

‘ಬಿಜೆಪಿ ವೋಟ್‌ಬ್ಯಾಂಕಿಗಾಗಿ ಹಿಂದುತ್ವದ ಹೆಸರಿನಲ್ಲಿ ಸೋಗಲಾಡಿತ ಪ್ರದರ್ಶಿಸುತ್ತಿದೆ. ಬಿಜೆಪಿ ಕೇವಲ ವೈದಿಕ ಪರಂಪರೆ ಮೈಗೂಡಿಸಿಕೊಂಡಿರುವವರ ಪರವಾಗಿದೆಯೇ ಹೊರತು, ಸಾರ್ವತ್ರಿಕ ಹಿಂದುಗಳ ಪರವಾಗಿಲ್ಲ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಹಾಗೂ ರಾಜ್ಯ ಸರ್ಕಾರದ ಜನಪರ ಆಡಳಿತದಿಂದಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬರುವುದು ಗೋಡೆ ಬರಹದಷ್ಟೇ ಸ್ಪಷ್ಟವಾಗಿರುವುದರಿಂದ ಹತಾಷರಾಗಿರುವ ಬಿಜೆಪಿಯವರು ದಕ್ಷಿಣ ಕನ್ನಡದಲ್ಲಿ ಅಮಾಯಕ ಜನರ ನಡುವೆ ಕಂದಕ ನಿರ್ಮಾಣ ಮಾಡುವ ಪ್ರಯತ್ನ ನಡೆಸಿದ್ದಾರೆ’ ಎಂದು ದೂರಿದರು.ಮಾಜಿ ಸಂಸದ ಪ್ರೊ.ಐ.ಸಿ.ಸನದಿ ಇದ್ದರು.

‘ಸಿಬ್ಬಂದಿ, ಸೌಲಭ್ಯ ಕೊರತೆ ಕಾರಣ ವರದಿ ಕೊಡಲು ಆಗಿಲ್ಲ’
ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಗೆ ಸರ್ಕಾರ ಇದುವರೆಗೂ ಅಗತ್ಯ ಸಿಬ್ಬಂದಿ ಮತ್ತು ಸವಲತ್ತುಗಳನ್ನು ನೀಡಿಲ್ಲ ಎಂದು ಸಮಿತಿ ಅಧ್ಯಕ್ಷ  ಬೇಸರ ವ್ಯಕ್ತಪಡಿಸಿದರು.

‘ಮೂಲಸೌಲಭ್ಯ ಕೊರತೆ ಎದುರಿಸುತ್ತಿರುವ ಕಾರಣ ಸಕಾಲದಲ್ಲಿ ವರದಿ ನೀಡಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ’ ಎಂದು ಅವರು ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

‘ಈ ಹಿಂದೆ ಈ ಸಮಿತಿಗೆ ಎಂ.ಸಿ.ನಾಣಯ್ಯ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ಪರವಾಗಿ ವಿಧಾನ ಪರಿಷತ್ತಿನ ಸಚಿವಾಲಯ ಎಲ್ಲ ಸವಲತ್ತುಗಳನ್ನು ಕೊಟ್ಟಿತ್ತು. ಆದರೆ, ನಾನು ಅಧ್ಯಕ್ಷನಾದ ಮೇಲೆ ಯಾವ ಸವಲತ್ತು ಕೊಟ್ಟಿಲ್ಲ’ ಎಂದರು. ‘ಬೆಂಗಳೂರನ್ನು ‘ರೇಪ್‌ ಸಿಟಿ’ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು. ಆದರೆ, ಈಗ ಆ ಸ್ಥಿತಿ ಇಲ್ಲ. ನಿಯಂತ್ರಣದಲ್ಲಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ವಿಶೇಷ ಒತ್ತು ನೀಡಬೇಕಿದೆ’ ಎಂದರು.

‘ನಿರ್ಭಯಾ ನಿಧಿ’ ಬಳಕೆ ಸರಿಯಾಗಿ ಆಗುತ್ತಿಲ್ಲ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರಿಗೆ ಪರಿಹಾರದ ಮೊತ್ತ ಸಿಗುತ್ತಿಲ್ಲ. ‘ನಿರ್ಭಯಾ ನಿಧಿ’ ಕೇವಲ ಹೆಸರಿಗೆ ಸೀಮಿತವಾಗಿದೆ. ಈ ಯೋಜನೆ ಜಾರಿಯಲ್ಲಿ ಇರುವ ನ್ಯೂನತೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದರು.ಮಹಿಳೆಯರು ಮತ್ತು ಮಕ್ಕಳ ಹಿತರಕ್ಷಣೆ ಉದ್ದೇಶಕ್ಕೆ ರಾಷ್ಟ್ರೀಯ ನೀತಿ ರಚನೆಯಾಗಬೇಕಾದ ಅಗತ್ಯವಿದೆ. ಈ ಕುರಿತು ವರದಿಯಲ್ಲಿ ಶಿಫಾರಸು ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT