ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ವೃದ್ಧರನ್ನು ಬಲಿ ಪಡೆದ ಗುಂಡಿ

Last Updated 15 ಜುಲೈ 2017, 9:31 IST
ಅಕ್ಷರ ಗಾತ್ರ

ಧಾರವಾಡ: ಒಂದು ತಿಂಗಳ ಅವಧಿಯಲ್ಲಿ ಮೂವರು ವೃದ್ಧರು ಚರಂಡಿಗೆ ಬಿದ್ದು ಮೃತಪಟ್ಟಿರುವುದರ ಬೆನ್ನಲ್ಲೇ ಪಾಲಿಕೆಯ ನಿರ್ಲಕ್ಷ್ಯಕ್ಕೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವಲೂರು ಅಗಸಿ ಬಳಿ ಒಂದು ತಿಂಗಳಿನಿಂದ ಅಮೃತ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಶುಕ್ರವಾರ ಫಕೀರಪ್ಪ ತಿಪ್ಪಣ್ಣನವರ (65) ವೃದ್ಧರೊಬ್ಬರು ಬಿದ್ದು ಮೃತಪಟ್ಟಿದ್ದಾರೆ. 

ಜೂನ್ 22ರಂದು ಚೆನ್ನಬಸವೇಶ್ವರ ನಗರ ಬಳಿ ನಿರ್ಮಾಣ ಹಂತದಲ್ಲಿದ್ದ ಗಟಾರಕ್ಕೆ ಶ್ರೀನಗರದ ನಿವಾಸಿ ಯಶವಂತ ಗೋಗರೆ (50) ಬಿದ್ದು ಮೃತಪಟ್ಟಿದ್ದರು. ಜುಲೈ 12ರಂದು ಮೆಹಬೂಬನಗರದ ಮೆಹಬೂಬಸಾಬ್‌ ಧಾರವಾಡ್ಕರ್‌ (78)  ಎಂಬ ವೃದ್ಧರೊಬ್ಬರು ಗಟಾರಕ್ಕೆ ಬಿದ್ದು ಮೃತಪಟ್ಟಿದ್ದರು. ಈ ಮೂರು ಘಟನೆಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಮಗಾರಿ ನಡೆಯುವ ಸ್ಥಳದಲ್ಲಿ ಎಚ್ಚರಿಕೆಯ ಫಲಕವಾಗಲಿ ಅಥವಾ ಅದಕ್ಕೆ ತಡೆಗೋಡೆಯಾಗಲಿ ನಿರ್ಮಿಸಿರಲಿಲ್ಲ. ಶುಕ್ರವಾರ ನವಲೂರು ಅಗಸಿ ಬಳಿ ನಡೆದ ಘಟನೆಯೂ ಇದಕ್ಕೆ ಹೊರತಾಗಿಲ್ಲ. ಈ ಭಾಗದಲ್ಲಿ ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಮೊದಲು ಕಾಮಗಾರಿ ಕೈಗೊಂಡಿದ್ದ ರಸ್ತೆ ಅಗಲವಾಗಿತ್ತು.

ಈಗ ಕಿರಿದಾಗಿರುವ ರಸ್ತೆಯಲ್ಲಿ ಗುಂಡಿ ತೆಗೆದಿರುವುದರಿಂದ ಜನರು ಓಡಾಡಲು ತೀವ್ರ ತೊಂದರೆಯಾಗಿದೆ. ಆದರೆ, ಜನರ ಕಷ್ಟ ಪಾಲಿಕೆ ಅಧಿಕಾರಿಗಳಿಗೆ ಅರ್ಥವಾಗದ ಕಾರಣ ಇಂತಹ ಘಟನೆಗಳು ಜರುತ್ತಿವೆ’ ಎಂದು ಇಲ್ಲಿನ ನಿವಾಸಿ ಅಬ್ದುಲ್‌ಖಾನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಮಗಾರಿ ನಡೆಯುತ್ತಿರುವುದರಿಂದ ಜಡಿ ಮಳೆಯಲ್ಲಿ ಕಾಲು ಜಾರುವುದು ಸಹಜ. ಇಂತಹ ಸಂದರ್ಭದಲ್ಲಿ ರಸ್ತೆಯ ಬಹುಪಾಲು ಗುಂಡಿ ತೆಗೆದ ಮಣ್ಣನ್ನು ಸುರಿಯಲಾಗಿದೆ. ಇದರಲ್ಲೇ ಶುಕ್ರವಾರ ವೃದ್ಧರು ಮಣ್ಣಿನ ದಿಬ್ಬದ ಮೇಲೆ ದಾಟಿ ಹೋಗುವ ಪ್ರಯತ್ನದಲ್ಲಿದ್ದಾಗ ಬಿದ್ದು ಮೃತಪಟ್ಟಿರಬಹುದು. ಅಧಿಕಾರಿಗಳು ಜನರ ಜೀವದ ಕುರಿತು ತುಸು ಜಾಗರೂಕತೆ ವಹಿಸಿದ್ದರೂ ಇಂತ ಅವಘಡ ಸಂಭವಿಸುತ್ತಿರಲಿಲ್ಲ’ ಎಂದರು.

‘ಶುಕ್ರವಾರದ ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲೇ ಒಂದು ಶಾಲೆ ಇದೆ. ಈ ಶಾಲೆಯ ಮಕ್ಕಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆ ಮಕ್ಕಳಿಗೆ ಏನಾದರೂ ಆದರೆ ಎಂದು ಹಲವರು ಮಾತನಾಡಿಕೊಂಡು ಕಾಮಗಾರಿ ನಡೆಸುತ್ತಿದ್ದವರಿಗೆ ಹೇಳಿದ್ದೂ ಇದೆ. ಆದರೂ ಅವರು ಆ ಕುರಿತು ಗಮನ ಹರಿಸದ ಕಾರಣ ಇಂತಹ ದುರ್ಘಟನೆ ಸಂಭವಿಸಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಉತ್ತಮ’ ಎಂದು ಖಾನ್‌ ಹೇಳಿದರು.

ಇದೇ ಬಡಾವಣೆಯ ಮಹಾವೀರ ಜೈನ್‌, ‘25 ಅಡಿ ಆಳದ ಗುಂಡಿ ತೋಡಿರುವ ಒಳಚರಂಡಿ ಮಂಡಳಿಯವರು, ಅದಕ್ಕೆ ತಡೆಗೋಡೆಯನ್ನಾಗಲಿ ಅಥವಾ ಸೂಚನಾ ಫಲಕವಾಗಲೀ ಹಾಕಿಲ್ಲ. ಇಂತಹ ನಿರ್ಲಕ್ಷ್ಯದ ವಿರುದ್ಧ ಖಾಸಗಿ ದೂರು ದಾಖಲಿಸಬೇಕು ಎಂದು ಈ ಭಾಗದವರೆಲ್ಲ ಸೇರಿ ತೀರ್ಮಾನಿಸಿದ್ದೇವೆ’ ಎಂದರು.

ಮಣ್ಣಿನ ದಿಬ್ಬವೇ ಗುರುತು: ‘ಅಮೃತ್‌ ಯೋಜನೆ ಅಡಿ ಯಲ್ಲಿ ಕೈಗೊಂಡಿರುವ ಒಳ ಚರಂಡಿ ಕಾಮಗಾರಿಯಲ್ಲಿ ಪೈಪ್ ಅಳವಡಿಸಲು ಗುಂಡಿ ತೋಡಲಾಗಿದೆ. ಆದರೆ, ಗುಂಡಿ ಇದೆ ಎಂಬುದು ಜನರಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದಲೇ ತೆಗೆದ ಮಣ್ಣನಿಂದ ಪಕ್ಕದಲ್ಲಿ ಎತ್ತರದ ದಿಬ್ಬ ಮಾಡಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ವಾಗಿ ತಡೆಗೋಡೆ ನಿರ್ಮಿಸುವುದು ಅಸಾಧ್ಯ’ ಇದು ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಖಡಕ್ ನುಡಿ.

‘ಗುಂಡಿ ತೆಗೆಯುವ ಸಂದರ್ಭದಲ್ಲಿ ಮಣ್ಣನ್ನು ತೆಗೆದು ಪಕ್ಕಕ್ಕೆ ಎತ್ತರದ ದಿಬ್ಬ ಮಾಡಲಾಗುತ್ತದೆ. ಹೀಗೆ ದಿಬ್ಬ ಮಾಡುವ ಉದ್ದೇಶವೇ ಜನರು ಹತ್ತಿರ ಬಾರದಿರಲಿ ಎಂದು. ಆದರೆ, ತೆಗೆದ ಗುಂಡಿಗೆಲ್ಲಾ ಬೇಲಿ ಹಾಕ ಲು ಅವಕಾಶವಿಲ್ಲ. ಜನರೇ ಇದನ್ನು ಅರ್ಥ ಮಾಡಿಕೊಂಡು ಜಾಗರೂಕರಾಗಿರಬೇಕು’ ಎಂದರು.

ಮೃತಪಟ್ಟ ಫಕೀರಪ್ಪ ಅವರ ಕುಟುಂಬಕ್ಕೆ ಪರಿಹಾರ ಕೊಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಹಿರೇಮಠ, ‘ಘಟನೆ ಕುರಿತಂತೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರು ವರದಿ ನೀಡಿದ ನಂತರ ತೀರ್ಮಾನಿಸಲಾಗುವುದು. ಗುಂಡಿಯನ್ನು ಶೀಘ್ರದಲ್ಲಿ ಮುಚ್ಚ ಲಾಗುವುದು’ ಎಂದು ಅವರು ಹೇಳಿದರು.

ಒಳಚರಂಡಿ ಗುಂಡಿಗೆ ಬಿದ್ದು  ಸಾವು
ಧಾರವಾಡ: ಇಲ್ಲಿನ ನವಲೂರು ಅಗಸಿ ಬಳಿ ಒಳಚರಂಡಿಗಾಗಿ ತೋಡಲಾಗಿದ್ದ ಆಳದ ಗುಂಡಿಗೆ ಕಾಲುಜಾರಿ ಬಿದ್ದು ವೃದ್ಧರೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.‘ಒಳ ಚರಂಡಿ ಮಂಡಳಿಯವರು ಯಂತ್ರ ಬಳಸಿ 25ಅಡಿ ಆಳದ ಗುಂಡಿ ತೋಡಿದ್ದರು. ಮುಂಜಾನೆ 5.30ರ ಸುಮಾರಿಗೆ ವಾಯುವಿಹಾರಕ್ಕೆ ಹೋಗಿದ್ದ ಫಕೀರಪ್ಪ ತಿಪ್ಪಣ್ಣನವರ (65) ಎಂಬುವವರು, ಗುಂಡಿ ತೆಗೆದಿರುವುದನ್ನು ಗಮನಿಸದೆ ಆಯತಪ್ಪಿ ಬಿದ್ದಿದ್ದಾರೆ.

ಬೀಳುವಾಗಿ ದಂಡೆಯ ಮೇಲಿದ್ದ ಮಣ್ಣು ಕುಸಿದು ಅವರ ಮೇಲೆಯೇ ಬಿದ್ದಿದೆ. ಇದಾದ ಕೆಲವು ಗಂಟೆಗಳ ನಂತರ ಗುಂಡಿಯ ಬಳಿ ಕಾಲು ಹಾಗೂ ಪಂಚೆ ನೋಡಿದ ಕೆಲವರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು.

‘ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಶೆಲವಡಿ ಗ್ರಾಮದ ಫಕ್ಕೀರಪ್ಪ ಕೆಲ ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲಸಿದ್ದರು. ನಿತ್ಯವೂ ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದರು. ಅಂತೆಯೇ ಶುಕ್ರವಾರವೂ ಹೊರ ಹೋಗಿ ಎರಡು ಗಂಟೆಯಾದರೂ ಬಾರದಿದ್ದರಿಂದ ಗಾಬರಿಗೊಂಡ ಮನೆಯವರು ಫಕೀರಪ್ಪ ಅವರಿಗಾಗಿ ಹುಡುಕಾಡಿದ್ದಾರೆ.

ಅದೇ ಸಂದರ್ಭದಲ್ಲಿ ಗುಂಡಿಯಲ್ಲಿ ವ್ಯಕ್ತಿಯೊಬ್ಬರ ಚಪ್ಪಲಿ ಹಾಗೂ ಕಾಲುಗಳು ಕಾಣಿಸುತ್ತಿರುವ ಸುದ್ದಿ ಹರಡಿದ್ದರಿಂದಾಗಿ ಅಲ್ಲಿಗೆ ಹೋಗಿ ನೋಡಿದಾಗ, ಸ್ಥಳೀಯರು ಇವರನ್ನು ಗುರುತಿಸಿದರು’ ಎಂದು ಸ್ಥಳೀಯ ಮಹಾವೀರ ಜೈನ್‌ ತಿಳಿಸಿದರು.

ನಂತರ ಸ್ಥಳೀಯರ ಸಹಾಯದಿಂದ ಮಣ್ಣು ಸರಿಸಿ, ಫಕೀರಪ್ಪ ಅವರ ಮೃತದೇಹವನ್ನು ಹೊರಗೆ ತೆಗೆಯಲಾಯಿತು. ಇದು ಆಕಸ್ಮಿಕವಾಗಿ ಸಂಭವಿಸಿದ ಘಟನೆ ಎಂದು ಕುಟುಂಬದವರು ವಿದ್ಯಾಗಿರಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT