ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಡ್ಡಾಯಕ್ಕೆ ಮೀನಮೇಷ!

Last Updated 15 ಜುಲೈ 2017, 9:46 IST
ಅಕ್ಷರ ಗಾತ್ರ

ಬೆಳಗಾವಿ: ಪದವಿ ತರಗತಿಯಲ್ಲಿ 1ರಿಂದ 4ನೇ ಸೆಮಿಸ್ಟರ್‌ವರೆಗೆ ಕಡ್ಡಾಯವಾಗಿ ಕನ್ನಡವನ್ನು ಕಲಿಸಬೇಕೆಂದು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿ ಎರಡು ವರ್ಷ ಕಳೆದರೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈ ಆದೇಶವನ್ನು ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿದೆ ಎಂದು ಕನ್ನಡ ಅಧ್ಯಾಪಕರು ದೂರಿದ್ದಾರೆ.

ಗಡಿಭಾಗದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ವ್ಯಾಪ್ತಿ ಹೊಂದಿರುವ ವಿಶ್ವವಿದ್ಯಾಲಯವು ಕನ್ನಡ ಕಡ್ಡಾಯಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇಂಗ್ಲಿಷ್‌ಗೆ ತೋರಿಸುವಷ್ಟು ಆಸಕ್ತಿಯನ್ನು ಕನ್ನಡಕ್ಕೆ ತೋರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

ಎಲ್ಲ ಪದವಿ ಹಾಗೂ ವೃತ್ತಿ ಶಿಕ್ಷಣದ ಪದವಿಗಳಲ್ಲಿ ಕನ್ನಡ ವಿಷಯ ಕಡ್ಡಾಯಗೊಳಿಸುವಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದ್ದವು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಹೊರತುಪಡಿಸಿದರೆ ರಾಜ್ಯದ ಇತರ ಎಲ್ಲ ವಿಶ್ವವಿದ್ಯಾಲಯಗಳು ಇದನ್ನು 2015–2016ರಿಂದಲೇ ಜಾರಿಗೊಳಿಸಿದ್ದವು.

ಆದರೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಕಾಂ, ಬಿಸಿಎ, ಬಿಬಿಎ, ಬಿಎಸ್ಸಿ (ಕಂಪ್ಯೂಟರ್‌ ವಿಜ್ಞಾನ) ಪದವಿ ಹಾಗೂ ಸಿ.ಸಿ.ಜೆ (ಸರ್ಟಿಫಿಕೇಟ್‌ ಕೋರ್ಸ್‌ ಇನ್‌ ಜರ್ನಲಿಸಂ) ನಾಲ್ಕು ಸೆಮಿಸ್ಟರ್‌ವರೆಗೆ ಕನ್ನಡ ಕಡ್ಡಾಯವಾಗಲಿಲ್ಲ.

ಪಠ್ಯಕ್ರಮ ಆಯ್ಕೆಯಾಗದ ಕಾರಣ ಹಾಗೂ ಸಕಾಲದಲ್ಲಿ ಪಠ್ಯಪುಸ್ತಕ ಪೂರೈಸಲು ಸಾಧ್ಯವಾಗದ ಕಾರಣ 2015–16ರ ಬದಲು 2016–17ರಿಂದ ಜಾರಿಗೊಳಿಸುವುದಾಗಿ ಹೇಳಿತ್ತು. ಈ ಮಾತು ಹೇಳಿ ಎರಡು ವರ್ಷ ಕಳೆದರೂ ಕಡ್ಡಾಯವಾಗಿಲ್ಲ.

‘3–4ನೇ ಸೆಮಿಸ್ಟರ್‌ನಲ್ಲಿ ಕನ್ನಡವನ್ನು ಐಚ್ಛಿಕವಾಗಿ ಬೋಧಿಸಲಾಗುತ್ತಿದೆ, ಕಡ್ಡಾಯಗೊಳಿಸಿಲ್ಲ. ಕಡ್ಡಾಯಗೊಳಿಸುವ ಬಗ್ಗೆ ಇದುವರೆಗೆ ವಿಶ್ವವಿದ್ಯಾಲಯ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಕೇವಲ ಬಾಯಿ ಮಾತಿನಲ್ಲಿ ಮಾಡಿದ್ದೇವೆ ಎಂದು ಸುಳ್ಳು ಭರವಸೆ ನೀಡಲಾಗುತ್ತಿದೆ’ ಎಂದು ಕನ್ನಡ ಪ್ರಾಧ್ಯಾಪಕರು ಆರೋಪಿಸಿದ್ದಾರೆ.

ಅಂಕಪಟ್ಟಿಯಲ್ಲಿ ಸೇರಿಸಿಲ್ಲ;  2016–17ನೇ ಸಾಲಿನ 3 ಹಾಗೂ 4ನೇ ಸೆಮಿಸ್ಟರ್‌ನಲ್ಲಿ ಕನ್ನಡವನ್ನು ಐಚ್ಛಿಕವಾಗಿ ಬೋಧಿಸಲಾಗಿತ್ತು. ಪರೀಕ್ಷೆ ನಡೆಸುವುದು ಹಾಗೂ ಮೌಲ್ಯಮಾಪನ ಮಾಡುವುದನ್ನು ಆಯಾ ಕಾಲೇಜುಗಳ ಹೆಗಲಿಗೆ ಹಾಕಲಾಗಿತ್ತು. ಇದಲ್ಲದೇ, ಅಂಕಪಟ್ಟಿಯಲ್ಲಿ ಕನ್ನಡವನ್ನು ಸೇರಿಸಲಿಲ್ಲ. 

ಇತ್ತೀಚೆಗೆ ವಿಜಯಪುರದಲ್ಲಿ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಕೆಲವು ಸದಸ್ಯರು ಇದರ ಬಗ್ಗೆ ಪ್ರಸ್ತಾಪಿಸಿದರು. ಕನ್ನಡವನ್ನು ಕಡ್ಡಾಯಗೊಳಿಸಬೇಕು ಹಾಗೂ ಅಂಕಪಟ್ಟಿಯಲ್ಲಿ ಸೇರಿಸಬೇಕು ಎಂದು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದ್ದಾರೆ.

ಸೇರಿಸಲಾಗುವುದು: ‘ಕನ್ನಡ ಒಳಗೊಂಡಿರುವ ಆಧುನಿಕ ಭಾರತೀಯ ಭಾಷೆಗಳನ್ನು 4ನೇ ಸೆಮಿಸ್ಟರ್‌ವರೆಗೆ ಬೋಧಿಸಲಾಗುತ್ತಿದೆ. ಇತ್ತೀಚೆಗಷ್ಟೇ  ಪರೀಕ್ಷೆಗಳು ಮುಗಿದಿದ್ದು, ಅಂಕಪಟ್ಟಿಯಲ್ಲಿ ಕನ್ನಡವನ್ನೂ ಸೇರಿಸಲಾಗುವುದು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಆಯಾ ಕಾಲೇಜುಗಳಲ್ಲಿಯೇ ಮಾಡಲಾಗುತ್ತಿದೆ. ಅದೇ ರೀತಿ ನಮ್ಮಲ್ಲೂ ಮಾಡಲಾಗಿದೆ’ ಎಂದು ಆರ್‌ಸಿಯು ಕುಲಪತಿ ಶಿವಾನಂದ ಹೊಸಮನಿ ಹೇಳಿದರು.

* * 

ಆಧುನಿಕ ಭಾರತೀಯ ಭಾಷೆಗಳನ್ನು 4ನೇ ಸೆಮಿಸ್ಟರ್‌ವರೆಗೆ ಬೋಧಿಸಲಾಗುತ್ತಿದೆ. ಪರೀಕ್ಷೆಗಳು ಮುಗಿದಿದ್ದು, ಅಂಕಪಟ್ಟಿಯಲ್ಲಿ ಕನ್ನಡ ಸೇರಿಸಲಾಗುವುದು
ಶಿವಾನಂದ ಹೊಸಮನಿ
ಕುಲಪತಿ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT