ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

77 ಡೆಂಗಿ ಪ್ರಕರಣ ಪತ್ತೆ

Last Updated 15 ಜುಲೈ 2017, 9:37 IST
ಅಕ್ಷರ ಗಾತ್ರ

ಬಾಗಲಕೋಟೆ: ಮಳೆಗಾಲ ಆರಂಭ ವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಡೆಂಗಿ ಜ್ವರದ ಭೀತಿ ಹೆಚ್ಚಳಗೊಂಡಿದೆ. ಜೂನ್‌ 1ರಿಂದ ಜುಲೈ 14ರವರೆಗೆ ಒಂದೂವರೆ ತಿಂಗಳಲ್ಲಿ ಜಿಲ್ಲೆಯಾದ್ಯಂತ 77 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಜೂನ್ ತಿಂಗಳಲ್ಲಿ ಪತ್ತೆಯಾದ 58 ಡೆಂಗಿ ಪ್ರಕರಣಗಳಲ್ಲಿ ಹುನಗುಂದ ತಾಲ್ಲೂಕಿನಲ್ಲಿ 36, ಬಾದಾಮಿ 12, ಬಾಗಲಕೋಟೆ 7,ಮುಧೋಳ 1 ಹಾಗೂ ಬೀಳಗಿಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಹಿರಂಗಪಡಿಸಿದೆ.

ಈಡಿಸ್ ಈಜಿಪ್ಟೈ ಸೊಳ್ಳೆಯ ಮೂಲಕ ಡೆಂಗಿ ವೈರಸ್ ಹರಡುತ್ತದೆ. ಸಾಮಾನ್ಯವಾಗಿ ವಿಪರೀತ ಜ್ವರ, ತಲೆನೋವು, ವಾಂತಿ, ಮೂಳೆ ಮತ್ತು ಸ್ನಾಯುಗಳ ಸೆಳೆತ, ಚರ್ಮದ ಮೇಲೆ ದದ್ದರಿಕೆ ಬರುವುದು, ಕೆಂಪು ರಕ್ತದ ಕಣಗಳಲ್ಲಿ ಇಳಿಕೆ ಕಂಡು ಬರುತ್ತದೆ. ಕೆಲವೊಮ್ಮೆ ತೀವ್ರ ರಕ್ತಸ್ರಾವದಿಂದ ಹಾಗೂ ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸುತ್ತದೆ.

ಮನೆ, ಮನೆ ಜಾಗೃತಿ: ಡೆಂಗಿ ಬಂದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯ ಜೊತೆಗೆ ರೋಗ ಉಲ್ಬಣಗೊಳ್ಳದಂತೆ ಎಚ್ಚರವಹಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆನಂದ ದೇಸಾಯಿ ಹೇಳುತ್ತಾರೆ. ಆ ನಿಟ್ಟಿನಲ್ಲಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಲಾ ಮಕ್ಕಳನ್ನು ಸೇರಿಸಿಕೊಂಡು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಇಲಾಖೆಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಕರಪತ್ರ ಹಂಚಿಕೆ, ಬ್ಯಾನರ್‌, ಮಾಹಿತಿ ಫಲಕ ಅಳವಡಿಕೆ, ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಮಾರಕ ಸೊಳ್ಳೆ: ಈಡಿಸ್‌ ಈಜಿಪ್ಟೈ ಸೊಳ್ಳೆ ಸಂಗ್ರಹಿಸಿಟ್ಟ ಶುದ್ಧ ನೀರು ಹಾಗೂ ಕಲುಷಿತ ನೀರು ಎರಡರಲ್ಲೂ ಬದುಕುತ್ತದೆ ಹಾಗೂ ಅಲ್ಲಿಯೇ ಸಂತಾನಾಭಿವೃದ್ಧಿ ಮಾಡುತ್ತದೆ. ಬೇರೆ ಸೊಳ್ಳೆಗಳು ಒಮ್ಮೆಗೆ 50ರಿಂದ 100 ಮೊಟ್ಟೆಗಳನ್ನು (ಲಾರ್ವಾ) ಇಟ್ಟರೆ ಈಡಿಸ್‌ ಮಾತ್ರ 300ಕ್ಕೂ ಹೆಚ್ಚು ಮೊಟ್ಟೆ ಇಡುತ್ತದೆ. ಹಾಗಾಗಿ ಇದರ ವಂಶಾಭಿವೃದ್ಧಿ ಅತಿ ವೇಗವಾಗಿ ಆಗುತ್ತದೆ.

ಮನೆಗಳಲ್ಲಿ ಪಾತ್ರೆ–ಪಡಗ, ತೊಟ್ಟಿ, ಟ್ಯಾಂಕ್‌ಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡುವುದು ಬೇಡ. ಸಂಗ್ರಹಿಸಿದರೂ ಅದನ್ನು ಮುಚ್ಚಿಡಬೇಕು ಎಂಬುದು ಆರೋಗ್ಯ ಇಲಾಖೆ ಮನವಿ. ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿದಾಗ ಬಹು ದಿನಗಳಿಂದ ಸಂಗ್ರಹಿಸಿಟ್ಟ ನೀರನ್ನು ಖಾಲಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ.

ಹುನಗುಂದ ತಾಲ್ಲೂಕಿನಲ್ಲಿ ಗ್ರಾನೈಟ್ ಹಾಗೂ ಕಲ್ಲು ಗಣಿಗಾರಿಕೆ ನಂತರ ಅಲ್ಲಿ ನೀರು ಸಂಗ್ರಹವಾಗಿರುವುದು ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಬಾದಾಮಿ ತಾಲ್ಲೂಕಿನಲ್ಲಿ ಉಳಿದ ಕಡೆಗೆ ಹೋಲಿಸಿದರೆ ಮಳೆ ಹೆಚ್ಚು ಬಿದ್ದಿದೆ. ಅದೂ ಕೂಡ ಆ ಭಾಗದಲ್ಲಿ ಡೆಂಗಿ ಹೆಚ್ಚಳಕ್ಕೆ ಕಾರಣ ಎಂದು ಡಾ.ದೇಸಾಯಿ ಹೇಳುತ್ತಾರೆ.

ಖಾಸಗಿ ಆಸ್‍ಪತ್ರೆಗಳಿಗೆ ಡಿಎಚ್‌ಒ ಪತ್ರ..
ಸಾಮಾನ್ಯ ಜ್ವರಕ್ಕೂ ಡೆಂಗಿ ಎಂದು ಹೆಸರಿಸಿ ಚಿಕಿತ್ಸೆ ನೀಡುವ ನೆಪದಲ್ಲಿ ಕೆಲವು ಕಡೆ ರೋಗಿಗಳಿಂದ ಹೆಚ್ಚಿನ ಹಣ ಕೀಳಲಾಗಿದೆ ಎಂಬ ಆರೋಪಗಳಿಂದಾಗಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಜುಲೈ 7ರಂದು ಡಿಎಚ್‌ಒ ಆನಂದ ದೇಸಾಯಿ ಪತ್ರ ಬರೆದಿದ್ದಾರೆ.

‘ಜಿಲ್ಲಾ ಮಟ್ಟದ ಸಮೀಕ್ಷಾ ಘಟಕದ ಪ್ರಯೋಗಾಲಯದಲ್ಲಿ ರಕ್ತ ತಪಾಸಣೆ ನಡೆಸಿ (ಎಲಿಸಾ) ಅಲ್ಲಿ ದೃಢಪಟ್ಟಲ್ಲಿ ಮಾತ್ರ ರೋಗಿಗೆ ಡೆಂಗಿಜ್ವರ ಬಂದಿದೆ ಎಂದು ಹೇಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಿ ಹೇಳುವಂತಿಲ್ಲ.

ಜ್ವರದ ಚಿಕಿತ್ಸೆಗೆ ದಾಖಲಾದವರಿಗೆ ಡೆಂಗಿ ಇರುವ ಬಗ್ಗೆ ಅನುಮಾನ ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು. ಆರೋಗ್ಯ ಕಾರ್ಯಕರ್ತರು ರೋಗಿಯ ರಕ್ತದ ಮಾದರಿ ತಂದು ಉಚಿತವಾಗಿ ತಪಾಸಣೆ ನಡೆಸಲಿದ್ದಾರೆ. ಅವರೇ ರೋಗ ಇರುವ ಬಗ್ಗೆ ದೃಢೀಕರಿಣ ನೀಡಲಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ದೇಸಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT